ನಗ್ನಚಿತ್ರ ವೈರಲ್ ಭಯಕ್ಕೆ 83 ರ ಗಂಡ, 79 ರ ಪತ್ನಿ ಆತ್ಮಹತ್ಯೆ!

ಸೈಬರ್ ಕಳ್ಳರ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಅವರ ಬಲೆಗೆ ಬೀಳುವುದು ಮಾತ್ರ ನಿಂತಿಲ್ಲ. ಆ ದಂಪತಿಯಲ್ಲಿ ಗಂಡನಿಗೆ 83 ವರ್ಷ. ಹೆಂಡತಿಗೆ 79 ವರ್ಷ. ಗಂಡನ ಹೆಸರು ಡಿಯಾಗೋ ನಜರತ್. ಮಹಾರಾಷ್ಟ್ರ ಸೆಕ್ರೆಟರಿಯೇಟ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹೆಂಡತಿ ಪಾವಿಯಾ ಜೊತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಎಂಬಲ್ಲಿ ನೆಲೆಸಿದ್ದರು.
ಸರಕಾರಿ ಉದ್ಯೋಗಿಯಾಗಿರುವುದರಿಂದ ಇವರ ಬಳಿ ಸಾಕಷ್ಟು ಹಣವಿರುವುದು ಸೈಬರ್ ಕಳ್ಳರ ಗಮನಕ್ಕೆ ಬಂದಿದೆ. ಇವರ ಮೊಬೈಲಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಅವರಿಬ್ಬರ ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೇಡಿಕೆ ಇಟ್ಟಿದ್ದಾರೆ. ಒಂದು ತಿಂಗಳಿನಿಂದ ನಿತ್ಯ ಈ ದಂಪತಿಗೆ ಕರೆ ಮಾಡಿ ಹೆದರಿಸುತ್ತಾ ಬರುತ್ತಿದ್ದಾರೆ. ಇವರ ಬೆದರಿಕೆಗೆ ಬೇಸತ್ತು ಈಗಾಗಲೇ ಆರು ಲಕ್ಷ ರೂಪಾಯಿಯನ್ನು ಕಳ್ಳರು ಹೇಳಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಸೈಬರ್ ಕಳ್ಳರ ದಾಹ ಮಾತ್ರ ಆರಿರಲಿಲ್ಲ. ಅವರು ಇನ್ನಷ್ಟು ಹಣ ನೀಡಲು ಮತ್ತೆ ಬೇಡಿಕೆ ಇಡುತ್ತಾ ಇದ್ದರು. ಕೊನೆಗೆ ಹಂತಹಂತವಾಗಿ 50 ಲಕ್ಷ ರೂಪಾಯಿ ಹಣ ಸೈಬರ್ ಕಳ್ಳರ ಅಕೌಂಟಿಗೆ ಸೇರಿದೆ.
ಸೈಬರ್ ಕಳ್ಳರು ಆರಂಭದಲ್ಲಿ ತಾವು ದೆಹಲಿ ಕ್ರೈಂ ಬ್ರಾಂಚಿನ ಅಧಿಕಾರಿಗಳು ಎಂದು ವಿಡಿಯೋ ಕಾಲ್ ಮಾಡಿದ್ದಾರೆ. ನೀವು ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿ ಎಂದು ಸುಳ್ಳು ಕೇಸ್ ಬಗ್ಗೆ ಕತೆ ಕಟ್ಟಿದ್ದಾರೆ. ಈ ಕೇಸ್ ಬರ್ಖಾಸ್ತು ಮಾಡಲು ಐದು ಲಕ್ಷ ನೀಡಲು ತಿಳಿಸಿದ್ದಾರೆ. ನಿಮ್ಮಿಬ್ಬರ ನಗ್ನ ವಿಡಿಯೋಗಳು ನಮ್ಮಲ್ಲಿ ಇರುವುದು ಎಂದು ಯಾವುದೋ ಎಐ ತರಹದ್ದು ತೋರಿಸಿದ್ದಾರೆ. ಹಣ ಕೊಟ್ಟು ಕೊಟ್ಟು ಸುಸ್ತಾದ ವೃದ್ಧ ದಂಪತಿಗಳು ಇದು ಮುಗಿಯುವ ಕಥೆ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ತಾವು ಸತ್ತರೆ ಮಾತ್ರ ಇದಕ್ಕೊಂದು ಪರಿಹಾರ ಸಿಗುತ್ತೆ ಎಂದು ಅವರಿಗೆ ಅನಿಸಿದೆ. ಕೊನೆಗೆ ಈ ಉಪಟಳ ಸಹಿಸಲಾರದೇ ಪಾವಿಯಾ ನಿದ್ರೆ ಮಾತ್ರೆ ವಿಪರೀತ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಪತಿ ಡಿಯಾಗೋ ನಜರತ್ ಡೆತ್ ನೋಟ್ ಬರೆದಿಟ್ಟು ಚಾಕುವಿನಿಂದ ಗಂಟಲು ಚೀರಿ ಪತ್ನಿಯ ದಾರಿ ಹಿಡಿದಿದ್ದಾರೆ. ಈ ಹಿರಿಯ ದಂಪತಿಗೆ ಮಕ್ಕಳಿರಲಿಲ್ಲ. ಇನ್ನು ಹತ್ತಿರದ ಸಂಬಂಧಿಗಳು ಎಂದು ಇವರಿಗೆ ಯಾರೂ ಇರಲಿಲ್ಲ ಎನ್ನಲಾಗುತ್ತಿದ್ದು, ಆದ್ದರಿಂದ ಇಂತಹ ಸಂದರ್ಭದಲ್ಲಿ ಅವರು ತಮ್ಮ ಸಂಕಟವನ್ನು ಯಾರ ಬಳಿಯೂ ಹೇಳಲಾಗದೇ ಒದ್ದಾಡಿಬಿಟ್ಟಿದ್ದರು. ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave A Reply