ನಾಗಪುರದ ನಷ್ಟ ಕಟ್ಟಿ, ತಪ್ಪಿದರೆ ಆಸ್ತಿ ಮುಟ್ಟುಗೋಲು – ಪಡ್ನವೀಸ್ ಎಚ್ಚರಿಕೆ!

ಮಹಾರಾಷ್ಟದ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ನಾಗಪುರದ ಕೋಮು ಗಲಭೆಯ ಬಗ್ಗೆ ತೀಕ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಾಗಪುರದಲ್ಲಿ ಅಂಗಡಿ ಮುಂಗಟ್ಟುಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು ಅದರ ನಷ್ಟವನ್ನು ಅವರೇ ಭರಿಸಬೇಕು. ನಷ್ಟ ಭರಿಸಲು ತಯಾರಿಲ್ಲದವರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗುವುದು ಮತ್ತು ಅಗತ್ಯಬಿದ್ದರೆ ಅಂತವರ ಅಕ್ರಮ ಕಟ್ಟಡಗಳಿಗೆ ಬುಲ್ಡೋಜರ್ ಪ್ರಯೋಗ ಬಳಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಪೊಲೀಸರು 68 ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಜಾಲಾಡಿದ್ದು, ಅವುಗಳಿಂದಲೇ ಸುಳ್ಳು ಸುದ್ದಿ ಹರಡಿ ಇಷ್ಟೆಲ್ಲಾ ಆವಾಂತರಗಳಿಗೆ ಕಾರಣವಾಯಿತು ಎಂದು ಪತ್ತೆ ಹಚ್ಚಿದ್ದಾರೆ. ಈಗ ಅಂತವರ ವಿರುದ್ಧ ಕಾನೂನು ಪ್ರಕ್ರಿಯೆ ತೀವ್ರಗೊಳಿಸಲು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನು ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗುವ ಪೋಸ್ಟ್ ಗಳನ್ನು ಹಂಚಿಕೊಳ್ಳುವುದನ್ನು ಅಪರಾಧಕ್ಕೆ ಸಮ ಎಂದು ಎಚ್ಚರಿಕೆ ಕೊಟ್ಟಿರುವ ಪೊಲೀಸ್ ಇಲಾಖೆ, ಧಾರ್ಮಿಕ ಸಂದೇಶಗಳಿಂದ ಯಾವುದೇ ದುರ್ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಜನರ ಮೇಲಿದೆ ಎಂದಿದೆ.
ಈ ಎಲ್ಲಾ ಘಟನೆಗಳ ಹೊರತಾಗಿ ಪ್ರಧಾನಿ ನರೇಂದ್ರ ಮೋದಿಯವರ ನಾಗಪುರ ಭೇಟಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ ಪಡ್ನವೀಸ್ ಅದಕ್ಕಾಗಿ ಎಲ್ಲಾ ಸೂಕ್ತ ಭದ್ರತೆಯನ್ನು ಕೈಗೊಳ್ಳುವುದಾಗಿ ತಿಳಿಸಿದರು. ಈ ನಡುವೆ ಆರೋಪಿಗಳನ್ನು ಹೆಡೆಮುರಿ ಕಟ್ಟುವ ಮಹಾರಾಷ್ಟ್ರ ಪೊಲೀಸರ ಕ್ರಮ ಬಿರುಸು ಪಡೆದಿದ್ದು, ಇಲ್ಲಿಯ ತನಕ 100 ವ್ಯಕ್ತಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಇನ್ನು ಅಂತವರ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗುತ್ತಿದ್ದು, ಅವರ ಆಸ್ತಿಗಳ ಬಗ್ಗೆ ದಾಖಲೆ ಪರಿಶೀಲಿಸುವ ಕಾರ್ಯವೂ ಪ್ರಗತಿಯಲ್ಲಿದೆ.
ಇನ್ನು ಔರಂಗಾಜೇಬನ ಸಮಾಧಿಯ ವಿವಾದದಿಂದ ಕೋಮು ಗಲಭೆ ಬುಗಿಲೆದ್ದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿರುವ ತರಹೇವಾರಿ ಕಮೆಂಟ್ ಬಗ್ಗೆನೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಸುಳ್ಳು ಸುದ್ದಿ ಹರಡಿಸಿ ಗಲಭೆಗೆ ಕಾರಣವಾಗುವವರ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.
Leave A Reply