ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!

ಆಂಧ್ರಪ್ರದೇಶದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಆಡಳಿತದಲ್ಲಿ ಅನ್ಯಧರ್ಮವನ್ನು ಸ್ವೀಕರಿಸಿದವರು, ಅನ್ಯಧರ್ಮದ ಬಗ್ಗೆ ಒಲವು ಇಟ್ಟುಕೊಂಡು ಅದನ್ನು ಪಾಲಿಸುವವರು ಇದ್ದಲ್ಲಿ ಅವರು ಒಂದೋ ಬೇರೆ ಇಲಾಖೆಗೆ ವರ್ಗವಾಗಿ ಹೋಗಬೇಕು ಅಥವಾ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಅಲ್ಲಿನ ರಾಜ್ಯ ಸರಕಾರ ಆದೇಶ ಮಾಡಿತ್ತು. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಹಾಗೂ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಂತಹದೊಂದು ಮಹತ್ತರ ಬದಲಾವಣೆ ಆಂಧ್ರದಲ್ಲಿ ನಡೆದಿತ್ತು. ತಿರುಪತಿಯಲ್ಲಿ ಅನ್ಯಧರ್ಮದವರು ಸೇರಿಕೊಂಡು ದೇವಳದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಹಾಗೂ ಪವಿತ್ರ ಕ್ಷೇತ್ರಕ್ಕೆ ಅಪಕೀರ್ತಿ ತರುತ್ತಿದ್ದಾರೆ ಎಂದು ಭಕ್ತರ ಒಕ್ಕೂರಲಿನ ಆಗ್ರಹದ ಬಳಿಕ ಹೊಸದಾಗಿ ಅಧಿಕಾರಕ್ಕೆ ಬಂದಿದ್ದ ರಾಜ್ಯ ಸರಕಾರ ಬಹಳ ಪ್ರಮುಖ ನಿರ್ಧಾರವನ್ನು ಕೈಗೆತ್ತಿಕೊಂಡಿತು. ಅನ್ಯಧರ್ಮದವರಿಗೆ ಹಿಂದೂ ದೇವರ ಮೇಲೆ ಮತ್ತು ದೇವಸ್ಥಾನದ ಪಾವಿತ್ರತೆಯ ಮೇಲೆ ಅಷ್ಟು ನಂಬಿಕೆ ಇಲ್ಲದೇ ಇರುವುದರಿಂದ ಅಂತವರು ಅಲ್ಲಿ ಇರುವುದರ ಅಗತ್ಯವಿಲ್ಲ ಎಂದು ದೇಶ, ವಿದೇಶದಲ್ಲಿರುವ ಭಕ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ ಈ ಹಿಂದೆ ವೈಎಸ್ ಆರ್ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ಕಾರಣ ಹಾಗೂ ಜಗನ್ಮೋಹನ್ ರೆಡ್ಡಿ ಸಿಎಂ ಆಗಿ ಇದ್ದ ಕಾರಣ ಅವರು ಜನರ ಈ ಧಾರ್ಮಿಕ ಭಾವನೆಗಳಿಗೆ ಅಷ್ಟು ಸ್ಪಂದಿಸಿರಲಿಲ್ಲ. ಇದರಿಂದ ಒಂದು ರೀತಿಯಲ್ಲಿ ಅವರದ್ದೇ ಬೇಕಾದವರು, ಆತ್ಮೀಯರಾದವರು ಆಯಕಟ್ಟಿನ ಜಾಗದಲ್ಲಿ ಕುಳಿತುಕೊಂಡಿದ್ದರು.
ಈಗ ಅಲ್ಲಿ ಸರಕಾರ ಬದಲಾವಣೆ ಆದ ನಂತರ ಹಿಂದೂ ಧರ್ಮದ ಬಗ್ಗೆ ಶ್ರದ್ಧೆ ಇರುವ ಸಿಎಂ, ಡಿಸಿಎಂ ಹೊರಡಿಸಿರುವ ಹೊಸ ಆದೇಶದನ್ವಯ ಈಗಾಗಲೇ ಅನ್ಯಧರ್ಮಿಯರಲ್ಲಿ ಬಹುತೇಕರು ಬೇರೆ ಇಲಾಖೆಗೆ ವರ್ಗ ಮಾಡಿಸಿಕೊಂಡಿದ್ದಾರೆ. ಕೆಲವರು ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ. ಆದರೆ ಕೆಲವರು ಅಲ್ಲಿಯೇ ಮುಂದುವರೆಯುತ್ತಿದ್ದಾರೆನೋ ಎನ್ನುವ ಭಾವನೆ ಬಂದದ್ದು ಇತ್ತೀಚೆಗೆ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುವ ಟಿಟಿಡಿಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಪ್ರತಿ ಭಾನುವಾರ ಚರ್ಚ್ ಗೆ ಹೋಗುತ್ತಿದ್ದದ್ದು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಅವರನ್ನು ತಿರುಪತಿ ತಿರುಮಲ ದೇವಸ್ವಂ (ಟಿಟಿಡಿ) ಕೆಲಸದಿಂದ ಅಮಾನತು ಮಾಡಿದೆ.
ಹಿಂದೂ ಧರ್ಮದ ಹೊರತಾಗಿ ಬೇರೆ ಧರ್ಮವನ್ನು ಪಾಲಿಸುವವರು ಟಿಟಿಡಿಯಲ್ಲಿ ಕೆಲಸ ಮಾಡುವಂತಿಲ್ಲ ಎಂಬ ಕಠಿಣ ನಿಯಮವಿದೆ. ಆದರೆ ಪ್ರತಿ ಭಾನುವಾರ ಚರ್ಚ್ ಗೆ ಹೋಗಿ ಕ್ರೈಸ್ತರ ಆಚರಣೆಗಳಲ್ಲಿ ಭಾಗಿಯಾಗುವ ಮೂಲಕ ರಾಜಶೇಖರ್ ಬಾಬು ಈ ನಿಯಮವನ್ನು ಉಲ್ಲಂಘಿಸಿದ್ದರು ಎನ್ನಲಾಗಿದೆ. ಬಾಬು ಅವರ ಚಲನವಲನದ ಮೇಲೆ ನಿಗಾ ವಹಿಸಿದ್ದ ಟಿಟಿಡಿಯ ಕಣ್ಗಾವಲು ವಿಭಾಗ ಈ ಎಲ್ಲಾ ಬೆಳವಣಿಗೆಯ ವರದಿ ಸಲ್ಲಿಸಿತ್ತು. ಅದರ ಬೆನ್ನಲ್ಲೇ ರಾಜಶೇಖರ್ ಅವರನ್ನು ಅಮಾನತು ಮಾಡಲಾಗಿದೆ. ಇದು ಅಲ್ಲಿ ತಮ್ಮ ಐಡೆಂಟಿಟಿ ಮುಚ್ಚಿ ಕೆಲಸದಲ್ಲಿರುವ ಇತರರಿಗೂ ಎಚ್ಚರಿಕೆಯ ಗಂಟೆಯಾಗಿದೆ.