ಸಾಮಾಜಿಕ ಕ್ರಾಂತಿಕಾರಿ ಪದ್ಮಶ್ರೀ ಫೂಲಬಸನ್ ಬಾಯಿ ಯಾದವ್ ಅವರಿಗೆ ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ
1969 ರಲ್ಲಿ ಕಟ್ಟಕಡು ಬಡತನದಲ್ಲಿ ಜನಿಸಿದ ಫೂಲಬಸನ್ ಬಾಯಿ ಯಾದವ್ ಅವರು ತನ್ನ ಹತ್ತನೇ ವಯಸ್ಸಿನಲ್ಲಿ ಬಾಲ್ಯವಿವಾಹಕ್ಕೆ ಒಳಗಾಗುತ್ತಾರೆ. ಏಳನೇ ತರಗತಿಯ ತನಕ ಮಾತ್ರ ಕಲಿತಿರುವ ಇವರು ತಾನು ಸಮಾಜದ ಕಟ್ಟಕಡೆಯ ಹೆಣ್ಣುಮಕ್ಕಳಿಗೂ ಯೋಗ್ಯ ಸ್ಥಾನಮಾನ ಸಿಗಬೇಕು ಎನ್ನುವ ಕಾರಣಕ್ಕೆ ಸಾಮಾಜಿಕ ಕ್ರಾಂತಿಗೆ ಪಣತೊಡುತ್ತಾರೆ. ಅದಕ್ಕಾಗಿ ಸ್ವಸಹಾಯ ಗುಂಪುಗಳನ್ನು ರಚಿಸುತ್ತಾರೆ. ತಮ್ಮದೇ ಗುಂಪು ರಚಿಸಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ರೇಶನ್ ವಿತರಿಸುವ ಅಂಗಡಿಗಳನ್ನು ತೆರೆಯುತ್ತಾರೆ. ಮಾ ಬಂಲೇಶ್ವರಿ ಜನಹಿತ ಕಾರ್ಯ ಸಮಿತಿ ಎನ್ನುವ ಸರಕಾರರೇತರ ಸಂಘಟನೆಯನ್ನು ರಚಿಸಿದ ಇವರ ನೇತೃತ್ವದಲ್ಲಿ ಸುಮಾರು 12000 ಸ್ವಸಹಾಯ ಗುಂಪುಗಳಿದ್ದು, ಅದರಲ್ಲಿ 8 ಲಕ್ಷ ಮಹಿಳಾ ಸದಸ್ಯರು ಇದ್ದಾರೆ. ಒಬ್ಬೊಬ್ಬರಿಂದ ತಲಾ 2 ರೂಪಾಯಿ ಸಂಗ್ರಹಿಸಿ ಈಗ ಈ ಸಂಘಟನೆಯ ಮೂಲನಿಧಿ 150 ಮಿಲಿಯನ್ ಆಗಿದೆ. ಈ ಸಂಘಟನೆ ಆರೋಗ್ಯ ಶಿಬಿರ, ಮಹಿಳಾ ಶಿಕ್ಷಣ,
ನೈರ್ಮಲೀಕರಣ, ಸ್ವಾವಲಂಬಿ ಉದ್ಯೋಗ, ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ, ಮಕ್ಕಳನ್ನು ದತ್ತು ಸ್ವೀಕರಿಸಿ ಪೋಷಣೆ ಸಹಿತ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈ ಸಂಘಟನೆಯ ಪಾನ ನಿಷೇಧ ಹೋರಾಟದ ಅಂಗವಾಗಿ ಛತ್ತೀಸಗಡದಲ್ಲಿ ಇಲ್ಲಿಯ ತನಕ 250 ಲಿಕ್ಕರ್ ಶಾಪುಗಳು ಮುಚ್ಚಲ್ಪಟ್ಟಿವೆ. ಬ್ರೂಣಹತ್ಯೆಯ ವಿರುದ್ಧ ಜಾಗೃತಿ ಮೂಡಿಸುವ ರಾಜಸ್ಥಾನ ಸರಕಾರದ ಅಭಿಯಾನಕ್ಕೆ ಈ ಸಂಘಟನೆ ರಾಯಭಾರಿಯಾಗಿದೆ.
ಫೂಲಬಸನ್ ಬಾಯಿ ಯಾದವ್ ಅವರು ಈ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಾಗ ಅವರ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಕೆಲಸ ಮುಗಿಸಿ ಮನೆಗೆ ತಡವಾಗಿ ಬಂದರೆ ಗಂಡನಿಂದ ಓದೆ ಬೀಳುತ್ತಿತ್ತು. ಆದರೆ ಮಹಿಳಾ ಶಕ್ತಿ ಸಮಾಜಕ್ಕೆ ತೋರಿಸುವ ಸಲುವಾಗಿ ಇವರು ಮಾಡಿದ ಪ್ರಯತ್ನದಿಂದ ಪುರುಷ ಪ್ರಧಾನ ವ್ಯವಸ್ಥೆಯಾಗಿದ್ದ ಗ್ರಾಮ ಪಂಚಾಯತ್ ಗಳಲ್ಲಿ ಮಹಿಳಾ ಸದಸ್ಯರು ಕೂಡ ಆಯ್ಕೆಯಾಗುವಂತಾಗಿರುವುದು ದೊಡ್ಡ ಮೈಲಿಗಲ್ಲು. ಚತ್ತೀಸಗಡ ಸರಕಾರದ ಜನನ ಸುರಕ್ಷಾ ಯೋಜನೆಯ ರಾಯಭಾರಿಯಾಗಿರುವ ಇವರಿಗೆ ರಾಷ್ಟ್ರೀಯ ಸಂಘಟನೆಗಳು, ಸಂಘ, ಸಂಸ್ಥೆಗಳು ಅನೇಕ ಪ್ರಶಸ್ತಿ ನೀಡಿ ಗೌರವಿಸಿವೆ.
ಭಾರತದ ಛತ್ತಿಸಗಡ್ ರಾಜ್ಯದಲ್ಲಿ ಮಹಿಳಾ ಸಬಲೀಕರಣದ ಕಠಿಣ ಹೆಜ್ಜೆಗಳ ಮೂಲಕ ದೇಶದಲ್ಲಿ ಕ್ರಾಂತಿ ಮಾಡಿ ಕೇಂದ್ರ ಸರಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಫೂಲಬಸನ್ ಬಾಯಿ ಯಾದವ್ ಅವರಿಗೆ ಮಂಗಳೂರಿನಲ್ಲಿ ಡಿಸೆಂಬರ್ 24 ರಂದು ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಒಂಭತ್ತನೆ ಮೂಲತ್ವ ವಿಶ್ವ ಅವಾರ್ಡ್ 2023 ನೀಡಿ ಸನ್ಮಾನಿಸುವ ಕಾರ್ಯ ನಡೆಯಲಿದೆ.
Leave A Reply