ಇಷ್ಟಕ್ಕೆ ಎಲ್ಲವೂ ಮುಗಿಯಿತಾ?

ಮಂಗಳೂರು ಮಹಾನಗರ ಪಾಲಿಕೆ ಅಚಾನಕ್ ಆಗಿ ಸುದ್ದಿಯಲ್ಲಿದೆ. ಪಾಲಿಕೆಯ ಪ್ರಮುಖ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್ ಗಳನ್ನು ತೆಗೆಯುವ ಕಾಯಕ ಪಾಲಿಕೆಯ ಕಡೆಯಿಂದ ಬಿರುಸಿನಿಂದ ಸಾಗಿದೆ. ಇರಲಿ, ಕೊನೆಗೂ ಎಚ್ಚೆತ್ತುಕೊಂಡರು ಎಂದೇ ಇಟ್ಟುಕೊಳ್ಳೋಣ. ಆದರೆ ಇಷ್ಟಕ್ಕೆ ಎಲ್ಲವೂ ಮುಗಿಯಿತಾ? ಇಲ್ಲ. ಹೋರ್ಡಿಂಗ್ಸ್ ಯಾರು ನೋಡುವುದು. ಈಗ ಫ್ಲೆಕ್ಸ್ ಗಳಲ್ಲಿ ಸರಕಾರ ನಿಷೇಧಿಸಿರುವ ವಸ್ತುಗಳನ್ನು ಬಳಸಲಾಗಿದೆ, ಅದು ಕಾನೂನು ವಿರೋಧಿ ಎನ್ನುವ ಕಾರಣಕ್ಕೆ ತೆಗೆಯುವುದೇ ಆಗಿದ್ದರೆ ಹೋರ್ಡಿಂಗ್ಸ್ ಗಳು ಎಷ್ಟು ಸಾಚಾ ಇವೆ ಎನ್ನುವುದನ್ನು ಕೂಡ ನೋಡಬೇಕಲ್ಲ. ಹಿಂದೆ ಹೋರ್ಡಿಂಗ್ಸ್ ಗಳನ್ನು ಪೇಂಟ್ ಬಳಸಿಯೇ ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತಿತ್ತು. ಆದರೆ ಈಗ ಫ್ಲೆಕ್ಸ್ ನಲ್ಲಿ ಯಾವ ನಿಷೇಧಿತ ವಸ್ತುಗಳನ್ನು ಬಳಸಲಾಗುತ್ತಿದೆಯೋ ಅದನ್ನೇ ಹೋರ್ಡಿಂಗ್ಸ್ ಗಳಲ್ಲಿ ಬಳಸಲಾಗುತ್ತದೆ. ಹಾಗಾದ್ರೆ ಅದನ್ನು ಕೂಡ ತೆಗೆಯಬೇಕಲ್ಲವೇ?
ಹಾಗಾದ್ರೆ ಅವರಿಗೆ ಯಾಕೆ ನೋಟಿಸು ಕೊಟ್ಟಿಲ್ಲ. ಪಾಲಿಕೆಗೂ, ಹೋರ್ಡಿಂಗ್ಸ್ ಸಂಸ್ಥೆಯವರಿಗೂ ಏನಾದರೂ ಒಳ ಒಪ್ಪಂದ ಇದೆಯಾ? ಅದಕ್ಕೆ ಹೋರ್ಡಿಂಗ್ಸ್ ನವರ ವಿಷಯಕ್ಕೆ ಪಾಲಿಕೆ ಹೋಗುತ್ತಿಲ್ಲವೇ? ಇನ್ನು ಫ್ಲೆಕ್ಸ್ ಗಳನ್ನು ತೆಗೆಯುವುದು ಯಾಕೆ? ಅನಧಿಕೃತ ಎಂಬ ಶಬ್ದ ಬಳಸುವುದು ಯಾಕೆ ಎಂಬ ವಿಷಯಕ್ಕೆ ಬರೋಣ.
ಫ್ಲೆಕ್ಸ್ ಗಳಲ್ಲಿ ಬಳಸುವ ವಸ್ತುಗಳು ಪರಿಸರದಲ್ಲಿ ಕರಗುವುದಿಲ್ಲ, ಅವು ಈ ಮಣ್ಣಿನ ಫಲವತ್ತತೆಗೆ ಸಂಚಕಾರ ತರುತ್ತವೆ ಎನ್ನುವ ಕಾರಣಕ್ಕೆ ಸ್ಥಳಿಯಾಡಳಿತ ಸಂಸ್ಥೆಗಳು ಅಥವಾ ರಾಜ್ಯ ಸರಕಾರ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ನಿಷೇಧ ಮಾಡಿವೆ. ಈ ನಿಯಮಗಳನ್ನು ಉಲ್ಲಂಘಿಸಿ ಫ್ಲೆಕ್ಸ್ ತಯಾರಿಸಿ ರಾರಾಜಿಸಲು ಹೋಗುವುದು ನಿಯಮ ಉಲ್ಲಂಘನೆಯಾಗುತ್ತದೆ. ಹಾಗಾದರೆ ಫ್ಲೆಕ್ಸ್ ಗಳನ್ನು ಹಾಕಲೇಬಾರದಾ? ಹಾಕಬಹುದು, ಆದರೆ ಬಟ್ಟೆಗಳಿಂದ ತಯಾರಿಸಬೇಕು. ಹಾಗಾದ್ರೆ ಬಟ್ಟೆಗಳಿಂದ ತಯಾರಿಸಿದ ಎಲ್ಲಾ ಫ್ಲೆಕ್ಸ್ ಗಳು ಅಧಿಕೃತವೇ? ಇಲ್ಲೊಂದು ಸೂಕ್ಷ್ಮತೆ ಇದೆ. ಬಟ್ಟೆಯಿಂದ ತಯಾರಿಸಿದ ಫ್ಲೆಕ್ಸ್ ಹಾಕುವವರು ತಾವು ಹತ್ತು ಅಂತಹ ಫ್ಲೆಕ್ಸ್ ಹಾಕುವುದಾದರೆ ಅಷ್ಟು ಫ್ಲೆಕ್ಸ್ ಮಡಚಿ ಪಾಲಿಕೆಗೆ ತಂದು ಬಟ್ಟೆಯ ಫ್ಲೆಕ್ಸ್ ಹಾಕುವ ಆ ಹತ್ತು ಸ್ಥಳಗಳ ಹೆಸರುಗಳನ್ನು ಪಟ್ಟಿ ಮಾಡಿ ಅದನ್ನು ಸಂಬಂಧಪಟ್ಟ ವಿಭಾಗಕ್ಕೆ ಕೊಡಬೇಕು. ಅದರ ಪ್ರಕಾರ ಅಧಿಕಾರಿಗಳು ಹತ್ತು ಫ್ಲೆಕ್ಸ್ ಗಳಾದರೆ ಎಲ್ಲದರಲ್ಲಿಯೂ ಒಂದು ಮೂಲೆಯಲ್ಲಿ ಸೀಲ್ ಹೊಡೆದು, ಚಿಕ್ಕದಾಗಿ ಸಂಖ್ಯೆ ಬರೆದು, ಆ ಫ್ಲೆಕ್ಸ್ ಹಾಕುವ ಸ್ಥಳವನ್ನು ನಮೂದಿಸಬೇಕು. ಒಂದು ವೇಳೆ ಒಂದು ಏರಿಯಾದಲ್ಲಿ ಫ್ಲೆಕ್ಸ್ ಇದ್ದು, ಅದರ ಕೆಳಗೆ ಮೇಲೆ ಹೇಳಿದ ಮಾಹಿತಿ ಇಲ್ಲದೇ ಹೋದರೆ ಸಂಶಯವೇ ಇಲ್ಲ ಅದು ಅನಧಿಕೃತ. ಇಲ್ಲಿಯ ತನಕ ಆದದ್ದೇ ಅದು. ಐವತ್ತು ಫ್ಲೆಕ್ಸ್ ಹಾಕುತ್ತೇವೆ ಎಂದು ಅದಕ್ಕೆ ನಿಗದಿಪಡಿಸಿದ ಹಣ ಕಟ್ಟುವುದು, ಇನ್ನೂರು ಫ್ಲೆಕ್ಸ್ ಹಾಕುವುದು. ಉಳಿದ ಹಣ ಸರಕಾರಕ್ಕೆ ಹಿಡಿಸುವುದು. ಇದು ಫ್ಲೆಕ್ಸ್ ಪ್ರಿಂಟರ್ ಗಳಿಗೂ, ಪಾಲಿಕೆಯ ಅಧಿಕಾರಿಗಳಿಗೂ, ಫ್ಲೆಕ್ಸ್ ಹಾಕಿಸಿದ ಸಂಘಟನೆಯವರಿಗೂ ಗೊತ್ತೆ ಇದೆ.
ಇನ್ನು ಪಾಲಿಕೆಯ ಇತಿಹಾಸದಲ್ಲಿ ಇಲ್ಲಿಯ ತನಕ ಅನಧಿಕೃತ ಫ್ಲೆಕ್ಸ್ ಹಾಕಿದವರಿಗೆ ಯಾರಿಗೂ ದಂಡ ಹಾಕಿದ ಉದಾಹರಣೆ ಇಲ್ಲ. ಯಾಕೆಂದರೆ ಫ್ಲೆಕ್ಸ್ ಪ್ರಿಂಟರ್ ಗಳಿಗೂ, ಹೋರ್ಡಿಂಗ್ಸ್ ಸಂಸ್ಥೆಗಳಿಗೂ ರಾಜಕೀಯ ನಾಯಕರ ಕೃಪಾಕಟಾಕ್ಷ ಇದೆ. ಫ್ಲೆಕ್ಸ್ ಹಾಕಲೇಬಾರದು ಎಂದು ಯಾರೂ ಹೇಳುವುದಿಲ್ಲ. ಆದರೆ ಅಧಿಕೃತವಾಗಿ ಬಟ್ಟೆಯಿಂದ ತಯಾರಿಸಿದ, ನಿಷೇಧಿತ ವಸ್ತುಗಳನ್ನು ಬಳಕೆ ಮಾಡಿಲ್ಲದೇ, ಎಷ್ಟಕ್ಕೆ ಹಣ ಕಟ್ಟಿದ್ದೀರೋ ಅಷ್ಟೇ ಹಾಕುವ ಮೂಲಕ ಎಲ್ಲರೂ ಕಾನೂನನ್ನು ಪಾಲಿಸೋಣ. ಯಾಕೆಂದರೆ ನಗರದ ಸೌಂದರ್ಯ ಎನ್ನುವುದು ಕೇವಲ ದಾಖಲೆಗಳಲ್ಲಿ ಮಾತ್ರವಲ್ಲದೇ, ಅನುಷ್ಠಾನಕ್ಕೂ ಬರಲು ಎಲ್ಲರೂ ಕೈಜೋಡಿಸಬೇಕಾಗಿದೆ.
Leave A Reply