ಎಸ್ ಎಂ ಕೆ ನಿಧನದ ಹಿನ್ನಲೆಯಲ್ಲಿ ರಾಜ್ಯ ಸರಕಾರದಿಂದ ಬುಧವಾರ ರಜೆ ಘೋಷಣೆ…
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ತಮ್ಮ 92 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. 1999 ರಿಂದ 2004 ರ ತನಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರು ರಾಜ್ಯದ ಅಭಿವೃದ್ಧಿಯಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ಬೆಂಗಳೂರನ್ನು ಐಟಿ – ಬಿಟಿ ಹಬ್ಬ ಮಾಡುವಲ್ಲಿ ಕೃಷ್ಣ ಅವರ ಪಾತ್ರ ದೊಡ್ಡದು. ಕಾಂಗ್ರೆಸ್ಸಿನ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ದ ಕೃಷ್ಣ ಅವರು ಕೇಂದ್ರ ಸಚಿವರಾಗಿಯೂ, ಕೇಂದ್ರದ ಕಾಂಗ್ರೆಸ್ ಮುಖಂಡರಿಗೆ ಆಪ್ತರಾಗಿಯೂ ಇದ್ದವರು. ಒಂದು ಹಂತದಲ್ಲಿ ಕೇಂದ್ರದ ಕಾಂಗ್ರೆಸ್ ನಾಯಕರುಗಳಿಗೆ ಆರ್ಥಿಕ ಶಕ್ತಿಯನ್ನು ಒದಗಿಸುವಲ್ಲಿ ಕೃಷ್ಣ ಅವರು ಶ್ರಮಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಅನೇಕ ನಾಯಕರು ಕೃಷ್ಣ ಅವರ ನಿಧನಕ್ಕೆ ಶ್ರದ್ಧಾಂಜಲಿ ಕೋರಿದ್ದಾರೆ.
ಕೃಷ್ಣ ಅವರ ಕೆಲವು ಸಂಬಂಧಿಕರು ವಿದೇಶದಲ್ಲಿದ್ದ ಕಾರಣ ಅಂತ್ಯ ಸಂಸ್ಕಾರ ಕಾರ್ಯವನ್ನು ಬುಧವಾರ ನಡೆಸಲು ಅವರ ಕುಟುಂಬ ವರ್ಗದವರು ತೀರ್ಮಾನಿಸಿದ್ದಾರೆ.
ಡಿಸೆಂಬರ್ 11 ರಂದು ಬುಧವಾರ ಕೃಷ್ಣ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಆದ್ದರಿಂದ ಡಿಸೆಂಬರ್ 11 ರಂದು ರಾಜ್ಯಾದ್ಯಂತ ಎಲ್ಲಾ ಸರಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಸರಕಾರಿ ಶಾಲಾ ಕಾಲೇಜುಗಳಿಗೆ ( ಎಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಸೇರಿದಂತೆ) ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಡಿಸೆಂಬರ್ 10 ರಿಂದ 12 ರ ತನಕ ಒಟ್ಟು ಮೂರು ದಿನಗಳು ರಾಜ್ಯಾದ್ಯಂತ ಶೋಕಾಚರಣೆ ಮಾಡಲು ತೀರ್ಮಾನವಾಗಿದ್ದು, ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ನಿಯಮಿತವಾಗಿ ರಾಜ್ಯ ಸರಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ಸೂಚಿಸಲಾಗಿದೆ.
Leave A Reply