ನಂದಿನಿ ಹಾಲಿನ ದರ 3 ರೂ ಹೆಚ್ಚಿಸಲು ಬಹುತೇಕ ನಿರ್ಧಾರ?

ಕರ್ನಾಟಕದಲ್ಲಿ ಈಗ ದರ ಹೆಚ್ಚಳದ ಪರ್ವ ಆರಂಭವಾಗಿರುವುದು ಜನಸಾಮಾನ್ಯರಿಗೆ ಗೊತ್ತಿಲ್ಲದ ವಿಷಯವೇನಿಲ್ಲ. ಈಗಾಗಲೇ ಮೆಟ್ರೋ, ಸಾರಿಗೆ ದರ ಹೆಚ್ಚಳದ ಬಳಿಕ ಈಗ ನಂದಿನಿ ಹಾಲಿಗೂ ಬೆಲೆ ಹೆಚ್ಚಳ ಮಾಡುವ ಮೂಲಕ ಪಾಪದವರ ಜೇಬಿಗೆ ಹೊರೆ ಹಾಕಿ ಭವಿಷ್ಯದಲ್ಲಿ ಹೋಟೇಲುಗಳಲ್ಲಿ ಕಾಫಿ, ಟೀ ಕುಡಿಯುವವರಿಗೂ ಸಂಕಟ ತರಲು ರಾಜ್ಯ ಸರಕಾರ ಸಜ್ಜಾಗಿದೆ.
ಹಾಲು ಒಕ್ಕೂಟಗಳು ಲೀಟರಿಗೆ 5 ರೂ ಹೆಚ್ಚಳ ಮಾಡಲು ಮುಖ್ಯಮಂತ್ರಿಯವರನ್ನು ಈಗಾಗಲೇ ಕೋರಿವೆ. ಆದರೆ ಸಿದ್ಧರಾಮಯ್ಯ ಮೂರು ರೂ ಹೆಚ್ಚಳ ಮಾಡಲು ಒಪ್ಪಿದ್ದಾರೆ. ಸಾಮಾನ್ಯವಾಗಿ ನಡೆಯುವುದೇ ಹೀಗೆ. ಹಾಲು ಒಕ್ಕೂಟಗಳಿಗೂ ಅದು ಗೊತ್ತಿದೆ. ಆದ್ದರಿಂದ ಅವರು ಮೊದಲೇ ಜಾಸ್ತಿ ದರ ಹೆಚ್ಚಳ ಮಾಡಲು ವಿನಂತಿಸುತ್ತವೆ. ಐದು ರೂ ಹೆಚ್ಚಳ ಕೇಳಿದ್ರೆ ಮೂರು ರೂಪಾಯಿ ಆದ್ರೂ ಹೆಚ್ಚಳ ಆಗುತ್ತದೆ ಎನ್ನುವ ನಂಬಿಕೆ ಇದೆ. ಈಗಲೂ ಹಾಗೆ ಆಗಿದೆ. ಅದರಂತೆ ಈಗ ಮೂರು ರೂ ಹೆಚ್ಚಳ ಆಗಲು ಸಮಯ ನಿಗದಿಯಾಗಿದೆ. ಆದರೆ ಸಿಎಂ ಒಂದು ಷರತ್ತು ಮಾತ್ರ ಬೆಲೆ ಹೆಚ್ಚಳ ಯಾವತ್ತು ಆಗುತ್ತದೆ ಎನ್ನುವುದನ್ನು ನಿಗದಿಪಡಿಸಿಲ್ಲ.
ಸಿಎಂ ಪ್ರಕಾರ ಹೆಚ್ಚಿಸಲಿರುವ ಮೂರು ರೂಪಾಯಿ ಕೂಡ ರೈತರಿಗೆ ಹೋಗಬೇಕು ಎಂದಿದ್ದಾರೆ. ಆದರೆ ಒಕ್ಕೂಟಗಳು ಅದನ್ನು ಒಪ್ಪುತ್ತಿಲ್ಲ. ಒಂದಿಷ್ಟು ಭಾಗ ಒಕ್ಕೂಟಗಳಿಗೆ ಹೋಗಬೇಕು ಎನ್ನುವುದು ಅವರ ಹಟ. ಇದರಿಂದ ಈ ವಿಷಯ ಈಗ ಕ್ಯಾಬಿನೆಟ್ ಅಂಗಳದಲ್ಲಿದೆ.
ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಕೆಎಂಎಫ್ ಅಧ್ಯಕ್ಷರು ಹಾಗೂ ಜಿಲ್ಲಾ ಒಕ್ಕೂಟದ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ದರ ಏರಿಕೆಯ ಬಗ್ಗೆ ಸಮಾಲೋಚನೆ ನಡೆದಿದೆ. ಇಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡಲು ಸಿಎಂ ಒಪ್ಪಿದರೂ ಈ ಹೆಚ್ಚುವರಿ ಹಣ ರೈತರಿಗೆ ಹೋಗುವ ವಿಷಯದಲ್ಲಿ ಎರಡೂ ಕಡೆ ಒಮ್ಮತ ಬರಲು ಅಸಾಧ್ಯವಾಗಿದೆ. ಒಕ್ಕೂಟಗಳ ವಿಚಾರ ಏನೆಂದರೆ ರೈತರಿಂದ ಖರೀದಿಸಿದ ಅಷ್ಟೂ ಹಾಲನ್ನು ಮಾರಾಟ ಮಾಡುವುದಿಲ್ಲ. ಎಷ್ಟು ಬೇಡಿಕೆ ಇದೆಯೋ ಅಷ್ಟು ಮಾತ್ರ ಮಾರಾಟ ಮಾಡಿ ಉಳಿದದ್ದನ್ನು ಹಾಲಿನ ಪುಡಿಯಾಗಿ ಮಾಡುತ್ತೇವೆ ಎಂದಿದ್ದಾರೆ.
ಒಕ್ಕೂಟಗಳ ಪ್ರಕಾರ ನಮಗೂ ಆಡಳಿತಾತ್ಮಕ ನಿರ್ವಹಣೆಗೆ ಸಾಕಷ್ಟು ಖರ್ಚು ಇದೆ. ಅದನ್ನು ಇದರಿಂದಲೇ ಪಡೆಯಬೇಕು. ಏರಿಸಿದ ಅಷ್ಟೂ ದರವನ್ನು ಎಲ್ಲವನ್ನು ರೈತರಿಗೆ ನೀಡಿದರೆ ನಾವು ಏನು ಮಾಡುವುದು ಎಂದು ಹೇಳಿರುವುದು ಸಿದ್ಧರಾಮಯ್ಯನವರಿಗೆ ಸರಿ ಕಾಣಲಿಲ್ಲ. ಅದಕ್ಕೆ ಮರು ಪ್ರತಿಕ್ರಿಯಿಸಿದ ಸಿಎಂ, ಹಾಲು ಒಕ್ಕೂಟಗಳು ಖರ್ಚು, ವೆಚ್ಚವನ್ನು ಕಡಿಮೆ ಮಾಡಬೇಕು. ಪಾರದರ್ಶಕತೆ ಪಾಲಿಸಬೇಕು. ಕೆಲ ಒಕ್ಕೂಟಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕೆಲಸದವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಅದು ಬೇಕಾಗಿಲ್ಲ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದ ಖರ್ಚು ಹೆಚ್ಚಿದೆಯೇ ವಿನ: ಬೇರೆ ಏನೂ ಅಲ್ಲ. ಆಡಳಿತಾತ್ಮಕ ವೆಚ್ಚ 2% ಮೀರಬಾರದು. ಮುಂದಿನ ಆರು ತಿಂಗಳೊಳಗೆ ಆಡಳಿತಾತ್ಮಕ ವೆಚ್ಚವನ್ನು 2% ಕ್ಕೂ ಕಡಿಮೆ ಇಳಿಸಬೇಕು ಎಂದು ಹೇಳಿದರು.
ಒಟ್ಟಿನಲ್ಲಿ ಹಾಲಿನ ದರ ಹೆಚ್ಚಳ ಮಾಡುವ ಪ್ರಕ್ರಿಯೆಗೆ ಚಾಲನೆ ದೊರಕಿರುವುದು ನಿಜ. ಒಕ್ಕೂಟಗಳ ಖರ್ಚು, ವೆಚ್ಚವನ್ನು ಕಡಿಮೆ ಮಾಡಿ ಜನಸಾಮಾನ್ಯರ ಮೇಲೆ ದರ ಹೆಚ್ಚಳದ ಬರೆ ಹಾಕುವ ಕೆಲಸವನ್ನು ಸರಕಾರ ನಿಲ್ಲಿಸುವುದಾ ಅಥವಾ ಒಕ್ಕೂಟಗಳನ್ನು ಬಿಳಿಯಾನೆಯಂತೆ ಸಾಕಿ ಅವುಗಳ ಹೊರೆಯನ್ನು ಪಾಪದವರ ಮೇಲೆ ಹಾಕುವ ಪ್ರಕ್ರಿಯೆ ಮುಂದುವರೆಯುತ್ತಾ ನೋಡಬೇಕು.
Leave A Reply