ಡಿಕೆಶಿ ಔತಣಕೂಟಕ್ಕೆ ಹೋಗಿದ್ದೆ ಎಂದ ಬಿಜೆಪಿ ಶಾಸಕ!
ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕರಿಗೆ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಕಾಂಗ್ರೆಸ್ ಶಾಸಕರೊಂದಿಗೆ ಭಾರತೀಯ ಜನತಾ ಪಾರ್ಟಿಯ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ವಿಶ್ವನಾಥ್ ಅವರು ಭಾಗವಹಿಸಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ಸೋಮಶೇಖರ್ ಅವರು ಉಪಮುಖ್ಯಮಂತ್ರಿಯವರು ಕರೆದ ಶಾಸಕಾಂಗ ಸಭೆಗೆ ಹೋಗಿಲ್ಲ. ಕೇವಲ ಔತಣಕೂಟಕ್ಕೆ ಮಾತ್ರ ಹೋಗಿದ್ದೇನೆ ಎಂದು ತಿಳಿಸಿದ್ದಾರೆ.
ಅದೇ ದಿನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದೆ. ಶಿವಕುಮಾರ್ ಕೂಡ ಊಟಕ್ಕೆ ಆಹ್ವಾನಿಸಿದ್ದರು. ಹಾಗಾಗಿ ರಾತ್ರಿ 11 ಕ್ಕೆ ಹೋಗಿ ಶುಭಕೋರಿ ಬಂದೆ. ಮೈಸೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವಂತೆ ಒತ್ತಡವಿದೆ. ಆದರೆ ಬಿಜೆಪಿಗೆ ಯಾವುದೇ ತರಹದ ಮುಜುಗರವಾಗುವಂತಹ ಕೆಲಸ ಮಾಡಲ್ಲ ಎಂದು ಹೇಳಿದರು.
ಬಿಜೆಪಿಯ ಶಾಸಕರು ಕಾಂಗ್ರೆಸ್ ಔತಣಕೂಟದಲ್ಲಿ ಭಾಗಿಯಾಗುವುದನ್ನು ಅಶೋಕ್ ಹಾಗೂ ವಿಜಯೇಂದ್ರ ಬೇರೆ ಬೇರೆ ರೀತಿಯಲ್ಲಿ ಸ್ವೀಕರಿಸಿದಂತಿದೆ. ವಿಜಯೇಂದ್ರ ಅವರು ಇಂತಹ ಬೆಳವಣಿಗೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ್ದರೆ, ಅಶೋಕ್ ಅವರು ಕರೆದು ಮಾತನಾಡಿದ್ದೇನೆ. ಏನೂ ಆಗಲ್ಲ ಎಂದು ಹಗುರವಾಗಿ ವಿಷಯವನ್ನು ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಸೋಮಶೇಖರ್ ಅವರು ಈ ಅಧಿವೇಶನದಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದಾಗಲೂ ಪಕ್ಷದೊಂದಿಗೆ ಕೈಜೋಡಿಸದೇ ಸದನದಲ್ಲಿಯೇ ಇದ್ದದ್ದನ್ನು ಇಲ್ಲಿ ಸ್ಮರಿಸಬಹುದು. ಈ ಕುರಿತು ಮತ್ತೊರ್ವ ಶಾಸಕ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬಿಜೆಪಿಯಿಂದ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಕಾಂಗ್ರೆಸ್ ಔತಣಕೂಟದಲ್ಲಿ ಭಾಗವಹಿಸಿರುವುದು ಬಿಜೆಪಿ ಮುಖಂಡರಿಗೆ ಆಶ್ಚರ್ಯ ತರುವ ಸಾಧ್ಯತೆ ಇಲ್ಲ.
Leave A Reply