ಕಾಂತಾರಾ – 1 ತುಳು ಭಾಷೆಗೆ ಡಬ್ ಆಗಲ್ವಾ?
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರಾ ಅದ್ಭುತ ಯಶಸ್ಸು ಕಂಡು ಅದರ ಪ್ರಿಕ್ವೇಲ್ ಕಾಂತಾರಾ – 1 ಚಿತ್ರೀಕರಣಕ್ಕೆ ಮುಹೂರ್ತ ಆಗಿರುವುದು ರಾಷ್ಟ್ರವ್ಯಾಪಿ ಈಗಾಗಲೇ ಸುದ್ದಿಯಾಗಿದೆ. ಕಾಂತಾರ ಕನ್ನಡದಲ್ಲಿ ಯಶಸ್ಸುಗಳಿಸಿದ ಬಳಿಕ ಅದನ್ನು ಬೇರೆ ಭಾಷೆಗೂ ಡಬ್ ಮಾಡಿ ಸಿನೆಮಾ ಪ್ಯಾನ್ ಆಗಿ ಎಲ್ಲಾ ಕಡೆಗೂ ಯಶಸ್ಸು ಹೊಂದಿರುವುದು ಹೊಂಬಾಳೆ ಫಿಲಂ ಬ್ಯಾನರ್ ಇದಕ್ಕೆ ಹೊಸ ಶಕ್ತಿಯನ್ನು ತುಂಬಿರುವುದು ನಿಜ. ಆದ್ದರಿಂದ ಈ ಬಾರಿ ಕಾಂತಾರಾ – 1 ಆರಂಭದಲ್ಲಿಯೇ ಪ್ಯಾನ್ ಇಂಡಿಯಾ ಸಿನೆಮಾವಾಗಲಿದೆ ಎಂದು ಈಗಾಗಲೇ ಸಿನೆಮಾ ತಂಡ ಘೋಷಣೆ ಮಾಡಿದೆ. ಕನ್ನಡ ಭಾಷೆಯ ಜೊತೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಳಿ ಸೇರಿ ಇಂಗ್ಲೀಷ್ ಭಾಷೆಯಲ್ಲಿಯೂ ಸಿನೆಮಾ ಮೂಡಿಬರಲಿದೆ. ಆದರೆ ಕಾಂತಾರಾ -1 ಏಕಕಾಲದಲ್ಲಿ ತುಳುವಿನಲ್ಲಿಯೂ ಬರುತ್ತಾ ಎನ್ನುವುದು ಈಗ ಇರುವ ಪ್ರಶ್ನೆ.
ಕಾಂತಾರಾ ಹಿಂದಿನ ಬಾರಿ ಕನ್ನಡದಲ್ಲಿ ದೊಡ್ಡ ಹಿಟ್ ಆದ ನಂತರ ತುಳು ಭಾಷೆಗೆ ಡಬ್ ಆಗಿ ಎರಡು ತಿಂಗಳ ಬಳಿಕ ತುಳುವಿನಲ್ಲಿ ಬಿಡುಗಡೆಗೊಂಡಿತು. ಆದರೆ ಆಗ ಬಹುತೇಕ ತುಳುವರು ಕನ್ನಡದಲ್ಲಿ ಬಂದಿದ್ದ ಕಾಂತಾರಾವನ್ನು ಒಂದಕ್ಕಿಂತ ಹೆಚ್ಚು ಬಾರಿ ಥಿಯೇಟರ್ ಗೆ ಹೋಗಿ ನೋಡಿಯಾಗಿತ್ತು. ಆದ್ದರಿಂದ ತುಳುವಿಗೆ ಡಬ್ ಆಗಿದ್ದ ಕಾಂತಾರಾ ಹೌಸ್ ಫುಲ್ ಪ್ರದರ್ಶನ ಕಂಡಿರಲಿಲ್ಲ. ಹಾಗಂತ ಏಕಕಾಲದಲ್ಲಿ ಕನ್ನಡ ಮತ್ತು ತುಳುವಿನಲ್ಲಿ ಬಿಡುಗಡೆಗೊಳಿಸಿದರೆ ದಕ್ಷಿಣ ಕನ್ನಡದ ಜನ ಹಾಗೂ ತುಳು ಭಾಷಿಕರು ಎಲ್ಲೆಲ್ಲಿ ಇದ್ದಾರೋ ಅವರೆಲ್ಲ ಖಂಡಿತವಾಗಿ ತುಳುವಿನಲ್ಲಿಯೇ ನೋಡಲು ಇಷ್ಟಪಡುತ್ತಾರೆ ಎನ್ನುವುದು ನೂರಕ್ಕೆ ನೂರರಷ್ಟು ನಿಜ. ಆದ್ದರಿಂದ ಕನ್ನಡದಲ್ಲಿ ರಿಲೀಸ್ ಆಗಿ ಬಹಳ ದಿನಗಳ ನಂತರ ತುಳುವಿನಲ್ಲಿ ಲೇಟಾಗಿ ಬಿಡುಗಡೆಗೊಳಿಸಿದರೆ ಜನರ ಸ್ಪಂದನೆ ಕಡಿಮೆಯಾಗಿ ತುಳುವಿಗೆ ಡಬ್ ಮಾಡಿದ್ದಕ್ಕೆ ಲಾಭ ಆಗಲಿಲ್ಲ ಎನ್ನುವ ಅಪವಾದ ಬರುವುದಕ್ಕಿಂತ ಏಕಕಾಲದಲ್ಲಿ ಬಿಡುಗಡೆಗೊಳಿಸುವುದು ಉತ್ತಮ. ಹಾಗೆ ಹೊಂಬಾಳೆ ಫಿಲಂ ಬ್ಯಾನರ್ ಮಾಡಲಿ ಎನ್ನುವುದು ಸಿನೆಮಾ ಪ್ರಿಯರ ಅದರಲ್ಲಿಯೂ ತುಳುವರ ಆಶಯ.
Leave A Reply