ಮಲ್ಟಿಪ್ಲೆಕ್ಸ್ ಟಿಕೆಟ್ ದರ ಗರಿಷ್ಟ 200 ರೂಗೆ ಫಿಕ್ಸ್ ಯಾವಾಗ?

ರಾಜ್ಯ ಸರಕಾರವೇನೋ ಬಜೆಟಿನಲ್ಲಿ ಜನಪ್ರಿಯ ಘೋಷಣೆಗಳನ್ನು ಮಾಡುತ್ತದೆ, ಅದನ್ನು ನೋಡಿ ಜನ ಅಂದು, ಮರುದಿನ, ಹೆಚ್ಚೆಂದರೆ ವಾರ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ನಂತರ ಇವರ ಹಣೆಬರಹವೇ ಇಷ್ಟು ಎಂದು ಅದನ್ನು ಪಕ್ಕಕ್ಕೆ ಇಟ್ಟು ಮರೆತುಬಿಡುತ್ತಾರೆ. ಮಲ್ಟಿಫ್ಲೆಕ್ಸ್ ನ ವಿಷಯದಲ್ಲಿಯೂ ಹೀಗೆ ಆಗಬಾರದು ಎಂದಾದರೆ ಬಜೆಟಿನಲ್ಲಿ ಘೋಷಣೆ ಮಾಡಿದ್ದನ್ನು ಸರಕಾರ ಶೀಘ್ರ ಈಡೇರಿಕೆಗೆ ಇಚ್ಚಾಶಕ್ತಿ ತೋರಿಸಬೇಕು.
ಮಲ್ಟಿಫ್ಲೆಕ್ಸ್ ನಲ್ಲಿ ಆರಾಮ ಆಸೀನದಲ್ಲಿ ಕುಳಿತು ತಣ್ಣನೆಯ ವಾತಾವರಣದಲ್ಲಿ ಸಿನೆಮಾ ನೋಡಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಮಲ್ಟಿಫ್ಲೆಕ್ಸ್ ಟಿಕೆಟ್ ದರ ಮಧ್ಯಮ ವರ್ಗದವರ ಕೈಗೆ ಎಟಕುವುದೇ ಕಷ್ಟವಾಗಿತ್ತು. ಒಂದೊಂದು ಸಿನೆಮಾದ ಟಿಕೆಟ್ ದರ ನೋಡಿದರೆ ಸಾಮಾನ್ಯ ಜನ ಮಲ್ಟಿಫ್ಲೆಕ್ಸ್ ನಲ್ಲಿ ಸಿನೆಮಾ ನೋಡುವ ಆಸೆಯನ್ನೇ ಕೈಬಿಡುತ್ತಿದ್ದರು. ಆದರೆ ಇಲ್ಲಿನ ಜನರ ಹಣ ಕೊಳ್ಳೆ ಹೊಡೆದು ಪರಭಾಷಿಗರು ಬೆಳೆಯುವುದಕ್ಕೆ ಕಡಿವಾಣ ಹಾಕಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಬಜೆಟಿನಲ್ಲಿ ಟಿಕೆಟ್ ದರ ಗರಿಷ್ಟ 200 ರೂ ಮೀರುವಂತಿಲ್ಲ ಎಂದು ಘೋಷಿಸಿದೆ. ಆದರೆ ಘೋಷಿಸಿದ ಕೂಡಲೇ ಅದು ಜಾರಿಗೆ ಬರುವುದಿಲ್ಲ.
ಅದನ್ನು ಕ್ಯಾಬಿನೆಟ್ ನಲ್ಲಿ ಮಂಡಿಸಿ ಅಲ್ಲಿ ಮಂಜೂರಾತಿ ಸಿಕ್ಕಿದ ನಂತರ ಸಂಬಂಧಪಟ್ಟ ಇಲಾಖೆಯು ಆ ಯೋಜನೆಯ ಅನುಷ್ಠಾನಕ್ಕೆ ಬೇಕಾದ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸುತ್ತದೆ. ನಂತರ ಇದು ನಿಯಮವಾಗಿ ಜಾರಿಗೆ ಬರುತ್ತದೆ. ಈ ಅಧಿಸೂಚನೆಯ ಬಳಿಕ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಆಗ ಪ್ರಕ್ರಿಯೆಗೆ ತಡೆ ಬಿದ್ದರೂ ಆಶ್ಚರ್ಯವಿಲ್ಲ.
ಕೆಲವು ನಿರ್ಮಾಪಕರು ನಮ್ಮ ಸಿನೆಮಾಗೆ ದೊಡ್ಡ ಬಜೆಟ್ ತಗುಲಿದೆ. ಹಾಗಿರುವಾಗ ನಾವು ಕಡಿಮೆ ರೇಟ್ ಇಟ್ಟರೆ ಅಸಲು ಬರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಅಂತವರ ವಾದದಲ್ಲಿ ಹುರುಳಿರುವುದಿಲ್ಲ. ಯಾಕೆಂದರೆ ಅಂತಹ ಸಿನೆಮಾಗಳಿಗೆ ಕಡಿಮೆ ದರ ಇದ್ದಲ್ಲಿ ಪ್ರೇಕ್ಷಕರ ಸಂಖ್ಯೆ ಐದು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆಗ ಖಂಡಿತವಾಗಿ ಲಾಭ ಬರುತ್ತದೆ. ಆದರೆ ಸಿನೆಮಾದ ಮೇಲೆ ನಂಬಿಕೆ ಇಲ್ಲದೇ ಮೊದಲ ವಾರ ಸಿಕ್ಕಿದ್ದನ್ನು ಬಾಚುವ ಐಡಿಯಾದೊಂದಿಗೆ ಸಿನೆಮಾ ಮಾಡುವ ನಿರ್ಮಾಪಕರಿಗೆ ಸರಕಾರದ ನಿರ್ಧಾರ ಕಸಿವಿಸಿ ಉಂಟುಮಾಡುತ್ತಿದೆ.
Leave A Reply