ವೈಟ್ ಮನಿಯಾದರೆ ತಿರುಗಿ ಬರುತ್ತೆ ಹೆದರಿಕೆ ಯಾಕೆ?
ಕಾಂಗ್ರೆಸ್, ಆಪ್ ಮುಖಂಡರು ಈ ಆದಾಯ ತೆರಿಗೆ ಇಲಾಖೆಯ ದಾಳಿಗಳ ಬಗ್ಗೆ ಹೇಳುವ ಏಕೈಕ ಮಾತು ಎಂದರೆ ಭಾರತೀಯ ಜನತಾ ಪಾರ್ಟಿಯವರು ಐಟಿ ಇಲಾಖೆಯನ್ನು ಬಳಸುತ್ತಿದ್ದಾರೆ. ಓಕೆ, ಕಾಂಗ್ರೆಸ್ ಮತ್ತು ಆಪ್ ಹೇಳಿದ್ದರಲ್ಲಿ ಸತ್ಯ ಇದೆ ಎಂದೇ ಇಟ್ಟುಕೊಳ್ಳೋಣ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಳಸಿಕೊಂಡಿರಬಹುದು. ಆದರೆ ಎಲ್ಲೆಲ್ಲಿ ದಾಳಿ ನಡೆದಿದೆಯಲ್ಲ, ಅಲ್ಲೆಲ್ಲಾ ಸಿಕ್ಕಿರುವುದು ಚಿಲ್ಲರೆ ಹಣವಲ್ಲವಲ್ಲ. ನಲ್ವತ್ತು ಕೋಟಿ, ಐವತ್ತು ಕೋಟಿ. ಎಲ್ಲಿ ಕೈ ಹಾಕಿದರೂ ಕೋಟಿಗಟ್ಟಲೆ ಹಣ. ಹಾಗಾದರೆ ಆ ಹಣ ಎಲ್ಲಿಂದ ಮತ್ತು ಹೇಗೆ ಬಂತು ಎನ್ನುವುದರ ಬಗ್ಗೆ ಯಾಕೆ ಯಾರೂ ಉತ್ತರ ಕೊಡುತ್ತಿಲ್ಲ. ಐಟಿ ಇಲಾಖೆಯನ್ನು ಕೇಂದ್ರ ಸರಕಾರ ಬಳಸಿರುವುದರ ಬಗ್ಗೆ ಯಾವುದೇ ದಾಖಲೆ ಕಾಂಗ್ರೆಸ್ ಬಳಿ ಇಲ್ಲ. ಆದರೆ ಕಾಂಗ್ರೆಸ್ಸಿಗರ ಆಪ್ತರ ಮನೆಗಳಲ್ಲಿ ಸಿಗುತ್ತಿರುವ ಕೋಟ್ಯಾಂತರ ರೂಪಾಯಿ ಮಾತ್ರ ಎಲ್ಲರ ಕಣ್ಣಿಗೆ ರಾಚುವಂತೆ ಕಾಣುತ್ತಿದೆಯಲ್ಲ. ಇದು ಸತ್ಯವಲ್ಲವೇ? ಇದರಲ್ಲಿ ಯಾವ ಅನುಮಾನವೂ ಇಲ್ಲವಲ್ಲ. ಒಂದು ಫೋಟೋದಲ್ಲಿ ಬರಲಾಗದಷ್ಟು ಕಂತೆ ಕಂತೆ ಹಣ ಸಿಗುತ್ತಿದೆ. ಮೂರು ನಿಮಿಷದ ವಿಡಿಯೋದೊಳಗೆ ತೋರಿಸಲು ಸಾಧ್ಯವಾಗದಷ್ಟು ಹಣದ ಬಂಡಲ್ ಗಳು ದೊರಕುತ್ತಿವೆ. ಲೆಕ್ಕ ಮಾಡಲು ಒಂದೆರಡು ಮಿಶಿನ್ ಗಳು ಸಾಕಾಗುತ್ತಿಲ್ಲ. ಮಿಶಿನ್ ನಲ್ಲಿ ಲೆಕ್ಕ ಮಾಡುತ್ತಾ ಅಧಿಕಾರಿಗಳ ಕೈ ನೋಯುತ್ತಿದೆ. ಹಣವನ್ನು ಬಾಕ್ಸಿನಲ್ಲಿ ಪ್ಯಾಕ್ ಮಾಡಲು ಹೆಚ್ಚುವರಿ ಜನ ಬೇಕಾಗುತ್ತಿದ್ದಾರೆ. ಹಣವನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಲು ತೆಗೆದುಕೊಂಡು ಹೋಗುವಾಗ ಅಲ್ಲಿನ ಲಾಕರ್ ಗಳು ಸಾಕಾಗುತ್ತಿಲ್ಲ. ಇದೆಲ್ಲವನ್ನು ಟಿವಿಗಳು ದಿನಗಟ್ಟಲೆ ತೋರಿಸುತ್ತಾ ಇದ್ದಾರೆ. ನಿರೂಪಕರು ಗಂಟಲು ಹರಿದುಕೊಂಡು ಮಾತನಾಡುತ್ತಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಕಾಂಗ್ರೆಸ್ಸಿಗರು ಶಬ್ದ ತೆಗೆಯುತ್ತಿಲ್ಲ. ಇಷ್ಟೆಲ್ಲಾ ನೋಡಿದ ಮೇಲೆ ಅವರು ಹೇಳುವ ಕಟ್ಟಕಡೆಯ ಮಾತು ” ಬಿಜೆಪಿ ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ”
ಯಾಕೆ ಅಷ್ಟು ಕ್ಯಾಶ್ ಇಟ್ಟುಕೊಳ್ಳಬೇಕು!
ಒಬ್ಬ ಗುತ್ತಿಗೆದಾರನ ಮನೆಯಿಂದ 42 ಕೋಟಿ ರೂಪಾಯಿ ಸಿಗುತ್ತದೆ ಎಂದರೆ ಅದು ಲಂಚದ ಹಣ ಅಥವಾ ಅದನ್ನು ಕಣ್ಣುಮುಚ್ಚಿ ಕಪ್ಪು ಹಣ ಎಂದು ಹೇಳಬಹುದು. ಯಾಕೆಂದರೆ ಯಾವ ಉದ್ಯಮಿ ಕೂಡ ಇವತ್ತಿನ ಆಧುನಿಕ ಕಾಲದಲ್ಲಿ ಅಷ್ಟು ಹಣವನ್ನು ವೈಟ್ ರೂಪದಲ್ಲಿ ಮನೆಯಲ್ಲಿ ಇಡಲು ಹೋಗುವುದಿಲ್ಲ. ಯಾಕೆಂದರೆ ಅದು ಸಾಧ್ಯವೂ ಇಲ್ಲ. ಯಾಕೆಂದರೆ 50 ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚು ಹಣವನ್ನು ಕ್ಯಾಶ್ ವ್ಯವಹಾರದಲ್ಲಿ ಚಲಾಯಿಸುವ ಮೊದಲು ಇವತ್ತಿನ ಕಾಲಘಟ್ಟದಲ್ಲಿ ಉದ್ಯಮಿಗಳು ಹಿಂದೆ ಮುಂದೆ ನೋಡುತ್ತಾರೆ. ಹಾಗಿರುವಾಗ 42 ಕೋಟಿ ಕ್ಯಾಶ್ ಹೊರಗೆ ಬಂದಿದೆ ಎಂದರೆ ನಮ್ಮ ರಾಜ್ಯವನ್ನು ಲೂಟಲು ಸಂಚು ನಡೆಯುತ್ತಿದೆ ಎಂದೇ ಅರ್ಥ. ಇನ್ನು ಕೆಲವು ಕಾಂಗ್ರೆಸ್ಸಿಗರು ಒಂದು ಹೆಜ್ಜೆ ಮುಂದೆ ಹೋಗಿ ” ಅವರು ಉದ್ಯಮಿಗಳು, ಅವರ ಮನೆಯಲ್ಲಿ ಅಷ್ಟು ಹಣ ಇರಬಾರದಾ?” ಎಂದು ಕೇಳುತ್ತಾರೆ. ಬೇಕಾದರೆ ಅಂಬಾನಿ, ಅದಾನಿ ಮನೆಯಲ್ಲಿಯೇ ಈ ಕಾಂಗ್ರೆಸ್ಸಿಗರು ಹೋಗಿ ನೋಡಿ ಬರಲಿ. ಆ ಉದ್ಯಮಿಗಳು ವಿಶ್ವದ ಟಾಪ್ ಸ್ಥಾನದಲ್ಲಿ ಇದ್ದಾರೆ. ಯಾವುದೋ ಸಣ್ಣ ಗುತ್ತಿಗೆದಾರನೊಬ್ಬ ತನ್ನ ಮನೆಯಲ್ಲಿ 42 ಕೋಟಿ ಇಟ್ಟುಕೊಳ್ಳುವುದು ಸಕ್ರಮವಾದರೆ ಅಂಬಾನಿ, ಅದಾನಿಗಳ ಮನೆಯಲ್ಲಿ ಸಾವಿರಾರು ಕೋಟಿ ಹಾಗೆ ಬಿದ್ದುಕೊಂಡಿರಬೇಕು. ಆದರೆ ಇರತ್ತಾ, ಇರಲ್ಲ. ಯಾಕೆಂದರೆ ಯಾರೂ ಆ ಪ್ರಮಾಣದಲ್ಲಿ ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳುವ ಸಾಧ್ಯತೆ ಇಲ್ಲ. ಆದರೂ ಯಾವುದೇ ನಾಚಿಕೆ ಇಲ್ಲದೇ ಆ ಕಪ್ಪು ಹಣವನ್ನು ವಹಿಸಿಕೊಂಡು ಬಿಜೆಪಿ ಐಟಿ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂದು ಹೇಳುತ್ತಾರಲ್ಲ, ಅದೇ ದುರ್ದೈವ.
ಸರಕಾರ ನಿಯಮ ಮಾಡಲಿ!
ಸದ್ಯ ಕೇಂದ್ರ ಸರಕಾರ ಒಂದು ಕಾನೂನು ಮಾಡಬೇಕು. ಅದೇನೆಂದರೆ ಮನೆಗಳಲ್ಲಿ ಇಷ್ಟೇ ಪ್ರಮಾಣದಲ್ಲಿ ಕ್ಯಾಶ್ ಇಟ್ಟುಕೊಳ್ಳಬೇಕು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇಟ್ಟುಕೊಂಡರೆ ಐಟಿಗೆ ಸಿಕ್ಕಿಬಿದ್ದರೆ ಆ ಹಣ ಸರಕಾರ ವಶಪಡಿಸಿಕೊಳ್ಳುತ್ತದೆ ಎನ್ನುವ ನಿಯಮ ಮಾಡಬೇಕು. ಆಗ ಎಲ್ಲರೂ ಸರಿದಾರಿಗೆ ಬರುತ್ತಾರೆ, ವಿಶೇಷವಾಗಿ ದುರ್ಬಳಕೆ ಎಂದು ಕಿರುಚುವ ಜನ!
Leave A Reply