ಚೆನ್ನೈ ಸೂಪರ್ ಕಿಂಗ್ ಮಾಲೀಕರ ಒತ್ತಾಯಕ್ಕೆ ಧೋನಿ ಆಡುತ್ತಿದ್ದಾರಾ?

ಮಹೇಂದ್ರ ಸಿಂಗ್ ಧೋನಿ ಜಗತ್ತು ಕಂಡ ಅತ್ಯುತ್ತಮ ವಿಕೆಟ್ ಕೀಪರ್ ಮತ್ತು ಮಾದರಿ ಕಪ್ತಾನ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಅವರ ಬ್ಯಾಟಿಂಗ್ ಅಬ್ಬರದ ಎದುರು ಯಾವ ಬೌಲರ್ ಗಳು ಕೂಡ ಮೈಚಳಿ ಬಿಟ್ಟು ಬೌಲ್ ಮಾಡುವುದು ಕಷ್ಟಸಾಧ್ಯ. ಧೋನಿ ಯಾವ ಐಪಿಎಲ್ ತಂಡದಲ್ಲಿದ್ದರೂ ಆ ತಂಡದ ಆಧಾರಸ್ತಂಭ. ಅದರಲ್ಲಿಯೂ ಚೆನ್ನೈ ಸೂಪರ್ ಕಿಂಗ್ ಯಾವತ್ತಿದ್ದರೂ ಧೋನಿಯನ್ನು ಬಿಟ್ಟುಕೊಡಲು ಹೋಗುವುದಿಲ್ಲ. ಆದರೆ ಈಗ ಅದೇ ವಿಷಯ ಧೋನಿ ಪಾಲಿಗೆ ಕಂಟಕವಾಗುತ್ತಿದೆಯಾ ಎನ್ನುವ ಪ್ರಶ್ನೆ ಉದ್ಭವವಾಗುತ್ತಿದೆ. ತಾನು ವೀಲ್ ಚೇರ್ ನಲ್ಲಿದ್ದರೂ ಚೆನ್ನೈ ಸೂಪರ್ ಕಿಂಗ್ ನವರು ನನ್ನನ್ನು ಆಡಿಸುತ್ತಾರೆ ಎಂದು ಧೋನಿ ಹೇಳಿದ ಮರ್ಮ ಈಗ ಜನರಿಗೆ ಅರ್ಥವಾಗುತ್ತಿದೆ. ಈ ಪರಸ್ಪರ ಪ್ರೀತಿ, ವಿಶ್ವಾಸಗಳು ಕೆಲವೊಮ್ಮೆ ಇಬ್ಬರಿಗೂ ನುಂಗಲಾರದ ತುತ್ತಾಗುತ್ತದೆಯಾ ಎನ್ನುವುದನ್ನು ಅವರಿಬ್ಬರೇ ಕುಳಿತು ಸಮಾಲೋಚಿಸಬೇಕು.
ಯಾಕೆಂದರೆ ಚೆನ್ನೈ ಸೂಪರ್ ಕಿಂಗ್ ಪ್ರಧಾನ ಕೋಚ್ ಸ್ಟೀಫನ್ ಫ್ಲೇಮಿಂಗ್ ಹೇಳಿಕೆಯೇ ಈಗ ಧೋನಿ ಕ್ರೀಡಾಕ್ಷಮತೆಯನ್ನು ಬಯಲಿಗೆ ಎಳೆದಿದೆಯಾ ಎನ್ನುವ ಸಂದೇಹ ಕಾಡುತ್ತಿದೆ. ಚೆನ್ನೈ ಸೋತ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ” ನಿವೃತ್ತಿಯ ಸಮಯ ಹತ್ತಿರ ಬಂದಿದೆ ಎಂಬುದು ಧೋನಿಗೂ ಗೊತ್ತಿದೆ. ಮೊದಲಿನಂತೆ ಅವರು ಮೈದಾನದಲ್ಲಿ ಓಡಾಡಲು ಆಗುತ್ತಿಲ್ಲ. ನಿರಂತರವಾಗಿ 10 ಓವರ್ ಬ್ಯಾಟ್ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಯಾವ ದಿನದಂದು ತಂಡಕ್ಕೆ ಎಷ್ಟು ಕೊಡುಗೆ ನೀಡಬಹುದು ಎನ್ನುವುದನ್ನು ಧೋನಿಯೇ ನಿರ್ಧರಿಸುತ್ತಾರೆ” ಎಂದು ಹೇಳಿದ್ದಾರೆ.
ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಧೋನಿಯವರು ಕೆಳಗಿನ ಕ್ರಮಾಂಕದಲ್ಲಿ ಆಡಲು ಇಳಿಯುತ್ತಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆಯನ್ನು ತಂದಿದೆ. ಧೋನಿ ಆರಂಭದಲ್ಲಿ ಒಂದೆರಡು ವಿಕೆಟ್ ಹೋದ ತಕ್ಷಣ ಕ್ರೀಸಿಗೆ ಇಳಿಯಬೇಕು ಎನ್ನುವುದು ಕ್ರಿಕೆಟ್ ಪ್ರೇಮಿಗಳ ಬಯಕೆ. ಆದರೆ ಧೋನಿ ಅಂತಿಮ ಏಳನೇ, ಎಂಟನೇ ಸ್ಥಾನದಲ್ಲಿ ಬ್ಯಾಟ್ ಹಿಡಿಯುತ್ತಿರುವುದರಿಂದ ಚೆನ್ನೈ ಸೂಪರ್ ಕಿಂಗ್ ಸ್ಟ್ರಾಟರ್ಜಿಯ ಬಗ್ಗೆ ಸಾಕಷ್ಟು ಆಕ್ರೋಶಗಳು ಎದ್ದಿದ್ದವು. ಈ ಬಗ್ಗೆ ಮಾಜಿ ಕಪ್ತಾನ ವಿರೇಂದ್ರ ಸೆಹ್ವಾಗ್ ಸಹಿತ ಕೆಲವು ಹಿರಿಯ ಕ್ರಿಕೆಟಿಗರು ತಮ್ಮದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇಷ್ಟಿದ್ದರೂ 43 ವರ್ಷದ ಧೋನಿ ಈಗಲೂ ವಿಕೆಟ್ ಹಿಂದುಗಡೆ ಕ್ಷಣಾರ್ಧದಲ್ಲಿ ಸ್ಟಂಪ್ ಮಾಡುವ ತಮ್ಮ ಕಲೆಯನ್ನು ಮರೆತಿಲ್ಲ. ಧೋನಿ ಸ್ಟಂಪ್ ಹಿಂದೆ ನಿಂತಿದ್ದರೆ ಎಂತಹ ಬ್ಯಾಟ್ಸಮನ್ ಆದರೂ ಮೈಯೆಲ್ಲಾ ಕಣ್ಣಾಗಿ ಇರಬೇಕಾಗುತ್ತದೆ ಎನ್ನುವುದು ನಿಜ. ಐಪಿಎಲ್ ನ ಮುಂದಿನ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ ಬ್ಯಾಟಿಂಗ್ ಮಾಡುವಾಗ ಧೋನಿ ಬೇಗ ಕ್ರೀಸಿಗೆ ಬರಲಿ ಎನ್ನುವುದು ಎಲ್ಲರ ಆಶಯ.
Leave A Reply