“ಗ್ಯಾರಂಟಿಗೆ” ದೇವಸ್ಥಾನದ ಹಣವೂ ಬೇಕಾ?
ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಸಿಗದಿದ್ದರೆ ಬೇಸರಪಡುವ ಹಾಗಿಲ್ಲ!
ಕಾಂಗ್ರೆಸ್ ಸರಕಾರ ಬಂದ ಮೇಲೆ ಈ ವಿಷಯದಲ್ಲಿ ಆಶ್ಚರ್ಯಪಡುವಂತದ್ದು ಏನೂ ಇಲ್ಲ. ಸರಿಯಾಗಿ ನೋಡಿದರೆ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗಲೇ ಧಾರ್ಮಿಕ ದತ್ತಿ ಇಲಾಖೆಯಡಿ ಒಂದು ಕಾನೂನನ್ನು ಮಾಡಬೇಕಿತ್ತು. ಆ ಕಾನೂನು ಏನೆಂದರೆ ದೇವಾಲಯಗಳ ಹಣವನ್ನು ದೇವಾಲಯಗಳ ಅಭಿವೃದ್ಧಿಗೆ ಬಳಸಬೇಕು. ಉದಾಹರಣೆಗೆ ಅತೀ ಹೆಚ್ಚು ಆದಾಯ ಬರುವ ದೇವಸ್ಥಾನಗಳ ಹಣದಲ್ಲಿ ಸಿಂಹಪಾಲನ್ನು ಆದಾಯ ಕಡಿಮೆ ಅಥವಾ ಬರದೇ ಇರುವ ದೇವಸ್ಥಾನಗಳ ಅಭಿವೃದ್ಧಿಗೆ ವಿನಿಯೋಗಿಸುವ ಮೂಲಕ ರಾಜ್ಯದ ಎಲ್ಲಾ ದೇವಾಲಯಗಳು ಅಭಿವೃದ್ಧಿಯಾಗಬೇಕು ಎನ್ನುವ ದೃಢವಾದ ಹೆಜ್ಜೆಯನ್ನು ಇಡಬೇಕಿತ್ತು. ಆದರೆ ಹಿಂದೂತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದವರು ಅಂತಹ ಏನೂ ಸಮರ್ಪಕ ನಿಯಮಗಳನ್ನು ಮಾಡಿದಂತೆ ಕಾಣುತ್ತಿಲ್ಲ. ಆದ್ದರಿಂದ ಈಗ ಕಾಂಗ್ರೆಸ್ಸನ್ನು ದೂಷಿಸಿ ಪ್ರಯೋಜನವಿಲ್ಲ. ಆದರೆ ಒಂದು ಸಮಾಧಾನದ ವಿಷಯ ಏನೆಂದರೆ ಬಿಜೆಪಿ ಸರಕಾರದಲ್ಲಿ ಯಡ್ಡಿಜಿ ಮುಖ್ಯಮಂತ್ರಿಯಾಗಿದ್ದ ಎರಡೂ ಅವಧಿಯಲ್ಲಿ ದೇವಸ್ಥಾನ, ಮಠ, ಮಂದಿರಗಳಿಗೆ ಭರಪೂರ ಅನುದಾನವನ್ನು ಘೋಷಿಸಲಾಗಿತ್ತು. ಅದರಿಂದ ಅನೇಕ ಸಣ್ಣಪುಟ್ಟ ದೇವಸ್ಥಾನಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗಿತ್ತು. ಸಿಎಂ ಆಗಿದ್ದಾಗ ಯಡ್ಡಿ ಸಾಹೇಬ್ರು ಒಮ್ಮೆ ಯಾವುದೋ ಊರಿನಲ್ಲಿ ತಂಗಿದ್ದರಂತೆ. ಬೆಳಿಗ್ಗೆ ಸ್ಥಳೀಯ ಮುಖಂಡರೊಂದಿಗೆ ವಾಕಿಂಗ್ ಹೋದರಂತೆ. ಅಲ್ಲಿ ದಾರಿಯಲ್ಲಿ ಒಂದು ಹಳೆಯ ದೇವಸ್ಥಾನ ಸಿಕ್ಕಾಗ ಜೊತೆಗಿದ್ದ ಮುಖಂಡರು ಆ ದೇವಸ್ಥಾನದ ಇತಿಹಾಸವನ್ನು ವಿವರಿಸಿದ್ದಾರೆ. ಇಷ್ಟು ಪ್ರಾಮುಖ್ಯತೆ ಇರುವ ದೇವಸ್ಥಾನ ಹೀಗೆ ಹಳೆಯದಂತೆ ಕಾಣುವುದು ಸರಿಯಿಲ್ಲ ಎಂದ ಯಡ್ಡಿಜಿ ಆಗಲೇ ಅಧಿಕಾರಿಗಳಿಗೆ ಫೋನ್ ಮಾಡಿ ಇದರ ಅಭಿವೃದ್ಧಿಗೆ ಒಂದು ಕೋಟಿ ರೂ ಬಿಡುಗಡೆ ಮಾಡಿ ಎಂದಿದ್ದಾರೆ. ಹೀಗೆ ದೇವಸ್ಥಾನಗಳ ವಿಷಯದಲ್ಲಿ ಅವರದ್ದು ಮಾತೃಮನಸ್ಸು.
ಗ್ಯಾರಂಟಿಗೆ ದೇವಸ್ಥಾನದ ಹಣವೂ ಬೇಕಾ?
ಅದನ್ನು ಸಿದ್ದು ಅವರಿಂದ ನಿರೀಕ್ಷೆ ಮಾಡುವುದು ಸರಿಯಲ್ಲ. ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗರು ತಮ್ಮ ಸಿದ್ಧಾಂತದ ಪ್ರಕಾರವೇ ನಡೆದುಕೊಳ್ಳಲು ಮುಂದಾಗಿದ್ದಾರೆ. ಅನುದಾನ ನೀಡಲು ತಯಾರಿ ನಡೆದಿದ್ದರೆ ಅದನ್ನು ನಿಲ್ಲಿಸುವುದು, ಕೆಲಸ ಆರಂಭವಾಗದಿದ್ದರೆ ಅಥವಾ 50% ಕಡಿಮೆ ಆಗಿದ್ದರೆ ಅಲ್ಲಿನ ತಟಸ್ಥಗೊಳಿಸುವುದು, ಹೀಗೆ ವಿವಿಧ ಸೂಚನೆಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡಲಾಗಿತ್ತು. ಯಾಕೆಂದರೆ ಎಲ್ಲೆಂಲ್ಲಿಂದ ಹಣ ಖರ್ಚಾಗುತ್ತಿದೆಯೋ ಅದನ್ನೆಲ್ಲಾ ನಿಲ್ಲಿಸುವ ಹೊಣೆಗಾರಿಕೆ ಕಾಂಗ್ರೆಸ್ ಸರಕಾರದ ಮೇಲಿದೆ. ಯಾಕೆಂದರೆ ಇದ್ದಬದ್ದ ಹಣವನ್ನು ಒಟ್ಟು ಮಾಡಿ ಗ್ಯಾರಂಟಿಗೆ ನೀಡಬೇಕಿರುವ ಒತ್ತಡ ಇದೆ. ಆದ್ದರಿಂದ ಇಲ್ಲಿಯೂ ಕೈ ಹಾಕಿರುವ ಸರಕಾರ ಧಾರ್ಮಿಕ ದತ್ತಿ ಇಲಾಖೆಯಿಂದ ಯಾವುದೇ ದೇವಾಲಯದ ಅಭಿವೃದ್ಧಿಗೆ ಹಣ ಖರ್ಚು ಆಗದಿರುವಂತೆ ನೋಡಿಕೊಳ್ಳುತ್ತಿದೆ. ಈ ಹಣ ಚರ್ಚು, ಮಸೀದಿಗಳ ಅಭಿವೃದ್ಧಿಗೆ ಖರ್ಚಾಗುವುದಿದ್ದರೆ ಬಹುಶ: ಇವರಿಗೆ ಬೇಸರ ಇರಲಿಕ್ಕಿಲ್ಲವೇನೊ. ಆದರೆ ದೇವಸ್ಥಾನಗಳಿಗೆ ಹೋಗುವ ಬಗ್ಗೆ ಒಬ್ಜೆಕ್ಷನ್ ಇದ್ದಿರಬಹುದು.
ಸದ್ಯ ಬೀಸುವ ದೊಣ್ಣೆಯಿಂದ ಪಾರಾದ ಕಾಂಗ್ರೆಸ್!
ಯಾವಾಗ ಇಂತಹ ಒಂದು ಸೂಚನೆಯನ್ನು ಧಾರ್ಮಿಕ ದತ್ತಿ ಇಲಾಖೆಯ ಸಚಿವರೂ ಆಗಿರುವ ರಾಮಲಿಂಗಾ ರೆಡ್ಡಿಯವರು ಕೊಟ್ಟಿದ್ದಾರೆ ಎನ್ನುವ ಮಾಹಿತಿ ಹೊರಗೆ ಬಂತೋ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಮೂಡಿಬಂತು. ಬಿಜೆಪಿಯ ಯತ್ನಾಳ್ ಅಂತವರು ಕೂಡ ಸಿದ್ದರಾಮಯ್ಯನವರದ್ದು ಹಿಂದೂ ವಿರೋಧಿ ನೀತಿ ಬಯಲಿಗೆ ಬಂದಿದೆ ಎಂದು ಮಾಧ್ಯಮಗಳ ಮುಂದೆ ಹೇಳಲು ಶುರು ಮಾಡಿದರು. ನಿತ್ಯ ಏನಾದರೂ ಹೇಳಿದರೆ ಮಾತ್ರ ಅಪ್ಪಿತಪ್ಪಿ ವಿಪಕ್ಷ ನಾಯಕನ ಸ್ಥಾನಮಾನ ಸಿಕ್ಕಿದರೂ ಸಿಗಬಹುದು ಎನ್ನುವ ಆಸೆ ಅವರಿಗೆ ಇದ್ದೇ ಇದೆ. ಹೀಗೆ ಈ ವಿಷಯ ಹೇಗೆ ಬಹಿರಂಗಗೊಂಡಿತು ಎಂದು ಟೆನ್ಷನಿಗೆ ಬಿದ್ದ ರೆಡ್ಡಿಗಾರು ತಕ್ಷಣ “ನಾವೇನೂ ಹಣ ಬಿಡುಗಡೆ ಮಾಡಬೇಡಿ ಎಂದಿಲ್ಲ. ಎಷ್ಟು ಹಣ ಯಾವ ದೇವಸ್ಥಾನಕ್ಕೆ ಬಿಡುಗಡೆ ಮಾಡಲು ಬಾಕಿ ಇದೆ. ಎಷ್ಟು ಹಣ ನಮ್ಮ ಇಲಾಖೆಯಲ್ಲಿ ಯಾವೆಲ್ಲ ದೇವಸ್ಥಾನಗಳಿಗೆ ಹೋಗಲು ಇದೆ” ಎಂದು ಮಾಹಿತಿ ಕೇಳಿದ್ದು ಮಾತ್ರ. ನಾವೇನೂ ಹಣ ಬಿಡುಗಡೆ ಮಾಡಬೇಡಿ ಎಂದು ಹೇಳಿಲ್ಲ ಎಂದು ಬೇರೆ ವರಸೆ ತೋರಿಸಿದ್ದಾರೆ. ಸದ್ಯ ಹೊರನೋಟಕ್ಕೆ ಕಾಂಗ್ರೆಸ್ ದೇವಸ್ಥಾನಗಳಿಗೆ ಹಣ ಬಿಡುಗಡೆ ಮಾಡುವಲ್ಲಿ ಹಿಂದೆ ಮುಂದೆ ನೋಡುತ್ತಿಲ್ಲ ಎಂದು ನಿಮಗೆ ಅನಿಸಬಹುದು. ಆದರೆ ಒಳಾರ್ಥದಲ್ಲಿ ಲಿಖಿತವಲ್ಲದಿದ್ದರೂ ಮೌಖಿಕವಾಗಿ ಅಧಿಕಾರಿಗಳಿಗೆ ಏನಾದರೂ ಸೂಚನೆ ಹೋಗಿಯೇ ಇರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಯಾವೆಲ್ಲ ಇಲಾಖೆಯಲ್ಲಿ ಹಣ ಇದೆಯೋ ಅದನ್ನು ಹೇಗೆ ಗ್ಯಾರಂಟಿಗೆ ತಿರುಗಿಸುವುದು ಎಂದು ಇಲಾಖೆಯ ಎಲ್ಲಾ ಸಚಿವರು ಕಾಯುತ್ತಲೇ ಇದ್ದಾರೆ.
ಒಂದು ವಿಷಯವನ್ನು ಕಾಂಗ್ರೆಸ್ ಸರಕಾರ ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ ದೇವಸ್ಥಾನಗಳ ಹುಂಡಿಯಲ್ಲಿ ಬಿದ್ದ ಕಾಣಿಕೆ ಭಕ್ತರ ನಂಬಿಕೆಗೆ ಸಂಬಂಧಪಟ್ಟಿರುವುದು. ಅದು ದೇವರಿಗೆ ತಲುಪಲಿ ಎಂದು ಅವರು ಪ್ರಾರ್ಥಿಸಿ ಹಾಕಿರುತ್ತಾರೆ. ದೇವರಿಗೆ ಹಣ ಬೇಕಾಗಿಲ್ಲ. ಆದರೆ ದೇವಸ್ಥಾನಗಳಿಗೆ ಹಣ “ಗ್ಯಾರಂಟಿ” ಬೇಕು!!
Leave A Reply