ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ – ಡಿಸಿಎಂ

ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು ಕೊಡುತ್ತೇವೆ ಎಂದು ಹೇಳಿಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದು ಈಗ ರಾಜ್ಯದ ಮಹಿಳೆಯರಲ್ಲಿ ನಿರಾಸೆಯನ್ನು ಉಂಟು ಮಾಡಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದಿರುವುದರಿಂದ ಹೊಸಪೇಟೆಯಲ್ಲಿ ಸಾಧನಾ ಸಮಾವೇಶವನ್ನು ಅದ್ದೂರಿಯಾಗಿ ನಡೆಸಿದೆ.
ಆದರೆ ಅಲ್ಲಿ ಪತ್ರಕರ್ತರು ಗೃಹಲಕ್ಷ್ಮಿ ಹಣ ವಿಳಂಬವಾಗಿ ಬರುತ್ತಿರುವುದರ ಬಗ್ಗೆ ಡಿಸಿಎಂ ಗಮನ ಸೆಳೆದಾಗ ” ನೋಡ್ರಿ ತಿಂಗಳು, ತಿಂಗಳು ಹಣ ಕೊಡ್ತೀವಿ ಎಂದು ನಾವು ಹೇಳಿಲ್ಲ. ನೀವು ಟ್ಯಾಕ್ಸ್ ಕಟ್ಟುತ್ತಾ ಇರಬೇಕು. ನಾವು ದುಡ್ಡು ಕೊಡ್ತಾ ಇರಬೇಕು. ಈಗ ಗುತ್ತಿಗೆ ಕೆಲಸ ಮಾಡುವವರಿಗೆ ನಾಳೆನೆ ಹಣ ಬಂದುಬಿಡುತ್ತಾ? 2,3,5 ವರ್ಷ ಆಗಲ್ವಾ. ಅದೇ ರೀತಿ ಇದು ಕೂಡಾ ಬಂದಾಗ ಬರುತ್ತೆ” ಎಂದು ಹೇಳಿದ್ದಾರೆ.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಸೂಕ್ತ ಆರ್ಥಿಕ ಸಂಪನ್ಮೂಲಗಳ ಕೊರತೆ ಇರುವುದು ರಾಜ್ಯದ ಜನರಿಗೆ ಗೊತ್ತಿದೆ. ಆದ್ದರಿಂದ ಬರುವಷ್ಟು ದಿನ ಬರಲಿ ಎನ್ನುವ ಮನೋಭಾವನೆಯನ್ನು ಎಲ್ಲರೂ ಹೊಂದಿದ್ದಾರೆ. ಇಷ್ಟಾದರೂ ಕೊಟ್ಟಿದ್ದಾರಲ್ಲ, ಅದು ಕೂಡ ಫ್ರೀಯಾಗಿ ಎನ್ನುವ ಅಭಿಪ್ರಾಯ ಮಹಿಳೆಯರಲ್ಲಿದೆ. ಯಾರಿಗೂ ಇದು ಪ್ರತಿ ತಿಂಗಳು ಬರುತ್ತದೆ ಎನ್ನುವ ನಂಬಿಕೆ ಇಲ್ಲ. ಅದ್ದರಿಂದ ಬಂದಷ್ಟು ದಿನ ತೆಗೆದುಕೊಳ್ಳೋಣ ಎನ್ನುವ ಚಿಂತನೆ ಎಲ್ಲರದ್ದು. ಆದರೆ ಯಾವುದೇ ವಿಷಯವನ್ನು ಯಾವುದೇ ಮುಲಾಜಿಲ್ಲದೇ ಮಾತನಾಡುವ ಡಿಕೆಶಿವಕುಮಾರ್ ಈ ವಿಷಯದಲ್ಲಿಯೂ ಅಷ್ಟೇ ಖಡಕ್ಕಾಗಿ ಮಾತನಾಡಿರುವುದರಿಂದ ಇದು ವಿಪಕ್ಷಗಳಿಗೆ ಆಹಾರದ ವಸ್ತುವಾಗಿದೆ. ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಯ ಮೊದಲು ನೀಡಿದ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಭರವಸೆಯ ಪೋಸ್ಟರ್ ಗಳೊಂದಿಗೆ ಡಿಸಿಎಂ ಅವರ ಈಗಿನ ಹೇಳಿಕೆಯನ್ನು ಜೋಡಿಸಿ ಜನರ ಮುಂದಿಟ್ಟಿದ್ದಾರೆ.
ಅಷ್ಟಕ್ಕೂ ಗೃಹಲಕ್ಷ್ಮಿ ಹಣ ವಿಳಂಬವಾಗುತ್ತಿರುವುದು ಇದು ಮೊದಲ ಸಲವಲ್ಲ. ಪ್ರತಿ ಬಾರಿ ವಿಳಂಬವಾದಾಗಲೂ ಅದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆದಷ್ಟು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಮುಜಾಯಿಷಿಕೆ ನೀಡುತ್ತಿದ್ದರು. ಆದರೆ ಈ ಸಲ ಪತ್ರಕರ್ತರು ಪಟ್ಟು ಬಿಡದೆ ಕೇಳಿದಾಗ ಡಿಸಿಎಂ ನೇರವಾಗಿ ವಾಸ್ತವವನ್ನೇ ಹೇಳಿದ್ದಾರೆ. ಡಿಕೆಶಿಯವರು ಹೀಗೆ ಹೇಳುವಾಗ ಅವರ ಅಕ್ಕಪಕ್ಕದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಜಮೀರ್ ಅಹ್ಮದ್ ಖಾನ್ ಕೂಡ ಇದ್ದರು.
Leave A Reply