ಹುಟ್ಟುಹಬ್ಬಕ್ಕೆ ಗಿಫ್ಟ್ ಬೇಡಾ, ಆರ್ಥಿಕ ಸಹಾಯ ನೀಡಿ ಎಂದ ತೇಜಸ್ವಿ ಸೂರ್ಯ!

ನವೆಂಬರ್ 16 ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಭಾರತೀಯ ಯುವಮೊರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ 33ನೇ ಹುಟ್ಟುಹಬ್ಬ. ಈ ಬಗ್ಗೆ ‘ಎಕ್ಸ್’ ನಲ್ಲಿ ಮಾತನಾಡಿರುವ ತೇಜಸ್ವಿ ಸೂರ್ಯ ಅವರು ತಮ್ಮ ಜನ್ಮದಿನದಂದು ತಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ಶುಭಾಶಯ ತಿಳಿಸಲು ಬರಬಹುದೇ ಎಂದು ಅನೇಕರು ವಿಚಾರಿಸುತ್ತಿದ್ದಾರೆ. ನಾನು ಹುಟ್ಟುಹಬ್ಬ ಆಚರಿಸುವ ಬಗ್ಗೆ ವಿಶೇಷವಾದ ಒಲವು ಹೊಂದಿರುವುದಿಲ್ಲ. ಆದರೆ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಚಿರ ಋಣಿ ಎಂದು ತಿಳಿಸಿದ್ದಾರೆ. ತಾವು ಬೆಳಿಗ್ಗೆ 10 ಗಂಟೆಯಿಂದ 3.30 ರ ತನಕ ಕಚೇರಿಯಲ್ಲಿ ಇರುವುದಾಗಿ ತಿಳಿಸಿರುವ ತೇಜಸ್ವಿ ಸೂರ್ಯ ಅವರು ನಿಮ್ಮ ಆಗಮನವನ್ನು ಎದುರುಗೊಳ್ಳುತ್ತೇನೆ, ಆದರೆ ಅದರೊಂದಿಗೆ ನನ್ನ ಒಂದು ಸಣ್ಣ ಮನವಿ ಇದೆ ಎಂದು ತಿಳಿಸಿದ್ದಾರೆ.
ಶುಭಾಶಯ ಕೋರಲು ಆಗಮಿಸುವ ಪಕ್ಷದ ಮುಖಂಡರು, ಕಾರ್ಯಕರ್ತರು, ನಾಗರಿಕರು ಯಾವುದೇ ಗಿಫ್ಟ್ ತರುವುದು ಬೇಡಾ ಎಂದು ಅವರು ವಿನಂತಿಸಿದ್ದಾರೆ. ಅದರ ಬದಲು ನಮೋವಿದ್ಯಾನಿಧಿ ಯೋಜನೆಗೆ ಆರ್ಥಿಕ ನೆರವನ್ನು ನೀಡಲು ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ. ಈ ನಿಧಿಯಲ್ಲಿ ಸಂಗ್ರಹವಾದ ಹಣದಿಂದ ಇಲ್ಲಿಯ ತನಕ 2000 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ವೃಂದಕ್ಕೆ ಸಹಾಯ ಮಾಡಲು ತಾವು ಶಕ್ತರಾಗಿದ್ದು, ಅವರ ಫೀಸ್ ಗಳನ್ನು ಭರಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಈ ಮಹತ್ತರ ಯೋಜನೆಯಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿದ್ದು, ಫೀಸ್ ಕಟ್ಟುವ ಅವರ ಸವಾಲು ಈಡೇರುತ್ತದೆ. ಅದಕ್ಕಾಗಿ ನಮೋವಿದ್ಯಾನಿಧಿ ದೊಡ್ಡ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.
ಭರ್ತಡೇ ಗಿಫ್ಟ್ ನೀಡುವ ಬದಲು ನಿಮ್ಮ ಶಕ್ತಾನುಸಾರ ಈ ನಿಧಿಗೆ ಸಹಾಯ ಮಾಡಿದರೆ ಉತ್ತಮ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ನೀಡಿದರೆ ಅದು ದೂರಗಾಮಿ ಪರಿಣಾಮ ನೀಡುತ್ತದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದ ಎಂದು ಸಂಸದ ತೇಜಸ್ವಿ ಸೂರ್ಯ ಎಕ್ಸ್ ನಲ್ಲಿ ವಿಡಿಯೋ ಮಾಡಿ ಅಪಲೋಡ್ ಮಾಡಿದ್ದಾರೆ.
Leave A Reply