ಅಮಿತಾಬ್ ಯಾರ ಕಾಲು ಮುಟ್ಟಿ ನಮಸ್ಕರಿಸಿದ್ದು – ಅಷ್ಟು ದೊಡ್ಡ ವ್ಯಕ್ತಿ ಯಾರದು?
81 ವಯಸ್ಸಿನ ಅಮಿತಾಬ್ ಬಚ್ಚನ್ ಅವರು ಇವತ್ತಿಗೂ ಸಿನೆಮಾ, ಜಾಹೀರಾತು ಎಂದು ಬ್ಯುಸಿ ಇರುತ್ತಾರೆ. ಅವರ ಹೊಸ ಸಿನೆಮಾ ಕಲ್ಕಿ 2898 ಎಡಿ ಚಿತ್ರದ ಪ್ರೀ – ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಒಂದು ಆಶ್ಚರ್ಯಕರ ಸಂಗತಿ ನಡೆಯಿತು. ಸಾಮಾನ್ಯವಾಗಿ ಅಮಿತಾಬ್ ಬಚ್ಚನ್ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡರೆ ಜನರು ಅವರ ಪಾದ ಮುಟ್ಟಿ ನಮಸ್ಕರಿಸುತ್ತಾರೆ. ಆದರೆ ಬಚ್ಚನ್ ಮುಂಬೈಯಲ್ಲಿ ಒಂದು ಸಿನೆಮಾ ಕಾರ್ಯಕ್ರಮದಲ್ಲಿ ಯಾರಾದಾದರೂ ಕಾಲು ಮುಟ್ಟಿ ಅದು ಕೂಡ ಬಹಿರಂಗವಾಗಿ ನಮಸ್ಕರಿಸುವುದೆಂದರೆ ಅಲ್ಲಿದ್ದ ಎಲ್ಲರಿಗೂ ಅವರ ಸಜ್ಜನಿಕೆ ಕಂಡು ಆಶ್ಚರ್ಯವಾಗುವುದು ಸಹಜ. ಅಷ್ಟಕ್ಕೂ ಅಮಿತಾಬ್ ಕಾಲು ಮುಟ್ಟಿ ನಮಸ್ಕರಿಸಲು ಹೋಗಿದ್ದು ಯಾರನ್ನ? ಅವರು ಬೇರೆ ಯಾರೂ ಅಲ್ಲ. ತೆಲುಗು ಚಿತ್ರರಂಗದ ನಿರ್ಮಾಪಕ ಅಶ್ವಿನಿ ದತ್.
ಅಶ್ವಿನಿ ದತ್ ಅವರ ವೈಜಯಂತಿ ಮೂವೀಸ್ ಬ್ಯಾನರ್ ತೆಲುಗು ಸಿನೆಮಾರಂಗದಲ್ಲಿ ಅತೀ ದೊಡ್ಡ ಹೆಸರು. ಈ ಸಂಸ್ಥೆಯ ಮಾಲೀಕರೇ ಅಶ್ವಿನಿದತ್. 1974 ರಲ್ಲಿ ” ವೈಜಯಂತಿ ಮೂವೀಸ್” ಆರಂಭವಾಯಿತು. ಎನ್ ಟಿಆರ್, ಎಎನ್ ಆರ್, ಕೃಷ್ಣ, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಮುಂತಾದ ಸ್ಟಾರ್ ನಟರ ಸಿನೆಮಾಗಳಿಗೆ ಅಶ್ವಿನಿದತ್ ಬಂಡವಾಳ ಹೂಡಿದ್ದಾರೆ. ಇದೇ ಸಂಸ್ಥೆ ಈಗ ಕಲ್ಕಿ 2898 ಎಡಿ ಸಿನೆಮಾ ನಿರ್ಮಿಸಿದೆ.
ಇವರ ಬಗ್ಗೆ ಮಾತನಾಡಿದ ಸಿನಿಯರ್ ಬಚ್ಚನ್ ” ಇವರು ವೈಜಯಂತಿ ಮೂವೀಸ್ ನ ಮಾಲೀಕರು. ಇವರ ಇಬ್ಬರ ಮಕ್ಕಳಾದ ಸ್ವಪ್ನ ಹಾಗೂ ಪ್ರಿಯಾಂಕಾ ಕೂಡ ನಿರ್ಮಾಪಕರು. ಅಶ್ವಿನಿ ದತ್ ಅವರಿಗಿಂತ ಸರಳ ಮತ್ತು ವಿನಮ್ರ ವ್ಯಕ್ತಿಯನ್ನು ನಾನು ನೋಡಿಲ್ಲ. ಪ್ರತಿ ಬಾರಿಯೂ ಶೂಟಿಂಗ್ ಸೆಟ್ ಗೆ ಅವರೇ ಮೊದಲು ಬರುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದು ನಿಮ್ಮನ್ನು ಸ್ವಾಗತಿಸುತ್ತಾರೆ. ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳುತ್ತಾರೆ. ಯಾರೂ ಕೂಡ ಅವರ ರೀತಿ ಆಲೋಚನೆ ಮಾಡುವುದಿಲ್ಲ” ಎಂದು ಹೇಳಿದ ಬಳಿಕ ಅಮಿತಾಬ್ ಅವರು ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದರು.
ಅಮಿತಾಬ್ ಬಚ್ಚನ್ ಅವರ ಇಂತಹ ನಡೆಯಿಂದ ಸಿನೆಮಾ ನಟರು ಕಲಿಯುವುದು ಸಾಕಷ್ಟಿದೆ. ಒಂದು ಕಾಲದಲ್ಲಿ ಡಾ. ರಾಜಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರೆಂದು ಕರೆಯುತ್ತಿದ್ದರು. ಆದರೆ ಇತ್ತಿಚಿನ ತಲೆಮಾರಿನಲ್ಲಿ ಕೆಲವು ಸ್ಟಾರ್ ನಟರು ನಿರ್ಮಾಪಕರನ್ನು ಕೇವಲವಾಗಿ ಕರೆಯುವುದು, ಹೀಯಾಳಿಸುವುದನ್ನು ನೋಡಿದಾಗ ನಿಜಕ್ಕೂ ಚಿತ್ರರಂಗ ಎತ್ತ ಸಾಗುತ್ತಿದೆ ಎಂದು ಸಿನೆಮಾ ರಂಗದಲ್ಲಿ ಇರುವವರಿಗೆ ಆತಂಕವಾಗುತ್ತಿತ್ತು. ಆದರೆ ಅಮಿತಾಬ್ ಬಚ್ಚನ್ ಅವರು ತಾವು ಏರಿರುವ ಎತ್ತರವನ್ನು ಮರೆತು ಒಬ್ಬ ನಿರ್ಮಾಪಕರ ಕಾಲಿಗೆ ನಮಸ್ಕರಿಸಿರುವುದನ್ನು ನೋಡಿದಾಗ ಅಂದಿನ ಕಲಾವಿದರು ಹೇಗೆ ಬೆಳೆದರು ಎಂದು ತಿಳಿಯುತ್ತದೆ.
ಇನ್ನು ಕಲ್ಕಿ 2898 ಎಡಿ ಸಿನೆಮಾದಲ್ಲಿ ಬಚ್ಚನ್ ಅವರೊಂದಿಗೆ ಪ್ರಭಾಸ್, ದೀಪಿಕಾ ಪಡುಕೋಣೆ, ರಾಣಾ ದಗ್ಗುಬಾಟಿ, ಕಮಲ್ ಹಾಸನ್ ಸಹಿತ ಅನೇಕ ಕಲಾವಿದರ ದಂಡು ಇದೆ.
Leave A Reply