20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ…

ಅನೇಕ ಐವಿಎಫ್ ಸೆಂಟರ್ ಗಳಿಗೆ ಹೋದೆ. ಆದರೆ ಅವಿವಾಹಿತೆ, ಸಿಂಗಲ್ ಮದರ್ ಎನ್ನುವ ಕಾರಣಕ್ಕೆ ಅಲ್ಲಿ ವೈದ್ಯರು ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ಸಮಯ ದೂಡುತ್ತಾ ಬಂದರು. ಕೊನೆಗೆ ಮನೆಯ ಹತ್ತಿರವೇ ಇದ್ದ ಐವಿಎಫ್ ನಲ್ಲಿ ವೀರ್ಯದಾನಿಯೊಬ್ಬರ ಸಹಾಯದಿಂದ ಗರ್ಭವತಿ ಆದೆ. ವೈದ್ಯರು ಪ್ರತಿ ಹಂತದಲ್ಲಿಯೂ ಸಹಾಯ ಮಾಡಿದರು ಎಂದು ಕನ್ನಡ ಚಿತ್ರರಂಗದ ನಟಿ ಕಮ್ ರಾಜಕಾರಣಿ ಭಾವನಾ ರಾಮಣ್ಣ ಹೇಳಿದ್ದಾರೆ.
ತಾಯಿಯಾಗಬೇಕು ಎನ್ನುವ ಆಸೆ 20 ಅಥವಾ 30 ನೇ ವಯಸ್ಸಿನಲ್ಲಿ ಬಂದಿರಲಿಲ್ಲ. 30 ನೇ ವಯಸ್ಸಿನಲ್ಲಿ ಲವ್ ಮಾಡುವ ಮನಸ್ಸಿತ್ತಾದರೂ ಆಗಲೂ ಮಕ್ಕಳು ಆಗಬೇಕೆನ್ನುವ ಆಸೆ ಬಂದಿರಲಿಲ್ಲ. ಆದರೆ ನಲ್ವತ್ತರಲ್ಲಿ ಈ ಆಸೆ ದೊಡ್ಡದಾಗಿ ಮನಸ್ಸಿನಲ್ಲಿ ಬಂದಿತ್ತು. ಅದನ್ನು ನಿರ್ಲಕ್ಷಿಸಲು ಸಾಧ್ಯವೇ ಆಗಲಿಲ್ಲ. ಈಗ ಆರು ತಿಂಗಳ ಗರ್ಭೀಣಿ. ಅವಳಿ ಮಕ್ಕಳನ್ನು ಹೆರಲಿದ್ದೇನೆ ಎಂದು ಭಾವನಾ ಖುಷಿಯನ್ನು ತೆರೆದಿಟ್ಟಿದ್ದಾರೆ.
ವೈದ್ಯಕೀಯ ತಂತ್ರಜ್ಞಾನದ ಸಹಾಯದಿಂದ ತಾಯಿಯಾಗುತ್ತಿರುವ ಭಾವನ ಈ ಸಮಾಜದಲ್ಲಿ ಸಿಂಗಲ್ ಮದರ್ ಅವರ ಮುಂದಿರುವ ಸವಾಲುಗಳು ಮತ್ತು ತಂದೆ ಇಲ್ಲದೇ ತಾಯಿಯೊಬ್ಬಳು ಬೆಳೆಸುವ ಮಕ್ಕಳ ಭವಿಷ್ಯದ ಬಗ್ಗೆಯೂ ಮನಬಿಚ್ಚಿ ಮಾತನಾಡುತ್ತಾರೆ. ಮೊದಲು ಸಾಮಾನ್ಯ ರೀತಿಯಲ್ಲಿ ತಾಯಿಯಾಗಬೇಕು ಎನ್ನುವ ಮನಸ್ಸಿತ್ತು. ಆದರೆ ಮದುವೆ ಮತ್ತು ಮಕ್ಕಳು ಎನ್ನುವ ಕಾನ್ಸೆಪ್ಟ್ ಗಿಂತಲೂ ವೈದ್ಯಕೀಯ ತಂತ್ರಜ್ಞಾನದ ಸಹಾಯದಿಂದ ಮಕ್ಕಳನ್ನು ಪಡೆಯೋಣ ಎಂದು ಅನಿಸಿತು. ಆದರೆ ಬಹಳ ಕಾಲದ ತನಕ ಅವಿವಾಹಿತರು ತಾಯಿಯಾಗುವ ಬಗ್ಗೆ ನಮ್ಮಲ್ಲಿ ಸೂಕ್ತ ಕಾನೂನು ಬೆಂಬಲಿತ ವಿಷಯಗಳೇ ಇರಲಿಲ್ಲ. ಆದರೆ ಯಾವಾಗ ಕಾನೂನು ಈ ವಿಷಯದಲ್ಲಿ ನಮ್ಮಂತವರ ಬೆಂಬಲಕ್ಕೆ ರೂಪುರೇಶೆ ಹಾಕಿಕೊಟ್ಟ ಮೇಲೆ ಧೈರ್ಯ ಬಂತು. ಆದರೆ ನಾನು ಹೋದ ಐವಿಎಫ್ ಸೆಂಟರ್ ಗಳಲ್ಲಿ ಮದುವೆಯಾಗಲಿಲ್ಲ ಎಂದು ಗೊತ್ತಾದ ತಕ್ಷಣ ಅಲ್ಲಿನವರು ಹಿಂದೆ ಸರಿಯುತ್ತಿದ್ದರು” ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಮೊದಲ ಪ್ರಯತ್ನದಲ್ಲಿಯೇ ಇದು ಸಾಧ್ಯವಾಯಿತು. ನಂತರ ಮನೆಗೆ ಬಂದು ತಂದೆಗೆ ಈ ವಿಷಯ ತಿಳಿಸಿ ತಾನು ಐವಿಎಫ್ ಮೂಲಕ ತಾಯಿಯಾಗುವ ಬಗ್ಗೆ ಹೇಳಿದಾಗ ಅವರು ತುಂಬಾ ಸಂತಸಪಟ್ಟರು. ” ನೀನು ಓರ್ವ ಹೆಣ್ಣುಮಗಳಾಗಿ ನಿನಗೆ ತಾಯಿಯಾಗುವ ಸಂಪೂರ್ಣ ಹಕ್ಕಿದೆ” ಎಂದು ಖುಷಿಯಿಂದ ಹೇಳಿದರು. ಅದರೊಂದಿಗೆ ನನ್ನ ಸಂಬಂಧಿಕರು ಕೂಡ ತುಂಬಾ ಸಂಭ್ರಮಿಸುತ್ತಿದ್ದಾರೆ ಮತ್ತು ನನ್ನನ್ನು ಚೆನ್ನಾಗಿ ನೋಡಿಕೊಳ್ಳಲು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರೊಂದಿಗೆ ಕೆಲವರು ಇದು ಮಕ್ಕಳನ್ನು ಮಾಡಲು ಸರಿಯಾದ ದಾರಿನಾ ಎನ್ನುವ ಪ್ರಶ್ನೆಯನ್ನು ನನ್ನಲ್ಲಿ ಕೇಳಿದ್ದಾರೆ. ಆದರೆ ನಾನು ಈ ವಿಷಯದಲ್ಲಿ ಬಹಳ ಸರಳ ಹಾಗೂ ಸ್ಪಷ್ಟವಾಗಿ ನನ್ನ ಭಾವನೆಗಳನ್ನು ಹೇಳಿದ್ದೇನೆ” ಎಂದು ತಿಳಿಸಿದ್ದಾರೆ.
ಭಾವನಾ ಅವರಿಗೆ ಸಿಂಗಲ್ ಮದರ್ ಆಗಿ ಇರುವುದು ಯಾವ ರೀತಿಯ ಸವಾಲು ಎನ್ನುವುದರ ಅರಿವಿದೆ. ಅವರ ಗೆಳತಿಯೊಬ್ಬರು ಸಿಂಗಲ್ ಮದರ್ ಆಗಿದ್ದು, ಅವರಿಗೆ ಬಾಡಿಗೆ ಮನೆ ಸಿಗುವುದೇ ಕಷ್ಟವಾಗಿತ್ತಂತೆ. ಆಕೆಗೆ 50 ವರ್ಷ. ಅವಳ ಮಗನಿಗೆ 20 ವರ್ಷ. ಆದರೆ ಕೆಲವರು ಬಾಡಿಗೆ ಮನೆ ನೀಡಲು ನಿರಾಕರಿಸಿದರು ಎಂದು ಭಾವನಾ ಹೇಳುತ್ತಾರೆ. ಇಂದಿನ ಕಾಲದಲ್ಲಿಯೂ ಮಹಿಳೆ ಇದನ್ನೆಲ್ಲಾ ಎದುರಿಸಬೇಕಾಗುತ್ತದೆ ಎನ್ನುವುದು ಗೊತ್ತಿದೆ. ಹಾಗಂತ ನಾನು ಮದುವೆ ಅಥವಾ ಸಂಬಂಧಗಳ ವಿರೋಧಿಯಲ್ಲ. ನಾನು ಸಮಾಜದ ಕಟ್ಟುಪಾಡುಗಳನ್ನು ವಿರೋಧಿಸಿ ಏನನ್ನೋ ಸಾಧಿಸಬೇಕೆಂದು ಹೊರಟವಳಲ್ಲ. ನನಗೂ ಓರ್ವ ಉತ್ತಮ ಸಂಗಾತಿ ಸಿಕ್ಕಿದರೆ ನಾನು ಕೂಡ ಎಲ್ಲರಂತೆ ಸಾಂಪ್ರದಾಯಿಕವಾದ ಹಾದಿಯಲ್ಲಿಯೇ ನಡೆದು ಮಕ್ಕಳನ್ನು ಹೊಂದುತ್ತಿದೆ. ಆದರೆ ಜೀವನ ಎಲ್ಲರದ್ದೂ ಒಂದೇ ರೀತಿ ಇರುವುದಿಲ್ಲವಲ್ಲ. ಆದರೆ ನನಗೆ ತಾಯಿಯಾಗಬೇಕೆಂಬ ಗುರಿ ಇತ್ತು. ನನ್ನ ಇಚ್ಚೇ ಸಹಜ ಮತ್ತು ಶಕ್ತಿಶಾಲಿಯಾಗಿತ್ತು. ಇನ್ನು ನನ್ನ ನಡೆ ಏಕಾಂಗಿಯಾಗಿದ್ದರೂ ಸ್ವಂತ ಮಗುವಿನ ತಾಯಿಯಾಗಬೇಕೆಂಬ ಆಸೆ, ತುಡಿತ ಹೊಂದಿರುವ ಮಹಿಳೆಯರಿಗೆ ಸ್ಫೂರ್ತಿ ಆದರೆ ಅದಕ್ಕಿಂತ ಖುಷಿ ಬೇರೆ ಏನು” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.