ಕಾಂಗ್ರೆಸ್ ಸರ್ಕಾರದಿಂದ ಮೀನುಗಾರರಿಗೆ ಅನ್ಯಾಯ:ಶಾಸಕ ಕಾಮತ್
Posted On October 7, 2023
ಮೀನುಗಾರಿಕೆ ಎಂಬುದು ಕರಾವಳಿ ಭಾಗದ ಪ್ರಮುಖ ಜೀವನೋಪಾಯ ಕಾಯಕ. ಮೀನುಗಾರರು ಈ ಭಾಗದ ಅತ್ಯಂತ ಶ್ರಮ ಜೀವಿ ಸಮುದಾಯ. ಸಮುದ್ರದ ಮೀನುಗಾರಿಕೆಯು ಅಪಾಯಕಾರಿ ವೃತ್ತಿಯಾಗಿದ್ದು ಅದನ್ನೇ ಸವಾಲಾಗಿ ಸ್ವೀಕರಿಸಿ ಬದುಕು ನಡೆಸಿಕೊಂಡು ಹೋಗುವವರು ಮೀನುಗಾರರು. ಈ ಸಮುದಾಯಗಳ ಸ್ವಾವಲಂಬಿ ಬದುಕಿಗೆ ಭದ್ರತೆ, ಆರ್ಥಿಕ ಸಹಾಯ, ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರುವುದು ಸರ್ಕಾರಗಳ ಕರ್ತವ್ಯ. ಆ ಮೂಲಕ ಕಡಲ ಮಕ್ಕಳ ಅಭಿವೃದ್ಧಿಗೆ ಎಲ್ಲ ಸರ್ಕಾರಗಳು ಬದ್ಧವಾಗಿರಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಪತ್ರಿಕಗೊಷ್ಠಿಯಲ್ಲಿ ಹೇಳಿದರು.
ಅಂತಹ ಮೀನುಗಾರರ ಸುಭದ್ರ ಬದುಕಿಗೆ ನಮ್ಮ ಬಿಜೆಪಿ ಸರ್ಕಾರದ ಅವಧಿಯ 2023 ರ ಫೆಬ್ರುವರಿ ಬಜೆಟ್ ನಲ್ಲಿ ಕೆಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿತ್ತು. ಅವು ಜಾರಿಯಾಗುವ ಹಂತದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ 2023ರ ಜುಲೈನಲ್ಲಿ ಹೊಸ ಬಜೆಟ್ ಘೋಷಿಸಿತ್ತು. ಆದರೆ ನಮ್ಮ ಸರ್ಕಾರ ಘೋಷಿಸಿದ್ದ ಬಹುತೇಕ ಎಲ್ಲಾ ವಿಶೇಷ ಯೋಜನೆಗಳನ್ನು ಕಡೆಗಣಿಸುವ ಮೂಲಕ ಮೀನುಗಾರರ ಬದುಕಿಗೆ ಹೊಡೆತ ನೀಡಿದ್ದಲ್ಲದೇ, ಇತ್ತೀಚೆಗೆ ಕಾಂಗ್ರೆಸ್ಸಿಗರು ತಮ್ಮ ಸರ್ಕಾರವು 100 ದಿನ ಪೂರೈಸುವಷ್ಟರಲ್ಲಿ ಮೀನುಗಾರರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ಈಡೇರಿಸಿದೆ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಕಾಂಗ್ರೆಸ್ ಸರ್ಕಾರ ಮೀನುಗಾರರ ಭರವಸೆ ಈಡೇರಿಸಿದ್ದು ಅಲ್ಲ, ಬದಲಿಗೆ ಕಡೆಗಣಿಸಿದ್ದು!
ಕಾಂಗ್ರೆಸ್ ಪಕ್ಷದ ರಾಷ್ಟೀಯ ನಾಯಕ ರಾಹುಲ್ ಗಾಂಧಿಯವರು ಚುನಾವಣಾ ಸಂದರ್ಭ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಜಿ ಶಂಕರ್ ಸಭಾಂಗಣದಲ್ಲಿ ಮೀನುಗಾರರೊಂದಿಗೆ ನಡೆಸಿದ ಸಂವಾದದಲ್ಲಿ ನೀಡಿದ್ದ ಸುಳ್ಳಿನ ಭರಪೂರ ಆಶ್ವಾಸನೆಗಳಲ್ಲಿ ಯಾವ ಭರವಸೆ ತಾನೇ ಈಡೇರಿದೆ ಎಂಬುದನ್ನು ಕಾಂಗ್ರೆಸ್ ನವರು ತಿಳಿಸಬೇಕು.
1. ಪ್ರತಿ ಮೀನುಗಾರರಿಗೆ 10 ಲಕ್ಷದ ಇನ್ಸೂರೆನ್ಸ್ ನೀಡುತ್ತೇವೆ
2. ಪ್ರತಿ ಲೀಟರ್ ಡೀಸೆಲ್ ಗೆ 25 ರೂ ಸಬ್ಸಿಡಿಯಂತೆ ಪ್ರತಿ ದಿನ 500 ಲೀಟರ್ ಡಿಸೇಲ್ ನೀಡುತ್ತೇವೆ.
3. ನಾವು ಅಧಿಕಾರಕ್ಕೆ ಬಂದ ಕೂಡಲೇ ಡ್ರಜ್ಜಿಂಗ್ ಸಮಸ್ಯೆ ಬಗ್ಗೆ ಮೀನುಗಾರರ ಜೊತೆಗೆ ಚರ್ಚಿಸಿ ಪರಿಹಾರ ಕಂಡು ಹಿಡಿಯುತ್ತೇವೆ, ಮತ್ತು ನಾನು ವೈಯಕ್ತಿಕವಾಗಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಇದಕ್ಕೆ ಪರಿಹಾರ ಹುಡುಕುತ್ತೇನೆ.
4. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ MNC ಕಂಪೆನಿಗಳು ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಗಟ್ಟುತ್ತೇವೆ.
5. ರೈತರು ಭೂಮಿಯಲ್ಲಿ ಕೃಷಿ ಮಾಡುವಂತೆ ಮೀನುಗಾರರು ಸಮುದ್ರದಲ್ಲಿ ಕೃಷಿ ಮಾಡುತ್ತಾರೆ. ರೈತರಿಗೆ ಸಿಗುವ ಸೌಲಭ್ಯಗಳು ಮೀನುಗಾರರಿಗೂ ಸಿಗುವ ವ್ಯವಸ್ಥೆ ಕಲ್ಪಿಸುತ್ತೇವೆ.
6. ಸಮುದ್ರದಲ್ಲಿ ಬೋಟ್ ಮುಳುಗಡೆ, ಡಿಕ್ಕಿ, ಅಥವಾ ಪ್ರಕೃತಿ ವಿಕೋಪದಲ್ಲಿ ಅಪಘಾತವಾಗುವ ಸಂದರ್ಭದಲ್ಲಿ ಉಚಿತ ಸೀ ಅಂಬ್ಯುಲೆನ್ಸ್ ಸೌಲಭ್ಯ ಒದಗಿಸುತ್ತೇವೆ.
ಇವೆಲ್ಲ ರಾಹುಲ್ ಗಾಂಧಿಯವರ ಸುಳ್ಳಿನ ಭರವಸೆಯಾದರೆ ರಾಜ್ಯ ಕಾಂಗ್ರೆಸ್ ಸರ್ಕಾರವಂತೂ ತನ್ನ ಮೊದಲ ಬಜೆಟ್‌ನಲ್ಲಿ ಮೀನುಗಾರ ಮಹಿಳೆಯರಿಗೆ ರೂ.3 ಲಕ್ಷ ತನಕ ಬಡ್ಡಿ ರಹಿತ ಸಾಲ ಘೋಷಿಸಿ ಇವತ್ತಿನವರೆಗೂ ಅದನ್ನು ಜಾರಿಗೊಳಿಸಿಲ್ಲ. ಇದು ಕೇವಲ ಬಜೆಟ್ ನ ಘೋಷಣೆಯಾಗಿ ಕಡತದಲ್ಲೇ ಉಳಿದಿದ್ದು ಇದುವರೆಗೂ ಕರಾವಳಿಯ ಒಬ್ಬೇ ಒಬ್ಬ ಮೀನುಗಾರ ಮಹಿಳೆಯೂ ಈ ಯೋಜನೆಯ ಫಲಾನುಭವಿಯಾಗಿಲ್ಲ.
ಇವೆಲ್ಲ ಭರವಸೆ ಈಡೇರಿದೆಯೇ? ಅಷ್ಟಕ್ಕೂ ಕಾಂಗ್ರೆಸ್ ಸರ್ಕಾರ ತನ್ನ ಬಜೆಟ್ ನಲ್ಲಿ ಮೀನುಗಾರರ ಬದುಕಿಗೆ ಉಪಯೋಗವಾಗುವ ಯಾವ ಹೊಸ ಯೋಜನೆಗಳನ್ನು ಘೋಷಿಸಿದೆ? ನಮ್ಮ ಸರ್ಕಾರದ ಬಜೆಟ್ ನಲ್ಲಿ ಘೋಷಿಸಿದ್ದ ಯೋಜನೆಗಳನ್ನೇ ಮುಂದುವರಿಸಿದ್ದು ಅಥವಾ ಮೀನುಗಾರರಿಗೆ ಅಗತ್ಯವಾಗಿದ್ದ ನಮ್ಮ ಸರ್ಕಾರದ ಯೋಜನೆಗಳಿಗೆ ಅನುದಾನ ನೀಡದೇ ಕಡೆಗಣಿಸಿದ್ದು ಇದಿಷ್ಟು ಮಾತ್ರ ಕಾಂಗ್ರೆಸ್ ಸರಕಾರ ಸಾಧನೆಯಾಗಿದೆ.
ಹಾಗೆ ನೋಡಿದರೆ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಗೆ ಮೂರು ವರ್ಷಗಳ ಅವಧಿಯಲ್ಲಿ ಇದುವರೆಗೂ 16 ಕೋಟಿ 77 ಲಕ್ಷ ಸಬ್ಸಿಡಿ ದೊರೆತಿದೆ. ಅದರಲ್ಲಿ ಮೀನು ಮಾರಾಟಕ್ಕೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಖರೀದಿ, ಹೊಸ ಮಂಜುಗಡ್ಡೆ ಸ್ಥಾವರ ನಿರ್ಮಾಣಕ್ಕೆ ಹಾಗೂ ಹಳೆಯ ಮಂಜುಗಡ್ಡೆ ಸ್ಥಾವರಗಳ ಆಧುನೀಕರಣಕ್ಕೆ, ಆಳ ಸಮುದ್ರ ಮೀನುಗಾರಿಕೆ ದೋಣಿ ಖರೀದಿಗೆ, ಶಾಖ ನಿರೋಧಕ ವಾಹನ (ರೆಫ್ರಿಜರೇಟರ್ ವೆಹಿಕಲ್), F.R.P. ನಾಡದೋಣಿ ಖರೀದಿಗೆ, ಸಂವಹನ ಸಾಧನಗಳಿಗೆ, ಸುರಕ್ಷಾ ಸಾಧನೆಗಳಿಗೆ, ಹೀಗೆ ಹತ್ತು ಹಲವು ಯೋಜನೆಗಳಿಗೆ ಈ ಸಬ್ಸಿಡಿಯು ಉಪಯೋಗವಾಗಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೀನುಗಾರರ ಬಗ್ಗೆ ಇರುವ ಬದ್ಧತೆಗೆ ಸಾಕ್ಷಿ. ಇನ್ನು ರಾಜ್ಯದಲ್ಲಿ ನಮ್ಮ ಸರ್ಕಾರದ ಅವಧಿಯ ಬಜೆಟ್ ಹಾಗೂ ಕಾಂಗ್ರೆಸ್ ಸರ್ಕಾರದ ಬಜೆಟನ್ನು ಹೋಲಿಸಿ ನೋಡಿದರೆ ಮೀನುಗಾರ ಸಮುದಾಯಕ್ಕೆ ಬಿಜೆಪಿ ನೀಡಿದ ಕೊಡುಗೆ ಏನು? ಕಾಂಗ್ರೆಸ್ ಮಾಡಿದ ಅನ್ಯಾಯವೇನು? ಎಂಬುದು ಅರಿವಾಗುತ್ತದೆ ಎಂದು ಶಾಸಕ ಕಾಮತ್ ಹೇಳಿದರು.
ಬಿಜೆಪಿ ಸರಕಾರದ ಬದ್ಧತೆ ಹಾಗೂ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷಕ್ಕೆ ಸಾಕ್ಷಿ ಈ ಬಜೆಟ್:
ನಮ್ಮ ಬಜೆಟ್ ನಲ್ಲಿ ನಾಡದೋಣಿ ಮೀನುಗಾರರಿಗೆ ಪೆಟ್ರೋಲ್/ ಡೀಸೆಲ್ ಚಾಲಿತ ಇಂಜಿನ್ ಗಳ ಖರೀದಿಗೆ 50 ಸಾವಿರ ಸಹಾಯಧನ ನೀಡುವ ಕಾರ್ಯಕ್ರಮಕ್ಕೆ 40 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರದ ಬಜೆಟ್ ನಲ್ಲಿ ಈ ಹಿಂದಿನ 40 ಕೋಟಿಯಲ್ಲಿ 20 ಕೋಟಿ ಕಡಿತಗೊಳಿಸಿ ಉಳಿದ 20 ಕೋಟಿಯನ್ನು ಮಾತ್ರ ನೀಡಲಾಗಿದೆ.
ನಮ್ಮ ಬಜೆಟ್ ನಲ್ಲಿ ಮೀನುಗಾರರ ಹಾಗೂ ಅವರ ದೋಣಿಗಳ ಸುರಕ್ಷತಾ ದೃಷ್ಟಿಯಿಂದ ಇಸ್ರೋ ನಿರ್ಮಿತ ಜಿಪಿಎಸ್ ಸಂವಹನ ವ್ಯವಸ್ಥೆಯನ್ನು ಎಲ್ಲಾ ಯಾಂತ್ರೀಕೃತ ದೋಣಿಗಳಲ್ಲಿ ಅಳವಡಿಸಿ ಆಳ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ದೋಣಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವ ಯೋಜನೆಗೆ 17 ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರದ ಬಜೆಟ್ ನಲ್ಲಿ ಈ ಯೋಜನೆಗೆ ಯಾವುದೇ ಅನುದಾನ ಒದಗಿಸದೇ ಮೀನುಗಾರರ ಸುರಕ್ಷತೆಯನ್ನೇ ಕಡೆಗಣಿಸಿದ್ದು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.
ನಮ್ಮ ಬಜೆಟ್ ನಲ್ಲಿ ಮೀನುಗಾರರ ದೋಣಿಗಳಿಗಾಗಿ ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಡೀಸೆಲ್ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್ ಗಳಿಂದ 2 ಲಕ್ಷ ಕಿಲೋ ಲೀಟರ್ ಗಳವರೆಗೆ ಹೆಚ್ಚಿಸಲಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರಕಾರ ಅದೇ ಯೋಜನೆಯನ್ನು ಮುಂದುವರಿಸಿದೆ ಹೊರತು ಯಾವುದೇ ಹೆಚ್ಚುವರಿ ಅನುದಾನ ನೀಡಿಲ್ಲ.
ಮತ್ಸ್ಯಾಶ್ರಯ ಯೋಜನೆಯಡಿಯಲ್ಲಿ ವಸತಿ ರಹಿತ ಮೀನುಗಾರರಿಗೆ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿತ್ತು. ಕಾಂಗ್ರೆಸ್ ಸರಕಾರದಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವನೆಯೇ ಇಲ್ಲ.
ನಮ್ಮ ಬಜೆಟ್ ನಲ್ಲಿ ಮೀನಿನ ಸಂತತಿ ಕ್ಷೀಣಿಸುತ್ತಿರುವುದರಿಂದಾಗಿ ಬಲಿತ ಬಿತ್ತನೆ ಮೀನು ಮರಿಗಳನ್ನು ಕೆರೆ ಹಾಗೂ ಹಿನ್ನೀರು ಪ್ರದೇಶದಲ್ಲಿ ಬಿತ್ತನೆ ಮಾಡುವ ಯೋಜನೆಗೆ 20 ಕೋಟಿ ಅನುದಾನವನ್ನು ಒದಗಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರದ ಬಜೆಟ್ ನಲ್ಲಿ ಈ ಯೋಜನೆಗೆ ಯಾವುದೇ ಅನುದಾನ ಒದಗಿಸದೇ ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
ನಮ್ಮ ಬಜೆಟ್ ನಲ್ಲಿ ಸಿಗಡಿ ಉತ್ಪನ್ನಗಳ ರಫ್ತು ಪ್ರೋತ್ಸಾಹಿಸಲು ಕೇಂದ್ರ ಆಯವ್ಯಯದಲ್ಲಿ ರಫ್ತು ಸುಂಕವನ್ನು ಕಡಿಮೆ ಮಾಡಿ, ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ರಾಯಚೂರು, ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಿಗಡಿ ಕೃಷಿ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವ ಬಗ್ಗೆ ಯೋಜನೆ ಮಾಡಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಬಜೆಟ್ ನಲ್ಲಿ ಈ ಅಂಶವನ್ನು ಕಡೆಗಣಿಸಲಾಗಿದೆ.
ಅಲ್ಲದೇ ಪ್ರಸ್ತುತ ಕೇಂದ್ರ ಬಿಜೆಪಿ ಸರ್ಕಾರದ ನೂತನ ಯೋಜನೆಯಾದ “ಪಿ.ಎಂ ವಿಶ್ವಕರ್ಮ” ಅಡಿಯಲ್ಲಿ ಮೀನುಗಾರರಿಗೆ boat building ಮತ್ತು ಮೀನುಗಾರಿಕಾ ಬಲೆಗೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ಘೋಷಣೆಯಾಗಿದ್ದು ಸದ್ಯದಲ್ಲೇ ಜಾರಿಯಾಗಲಿದೆ.
ಇನ್ನು ರಾಜ್ಯದ 8 ಮೀನುಗಾರಿಕೆ ಬಂದರುಗಳ ನ್ಯಾವಿಗೇಶನ್ ಚಾನೆಲ್ ಗಳಲ್ಲಿ ಮೀನುಗಾರಿಕೆ ದೋಣಿಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಹೂಳೆತ್ತುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 20 ಕೋಟಿ ಅದರಲ್ಲೂ ಮಂಗಳೂರಿಗೆ 3.9 ಕೋಟಿಯನ್ನು ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಂಜೂರು ಮಾಡಿ ಆಡಳಿತಾತ್ಮಕ ಅನುಮೋದನೆಯನ್ನೂ ಪಡೆಯಲಾಗಿತ್ತು (ದಾಖಲೆಗಳನ್ನು ಲಗತ್ತಿಸಲಾಗಿದೆ). ನ್ಯಾಯಾಲಯದ ದಾವೆಗೆ ಸಂಬಂಧಿಸಿ ಕಾಮಗಾರಿ ವಿಳಂಬವಾಗಿ, ನಂತರ ಜೂನ್ ನಲ್ಲಿ ಕಾರ್ಯಾದೇಶವಾಗಿತ್ತು. ಆಗ ಮಳೆಗಾಲವಾದ್ದರಿಂದ ಸೆಪ್ಟೆಂಬರ್ ನಂತರ ಕಾಮಗಾರಿ ಆರಂಭವಾಗಲಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಬಜೆಟ್ ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವನ್ನೇ ಮಾಡದೇ ಕಡೆಗಣಿಸಿದ್ದಲ್ಲದೇ “ಹೂಳೆತ್ತುವ ಕಾಮಗಾರಿಗೆ 3.9 ಕೋಟಿಯನ್ನು ಮಂಜೂರು ಮಾಡಿದ್ದೇವೆ. ಶೀಘ್ರದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಿದ್ದೇವೆ” ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಮೀನುಗಾರ ಸಮುದಾಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ನೀಡದೇ ಕೇವಲ ನಮ್ಮ ಸರ್ಕಾರದ ಯೋಜನೆಗಳನ್ನೇ ಮುಂದುವರಿಸಿದ್ದು ಹಾಗೂ ಮೀನುಗಾರರ ಸುರಕ್ಷತೆ ಹಾಗೂ ಆರ್ಥಿಕ ಭದ್ರತೆಯಂತಹ ಅತ್ಯುತ್ತಮ ಯೋಜನೆಗಳಿಗೆ ಅನುದಾನ ಒದಗಿಸದೇ ಅವರ ಬದುಕನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಸರಕಾರ ಸಾಧನೆ. ಇವೆಲ್ಲದರ ಸಮಗ್ರ ಚಿತ್ರಣ ದಾಖಲೆಗಳ ಸಮೇತ ಎಲ್ಲರ ಮುಂದೆ ಇದೆ. ಯಾರು ಬೇಕಾದರೂ ಇದನ್ನು ಪರಾಮರ್ಶೆ ನಡೆಸಿ ನೋಡಬಹುದು.
ಎಲ್ಲಾ ಸವಲತ್ತುಗಳಿಂದಲೂ ಮೀನುಗಾರರನ್ನು ಕಡೆಗಣಿಸಿ ಈಗ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದರೆ ಇದಕ್ಕಿಂತ ಹಾಸ್ಯಾಸ್ಪದ ಇನ್ನೇನು ಇರಲು ಸಾಧ್ಯ? ಅಷ್ಟಕ್ಕೂ ಇವರ ಸುಳ್ಳನ್ನು ಯಾರೂ ಸಹ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಇದು ಬುದ್ಧಿವಂತರ ಜಿಲ್ಲೆ ಎಂದು ಶಾಸಕ ವೇದವ್ಯಾಸ್ ಕಾಮತ್ ಪತ್ರಿಕಾಗೋಷ್ಥಿಯಲ್ಲಿ ಹೇಳಿದರು.
- Advertisement -
Trending Now
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
ರಸ್ತೆ ಸುರಕ್ಷತೆ ಮತ್ತು ಸೈಬರ್ ಅಪರಾಧದ ಕುರಿತು ಜಾಗೃತಿ -ಅನುಪಮ್ ಅಗರ್ವಾಲ್
September 27, 2024
Leave A Reply