ಅಯೋಧ್ಯೆಯಲ್ಲಿ ರಾಮ ಪ್ರತಿಷ್ಟೆಗೆ ಜನವರಿ 22 ಯಾಕೆ?
2024 ರ ಜನವರಿ 22 ನೇ ತಾರೀಕನ್ನೇ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಟೆ ಮಾಡಲು ನಿಗದಿಗೊಳಿಸಿದ್ದು ಯಾಕೆ ಎನ್ನುವ ಪ್ರಶ್ನೆ ಹಲವರ ಮನಸ್ಸಿನಲ್ಲಿ ಬಂದಿರಬಹುದು. ಇದರಲ್ಲಿ ಏನೋ ವಿಶೇಷ ಇರಬಹುದು ಎಂದು ಅನಿಸಿದ್ದರೂ ಏನು ಎಂದು ಗೊತ್ತಿರಲಿಲ್ಲ. ಆದರೆ ಕೊನೆಗೂ ಅದಕ್ಕೆ ಈಗ ಉತ್ತರ ಸಿಕ್ಕಿದೆ.
ಯಾವುದೇ ಒಂದು ಶುಭ ಕೆಲಸ ಮಾಡುವಾಗ ಅದಕ್ಕೆ ಯೋಗ್ಯವಾದ ದಿನವನ್ನು ವೈದಿಕರು ಆಯ್ದುಕೊಳ್ಳುತ್ತಾರೆ. ಆ ದಿನದಂದು ಇರುವ ಮುಹೂರ್ತ ಮತ್ತು ಅದು ಶುಭ ಕಾರ್ಯ ಕೈಗೊಂಡವರ ಗ್ರಹಗತಿಗೆ ಹೊಂದಾಣಿಕೆ ಆಗುತ್ತಾ ಮತ್ತು ಎಷ್ಟು ಗಂಟೆಯ ಎಷ್ಟು ನಿಮಿಷದಿಂದ ಎಷ್ಟು ನಿಮಿಷಕ್ಕೆ ಇದನ್ನು ಮುಗಿಸಬೇಕು ಎಲ್ಲವನ್ನು ಪರಿಗಣಿಸಿ ಶುಭಕಾರ್ಯವನ್ನು ಖಾತ್ರಿಗೊಳಿಸಲಾಗುತ್ತದೆ. ಒಟ್ಟಿನಲ್ಲಿ ದೈವಿಕ ಕ್ಷಣಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಮುಹೂರ್ತದ ದಿನವನ್ನು ನಿಗದಿಗೊಳಿಸಲಾಗುತ್ತದೆ.
ಜನವರಿ 22, 2024 ರ ಮಧ್ಯಾಹ್ನ 12.20 ನಿಮಿಷಕ್ಕೆ ಇಡೀ ಜಗತ್ತಿನ ಶ್ರೀ ರಾಮಭಕ್ತರು ಕಾತರದಿಂದ ಕಾಯುವ ಘಳಿಗೆ ಸಾಕ್ಷಾತ್ಕಾರವಾಗಲಿದೆ. ಆವತ್ತಿನ ಅಭಿಜಿತ್ ಮುಹೂರ್ತಕ್ಕೆ ಗರ್ಭಗುಡಿಯಲ್ಲಿ ಪ್ರಾಣಪ್ರತಿಷ್ಟೆ ನಡೆಯಲಿದೆ. ಆ ಮುಹೂರ್ತ ಶ್ರೀ ರಾಮ ದೇವರಿಗೆ ಸುಮೂರ್ತವಾಗಿದ್ದರೂ ಇಡೀ ಪ್ರಪಂಚದ ಮಟ್ಟಿಗೆ ಅದು ಉತ್ತಮ ಕಾಲ ಎಂದು ಹೇಳಬಹುದಾಗಿದೆ. ಈ ಮಂಗಳಕರ ಮುಹೂರ್ತ ಮೃಗಶಿರ ನಕ್ಷತ್ರ ಜನವರಿ 22 ರ ಸೋಮವಾರ ಪ್ರಾತ: ಕಾಲ 3.52 ನಿಮಿಷಕ್ಕೆ ಆರಂಭವಾಗಿ ಮರುದಿನ ಬೆಳಗ್ಗಿನ ಜಾವ 4: 58 ರ ತನಕ ನಡೆಯಲಿದೆ. ಇಷ್ಟು ಸಮಯ ಕೂಡ ಬಹಳ ಪವಿತ್ರವಾಗಿರುವುದು ಎಂದು ಹೇಳಲಾಗುತ್ತದೆ. ಜನವರಿ 22 ರಂದು ಅಭಿಜಿತ್ ಮುಹೂರ್ತ ಬೆಳಿಗ್ಗೆ 11.51 ರಿಂದ 12.33 ರ ತನಕ ನಡೆಯಲಿದೆ.
ಪುರಾಣದ ಪ್ರಕಾರ ಅಭಿಜಿತ್ ಮುಹೂರ್ತದಲ್ಲಿಯೇ ಭಗವಂತ ಶಿವನಿಂದ ತ್ರಿಪುರಾಸುರನ ಸಂಹಾರವಾಗಿತ್ತು ಎನ್ನಲಾಗುತ್ತಿದೆ. ಈ ಮುಹೂರ್ತ ನಮ್ಮ ಎಲ್ಲಾ ದೋಷಗಳನ್ನು ಪರಿಹರಿಸಲು ಯೋಗ್ಯ ಕಾಲ ಎಂದು ಕರೆಯಲಾಗುತ್ತದೆ. ಈ ಅವಧಿ ನಮ್ಮ ಮನಸ್ಸಿನ ನಕರಾತ್ಮಕ ಶಕ್ತಿಗಳನ್ನು ಹೊಡೆದುಹಾಕಲು ಮತ್ತು ಯಾವುದೇ ಯೋಗ್ಯ ಕಾರ್ಯಗಳನ್ನು ಆರಂಭಿಸಲು ಸೂಕ್ತ ಅವಧಿ ಎನ್ನಲಾಗಿದೆ. ಅದು ಹೊಸ ಉದ್ಯೋಗ, ವ್ಯವಹಾರ, ಹೂಡಿಕೆ, ಗೃಹ ಪ್ರವೇಶ, ಪೂಜೆ ಪುನಸ್ಕಾರಗಳಿಗೆ ಉತ್ತಮ ಸಮಯ ಎಂದು ಕೂಡ ಹೇಳಲಾಗುತ್ತದೆ. ಅಭಿಜಿತ್ ಮುಹೂರ್ತದಲ್ಲಿ ಮಾಡಿದ ಕಾರ್ಯಗಳಿಗೆ ಸಕರಾತ್ಮಕ ಶಕ್ತಿಯ ಬೆಂಬಲ ಇದೆ ಎಂದು ಹೇಳಲಾಗಿದೆ.
ಇನ್ನು ಜನವರಿ 22 ರಂದು ಅಮೃತ ಸಿದ್ಧಿ ಯಾಗ ಮತ್ತು ಸರ್ವತ ಸಿದ್ಧಿ ಯೋಗ ಸಮ್ಮಿಳಿತವಾಗಿ ಮೃಗಶಿರ ನಕ್ಷತ್ರದ ಅವಧಿಗೆ ಇನ್ನಷ್ಟು ಶಕ್ತಿ ನೀಡುತ್ತದೆ. ಒಟ್ಟಿನಲ್ಲಿ ಇದೆಲ್ಲವನ್ನು ಪರಿಶೀಲಿಸಿ ಜನವರಿ 22 ರಂದೇ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನ ನಿಗದಿಗೊಳಿಸಲಾಗಿದೆ.
Leave A Reply