ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಕುತೂಹಲಕ್ಕೆ ತೆರೆ!
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಪಡ್ನವೀಸ್ ಅವರನ್ನು ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಪದಗ್ರಹಣಕ್ಕೂ ಮುನ್ನ ಭಾರತೀಯ ಜನತಾ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಗೊಂಡರು. ಪಡ್ನವೀಸ್ ಅವರು ಮೂರನೇ ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅವರು ಈಗಾಗಲೇ 2014 ರಿಂದ 2019 ರ ತನಕ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅದರ ನಂತರ 2019 ರಲ್ಲಿ 80 ಗಂಟೆ ಸಿಎಂ ಹುದ್ದೆಯಲ್ಲಿ ಪಡ್ನವೀಸ್ ಮುಂದುವರೆದಿದ್ದರು.
ಅದರ ಬಳಿಕ ಅವರು ಎರಡೂವರೆ ವರ್ಷ ವಿಪಕ್ಷ ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಪಡ್ನವೀಸ್ ಅವರು ನಾಗಪುರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಡ್ನವೀಸ್ ಅವರು ಮಹಾರಾಷ್ಟ್ರದ 21 ನೇ ಮುಖ್ಯಮಂತ್ರಿಯಾಗಿ ಡಿಸೆಂಬರ್ 5 ರಂದು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಮುಂಬೈಯ ಅಜಾದ್ ಮೈದಾನದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. 54 ವರ್ಷದ ಪಡ್ನವೀಸ್ ಅವರ ಸಚಿವ ಸಂಪುಟದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರು ಇರಲಿದ್ದಾರೆ. ಬಿಜೆಪಿಗೆ ಒಟ್ಟು 22 ಸಚಿವ ಸ್ಥಾನಗಳು ಸಿಗಲಿದ್ದು ಅದರಲ್ಲಿ ಮಹತ್ತರವಾದ ಗೃಹ ಖಾತೆಯೂ ಇರಲಿದೆ. ಇನ್ನು ಶಿವಸೇನೆಯ ಶಿಂಧೆ ಬಣಕ್ಕೆ 12 ಸಚಿವ ಸ್ಥಾನಗಳು ಮತ್ತು ಅಜಿತ್ ಪವಾರ ಅವರ ಎನ್ ಸಿಪಿಗೆ 11 ಸ್ಥಾನಗಳು ಸಿಗಲಿವೆ.
ಮಹಾಯುತಿಯಲ್ಲಿ ಬಿಜೆಪಿ 132 ಸ್ಥಾನಗಳನ್ನು ಗೆದ್ದಿರುವುದರಿಂದ ಸಹಜವಾಗಿ ಈ ಬಾರಿ ಬಿಜೆಪಿಯಿಂದಲೇ ಮುಖ್ಯಮಂತ್ರಿ ಯಾರಾದರೂ ಆಗಬೇಕು ಎನ್ನುವ ಕೂಗು ಬಿಜೆಪಿ ವಲಯದಿಂದ ಕೇಳಿಬಂದಿತ್ತು. ಪಡ್ನವೀಸ್ ಅವರಿಗೆ ಸಿಎಂ ಸ್ಥಾನ ಸಿಗುತ್ತಾ ಇಲ್ವಾ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು. ಸಾಮಾನ್ಯವಾಗಿ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನುವ ಚರ್ಚೆ ತಾರಕಕ್ಕೆ ಏರಿದಾಗ ಮೋದಿ-ಶಾ ಜೋಡಿ ಆಶ್ಚರ್ಯ ರೀತಿಯಲ್ಲಿ ಇನ್ಯಾರನ್ನೋ ಸಿಎಂ ಮಾಡಿ ಜನರಿಗೆ ಆಶ್ಚರ್ಯ ಉಂಟು ಮಾಡಿದ ಹಲವು ನಿದರ್ಶನಗಳು ಈ ಹಿಂದೆ ಇವೆ. ಆದ್ದರಿಂದ ಈ ಬಾರಿಯೂ ಹೀಗೆ ಆಗುತ್ತಾ ಎನ್ನುವ ಕುತೂಹಲ ಈಗಲೂ ಇತ್ತು. ಆದರೆ ಈ ಬಾರಿ ಹಾಗೆ ಆಗಿಲ್ಲ.
Leave A Reply