ಬಾಡಿಗೆ ಹಣ ಕೊಟ್ಟಿಲ್ಲ, ತರಕಾರಿಗೆ ಹಣ ನೀಡಿಲ್ಲ, ಮಾತೃವಂದನಾ ಹಣ ಬರುತ್ತಿಲ್ಲ!
ಸರಕಾರದ ದುಡ್ಡು ಉಚಿತ ಗ್ಯಾರಂಟಿಗಳಿಗೆ ಬಳಕೆಯಾಗುತ್ತಿರುವುದರಿಂದ ಮತ್ತೊಂದು ಸಂಕಷ್ಟವನ್ನು ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಅನುಭವಿಸುವಂತಾಗಿದೆ. ರಾಜ್ಯದ ಅನೇಕ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ಇಲ್ಲ. ಅವು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಅವುಗಳಿಗೆ ಕಳೆದ ಎಂಟು ತಿಂಗಳುಗಳಿಂದ ಬಾಡಿಗೆ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಕಟ್ಟಡ ಮಾಲೀಕರು ಅಂಗನವಾಡಿ ಕೇಂದ್ರಗಳನ್ನು ತೆರವುಗೊಳಿಸಲು ಕಾರ್ಯಕರ್ತೆಯರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅದರಲ್ಲಿ ಹಲವು ಕಡೆಗಳಲ್ಲಿ ಕಾರ್ಯಕರ್ತೆಯರೇ ತಮ್ಮ ಸ್ವಂತ ದುಡ್ಡು ಕೊಟ್ಟು ಬಾಡಿಗೆ ಪಾವತಿಸುತ್ತಿದ್ದಾರೆ. ಈ ಮಾತನ್ನು ಬಹಳ ನೋವಿನಿಂದ ಹೇಳಿದವರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕೆ. ನಾಗರತ್ನ.
ಒಂದು ಕಡೆಯಿಂದ ತರಕಾರಿ ಬೆಲೆ ಏರುತ್ತಿರುವುದರಿಂದ ಸಾಮಾನ್ಯ ಕುಟುಂಬದಲ್ಲಿ ತರಕಾರಿಗಳನ್ನು ಖರೀದಿಸುವುದು ಹೇಗೆಂಬ ಚಿಂತೆ ಕಾಡುತ್ತಿದ್ದರೆ, ಮತ್ತೊಂದೆಡೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು, ಗರ್ಭಿನಿಯರ ಸಹಿತ ಸುಮಾರು 50 ರಿಂದ 60 ಮಂದಿ ಊಟಕ್ಕೆ ಇರುತ್ತಾರೆ. ಅವರಿಗೆ ಅಕ್ಕಿ, ಬೇಳೆ, ಬೆಲ್ಲ, ಎಣ್ಣೆಯಂತಹ ರೇಷನ್ ಸಿಗುತ್ತಿದ್ದರೂ, ಕಳೆದ ಐದು ತಿಂಗಳುಗಳಿಂದ ತರಕಾರಿಗೆ ದುಡ್ಡು ಕೊಟ್ಟಿಲ್ಲ. ಇದರಿಂದ ಪದಾರ್ಥ ಹೇಗೆ ಮಾಡುವುದು. ಇದನ್ನು ಕೂಡ ಅಂಗನವಾಡಿ ಕಾರ್ಯಕರ್ತರೇ ಹೊಂದಿಸುವ ಪರಿಸ್ಥಿತಿ ಇದೆ ಎಂದು ನಾಗರತ್ನ ಹೇಳಿದ್ದಾರೆ.
ಸರಕಾರಿ ಆಸ್ಪತ್ರೆಗಳಲ್ಲಿ ಮೊದಲ ಹೆರಿಗೆ ಮಾಡಿಸಿಕೊಂಡ ಎಲ್ಲರಿಗೂ ಮಾತೃವಂದನ ಯೋಜನೆಯಡಿ 5 ಸಾವಿರ ದುಡ್ಡು ನೀಡಬೇಕಿದೆ. ಅದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಂದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸರಕಾರ ಹೇಳುತ್ತದೆ. ಆದರೆ ಯಾರಿಗೂ ಹಣ ಬಿಡುಗಡೆಯಾಗುತ್ತಿಲ್ಲ. ಅಂತವರು ಕಾರ್ಯಕರ್ತೆಯರ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲ ಮುಜುಗರ ಅನುಭವಿಸಿ ಅಂಗನವಾಡಿ ಕಾರ್ತಕರ್ತೆಯರು ಕೆಲಸ ಮಾಡಬೇಕಿದೆ.
Leave A Reply