ಪೆಹಲ್ಗಾಮ್ ಹತ್ಯಾಕಾಂಡ! ಎಪ್ರಿಲ್ 25 ಕ್ಕೆ ದೆಹಲಿ ಬಂದ್!

ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಆದ ಘಟನೆಯನ್ನು ಖಂಡಿಸಿ ದೆಹಲಿ ವರ್ತಕರ ಸಂಘದವರು ಎಪ್ರಿಲ್ 25 ರಂದು ದೆಹಲಿ ಬಂದ್ ಗೆ ಕರೆ ನೀಡಿದ್ದಾರೆ. ವರ್ತಕರ ವಿವಿಧ ಒಕ್ಕೂಟಗಳು ಜಂಟಿಯಾಗಿ ಈ ಬಂದ್ ನಲ್ಲಿ ಭಾಗವಹಿಸಲಿದ್ದು, ಅಂದು ದೆಹಲಿಯಲ್ಲಿ ಎಲ್ಲಾ ಅಂಗಡಿ, ಮುಂಗಟ್ಟುಗಳು ಬಂದ್ ಆಗಲಿವೆ. ಈ ಮೂಲಕ ಹತ್ಯಾಕಾಂಡದಲ್ಲಿ ಮಡಿದವರ ಕುಟುಂಬಕ್ಕೆ ನೈತಿಕ ಸ್ಥೈರ್ಯ ನೀಡಿ ದೇಶ ತೆಗೆದುಕೊಳ್ಳುವ ಯಾವುದೇ ನಿರ್ಧಾರದೊಂದಿಗೆ ನಿಲ್ಲುವ ದೃಢ ಸಂಕಲ್ಪವನ್ನು ದೆಹಲಿಯ ವ್ಯಾಪಾರಿಗಳು ಮಾಡಿದ್ದಾರೆ.
ಭಯೋತ್ಪಾದಕರು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಮಿನಿ ಸ್ವಿಝರ್ ಲ್ಯಾಂಡ್ ಎಂದು ಕರೆಸಿಕೊಂಡಿರುವ ಪ್ರದೇಶದಲ್ಲಿ ವಿಹರಿಸುತ್ತಿದ್ದ ಅನೇಕ ಜೋಡಿಗಳಲ್ಲಿ ಹಿಂದೂ ಪುರುಷರನ್ನು ಗುರುತಿಸಿ ಹತ್ಯೆ ಮಾಡಿದ್ದಾರೆ. ಪೆಹಲ್ಗಾಮ್ ದಕ್ಷಿಣ ಕಾಶ್ಮೀರದಲ್ಲಿ ಇದ್ದು, ಭಯೋತ್ಪಾದಕರ ದಾಳಿಯಲ್ಲಿ ಒಟ್ಟು 26 ಜನ ಸಾವೀಗೀಡಾಗಿದ್ದು, ಅನೇಕರು ಗಾಯಾಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಕಣಿವೆ ರಾಜ್ಯದಲ್ಲಿ 2019 ರಲ್ಲಿ ಫುಲ್ವಾಮಾ ದಾಳಿ ನಡೆದು 40 ಸಿ ಆರ್ ಪಿಎಫ್ ಯೋಧರು ಹುತಾತ್ಮರಾದ ನಂತರ ನಡೆದ ಅತೀ ದೊಡ್ಡ ಮಾರಣ ಹೋಮ ಇದಾಗಿದೆ.
ದೆಹಲಿ ವ್ಯಾಪಾರ್ ಮಹಾಸಂಘದವರು ಈ ದುರ್ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಅಮಾಯಕ ಪ್ರವಾಸಿಗರ ಜೀವವನ್ನು ಕಸಿದ ಭಯೋತ್ಪಾದಕರು ಕಾಶ್ಮೀರದ ಶಾಂತಿ, ಸುವ್ಯವಸ್ಥೆ, ಅಭಿವೃದ್ಧಿಯಯನ್ನು ಹಾಳುಗೆಡವಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಂದ್ ಗೆ ಎಲ್ಲಾ ರೀತಿಯ ಉದ್ಯಮ, ವ್ಯವಹಾರ, ವ್ಯಾಪಾರಿಗಳ ಒಕ್ಕೂಟ ಒಕ್ಕೂರಲಿನಿಂದ ಸಹಮತಿಯನ್ನು ತೋರಿಸಿದ್ದು, ಈ ಬಂದ್ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ವರ್ತಕರ ಸಂಘದ ಪ್ರಮುಖರು ಹೇಳಿದ್ದಾರೆ.
” ನಾವು ವ್ಯಾಪಾರಿಗಳನ್ನು, ಅಂಗಡಿ ಮಾಲೀಕರನ್ನು, ಉದ್ಯಮ, ವ್ಯವಹಾರಗಳನ್ನು ನಡೆಸುವವರನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡುವಂತೆ ವಿನಂತಿಸಿದ್ದೇವೆ. ಈ ಮೂಲಕ ಎಪ್ರಿಲ್ 25 ರಂದು ಭಯೋತ್ಪಾದನೆಯ ವಿರುದ್ಧ ದಿಟ್ಟ ಉತ್ತರ ನೀಡಲಿದ್ದೇವೆ” ಎಂದು ವರ್ತಕ ಸಂಘ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದೆ.
ಈಗಾಗಲೇ ದೆಹಲಿಯ ವರ್ತಕರು ಚಾಂದನಿ ಚೌಕದಲ್ಲಿ ಸೇರಿ ಕ್ಯಾಂಡಲ್ ಮಾರ್ಚ್ ನಡಿಗೆಯ ಮೂಲಕ ಆತಂಕ್ ವಾದ್ ಬಂದ್ ಕರೋ ಘೋಷಣೆ ಮೊಳಗಿಸುತ್ತಾ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
Leave A Reply