ಉದಯನಿಧಿ ಮಾಡಿದ ಡ್ಯಾಮೇಜ್ ಸರಿಯಾಗಿಲ್ಲ!
ಪ್ರತಿಬಾರಿ ಗೋವಿಗೆ ಹಂಗಿಸುವುದು ಯಾಕೆ ಸೆಂಥಿಲ್?
ಡಿಎಂಕೆ ತಡವಾಗಿಯೂ ಎಚ್ಚೆತ್ತುಕೊಂಡಿದೆ. ಇಲ್ಲದೇ ಹೋದರೆ ಇನ್ನೊಂದು ಅನಾಹುತವನ್ನು ಎದುರಿಸಬೇಕಾದಿತು ಎನ್ನುವ ಅರಿವು ಅದಕ್ಕೆ ಬಂದಿದೆ. ಇಲ್ಲದೇ ಹೋದರೆ ಡಿಎಂಕೆ ಸೆಂಥಿಲ್ ತಕ್ಷಣ ಯೂಟರ್ನ್ ಹೊಡೆಯುತ್ತಿರಲಿಲ್ಲ. ಹಿಂದೂಗಳಲ್ಲಿ ಗೋಮಾತೆ ಎಂದೇ ಕರೆಯಲಾಗುವ ಗೋವಿನ ಬಗ್ಗೆ ಹಗುರವಾಗಿ ಮಾತನಾಡಿದ್ದು ಮುಂದೆ ಅಪಾಯಕ್ಕೆ ತಂದೊಡ್ಡಬಹುದು ಎನ್ನುವ ಅರಿವು ಅವಿವೇಕಿ ಸಂಸದನಿಗೆ ಬೇಗ ಬಂದದ್ದು ಅವನ ಪುಣ್ಯ. ಯಾಕೆಂದರೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನವನ್ನು ಯಾವುದಕ್ಕೆಲ್ಲಾ ಹೋಲಿಸಿದ ಮತ್ತು ಅದರ ನಾಶವನ್ನು ಹೇಗೆ ಮಾಡಬೇಕೆಂದು ಹೇಳಿದ್ದ ಎನ್ನುವುದನ್ನು ದೇಶ ಕಂಡಿದೆ. ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ವಶದಲ್ಲಿದ್ದ ಎರಡು ರಾಜ್ಯಗಳು ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನುಭವಿಸುತ್ತಿರುವ ಹೀನಾಯ ಸೋಲಿಗೆ ಉದಯನಿಧಿ ಸ್ಟಾಲಿನ್ ಹೇಳಿಕೆಯೇ ಕಾರಣ, ಅದರಿಂದಲೇ ಹಿಂದೂ ಮತಗಳು ಧ್ರುವಿಕರಣಗೊಂಡವು ಎನ್ನುವುದು ಹಲವು ರಾಜಕೀಯ ಪಕ್ಷಗಳ ಬಹಿರಂಗ ಹೇಳಿಕೆ.
ಉದಯನಿಧಿ ಮಾಡಿದ ಡ್ಯಾಮೇಜ್ ಸರಿಯಾಗಿಲ್ಲ!
ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಉದಯನಿಧಿ ಸ್ಟಾಲಿನ್ ಫಲಿತಾಂಶದ ಮರುದಿನ ಗಂಟಲು ಚೀರಿಕೊಂಡು ಅಳುತ್ತಿದ್ದರೂ ಕೇಳುವವರು ಯಾರೂ ಇರಲಿಲ್ಲ. ಯಾಕೆಂದರೆ ಅಷ್ಟೊತ್ತಿಗೆ ಆಗಬೇಕಾಗಿದ್ದ ಡ್ಯಾಮೇಜ್ ಆಗಿ ಹೋಗಿತ್ತು. ಅಷ್ಟು ಗೊತ್ತಿದ್ದು ಸೆಂಥಿಲ್ ಗೋಮೂತ್ರದ ರಾಜ್ಯಗಳಲ್ಲಿ ಮಾತ್ರ ಭಾರತೀಯ ಜನತಾ ಪಾರ್ಟಿ ಗೆಲ್ಲುತ್ತದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಗೆಲ್ಲುವುದಿಲ್ಲ. ಅಲ್ಲಿ ಬಂದು ಇವರ ಪ್ರಭಾವ ತೋರಿಸಲಿ ಎಂದು ಪಾರ್ಲಿಮೆಂಟಿನಲ್ಲಿ ಸವಾಲು ಹಾಕಿದ್ದರು. ಗೋಮೂತ್ರ ಎಂದು ಗೋಮಾತೆಯ ಬಗ್ಗೆ ಲಘುವಾಗಿ ಹೇಳಿರುವುದು ಸಹಜವಾಗಿ ಗೋಪ್ರೇಮಿಗಳಲ್ಲಿ ನೋವು ತಂದಿತ್ತು. ಯಾವಾಗ ಸಂಸತ್ತಿನ ಒಳಗೆ ಮತ್ತು ಹೊರಗೆ ಈ ಬಗ್ಗೆ ಸೆಂಥಿಲ್ ಅವರಿಗೆ ಬಿಸಿ ಮುಟ್ಟಿತ್ತೋ ಅವರು ತಾವು ಹೇಳಿದ್ದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮುಂದೆ ಹಾಗೆ ಹೇಳುವುದಿಲ್ಲ ಎಂದು ಬಹಿರಂಗವಾಗಿ ತಿಳಿಸಿದ್ದಾರೆ.
ಮಕ್ಕಳು ದೊಡ್ಡವರನ್ನು ವ್ಯಂಗ್ಯ ಮಾಡುವುದಾ?
ಈಗ ಸೆಂಥಿಲ್ ಹೇಳಿರುವುದನ್ನೇ ವಿಶ್ಲೇಷಿಸುವುದಾದರೆ ಬಿಜೆಪಿ ಉತ್ತರ ಭಾರತದಲ್ಲಿ ಮಾತ್ರ ಗೆಲ್ಲುತ್ತದೆ ಎಂದು ಅವರು ಟೀಕೆ ಮಾಡಿದ್ದಾರೆ. ಅಷ್ಟಕ್ಕೂ ಟೀಕೆ ಮಾಡಲು ಅದರಲ್ಲಿ ಏನಿದೆ? ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿ ಅರ್ಧ ಭಾರತಕ್ಕಿಂತ ಹೆಚ್ಚಿನ ಭಾಗವನ್ನು ಕೇಸರಿಮಯಗೊಳಿಸಿದೆ. ಹಾಗೆ ನೋಡಿದರೆ ಕಾಂಗ್ರೆಸ್ ಇಡೀ ರಾಷ್ಟ್ರದಲ್ಲಿ ಇರುವುದು ಮೂರು ರಾಜ್ಯಗಳಲ್ಲಿ ಮಾತ್ರ. ಅದು ಬಿಡಿ, ಡಿಎಂಕೆ ಎಷ್ಟು ರಾಜ್ಯಗಳಲ್ಲಿ ಇದೆ? ಅದು ತಮಿಳುನಾಡಿನಲ್ಲಿ ಮಾತ್ರ. ಬಿಜೆಪಿ ದಕ್ಷಿಣ ಭಾರತದಲ್ಲಿ ಇಲ್ಲ ಎಂದು ಸೆಂಥಿಲ್ ವ್ಯಂಗ್ಯ ಮಾಡಿರಬಹುದು. ಹಾಗೆ ನೋಡಿದರೆ ಕೇರಳ ಒಂದು ರಾಜ್ಯದಲ್ಲಿ ಬಿಜೆಪಿ ಯಾವ ಶಾಸಕನೂ ಈ ಬಾರಿ ಅಲ್ಲಿನ ವಿಧಾನಸಭೆಯಲ್ಲಿ ಇಲ್ಲ ಎಂದುಬಿಟ್ಟರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ ಹೀಗೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯ ಶಾಸಕರು ಮತ್ತು ಸಂಸದರು ಇದ್ದಾರೆ. ಇನ್ನು ಬಿಜೆಪಿಯ ಎದುರು ಡಿಎಂಕೆ ಎಂದರೆ ಪಿಎಚ್ ಡಿ ವಿದ್ಯಾರ್ಥಿಯ ಮುಂದೆ ಪ್ರೈಮರಿ ಶಾಲೆಯ ಬಾಲಕನ ಪರಿಸ್ಥಿತಿ. ಹಾಗಿರುವಾಗ ಮಕ್ಕಳು ದೊಡ್ಡವರಿಗೆ ತಮಾಷೆ ಮಾಡುವುದು ಎಂದರೆ ಅಂತಹ ಮಕ್ಕಳಿಗೆ ಯೋಗ್ಯ ಸಂಸ್ಕಾರ ಸಿಗಲಿಲ್ಲ ಎಂದೇ ಅರ್ಥ.
Leave A Reply