ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!

ಉದಯಪುರ ಫೈಲ್ಸ್ – ಕನ್ನಯ್ಯ ಲಾಲ್ ಟೈಲರ್ ಮರ್ಡರ್ ಎನ್ನುವ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ವಿಷಯದಲ್ಲಿ ತುರ್ತಾಗಿ ವಿಚಾರಣೆ ಮಾಡಬೇಕು ಎನ್ನುವ ಅರ್ಜಿದಾರರ ಮನವಿಯನ್ನು ತಳ್ಳಿಹಾಕಿದೆ. ಟೈಲರ್ ಕನ್ನಯ್ಯಲಾಲ್ ಕೊಲೆ ಪ್ರಕರಣದಲ್ಲಿ ಓರ್ವ ಆರೋಪಿಯಾಗಿರುವ ಮೊಹಮ್ಮದ್ ಜಾವೆದ್ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟಿನ ರಜಾಕಾಲದ ಪೀಠದ ಎದುರು ಮನವಿ ಸಲ್ಲಿಸಿದ್ದರು. ರಜಾಕಾಲದ ಪೀಠದ ನ್ಯಾಯಾಮೂರ್ತಿಗಳಾದ ಸುಧಾಂಶು ಧೂಳಿಯಾ ಹಾಗೂ ಜೊಯಮಾಲ್ಯ ಭಾಗಚಿ ಅವರಿದ್ದ ನ್ಯಾಯಪೀಠ ಸುಪ್ರೀಂಕೋರ್ಟ್ ನ ನಿತ್ಯ ಪೀಠ ಜುಲೈ 14 ರಂದು ಆರಂಭವಾದಾಗ ಮನವಿ ಸಲ್ಲಿಸಲು ಸೂಚಿಸಿತು.
ಆದರೆ ಸಿನೆಮಾ ಜುಲೈ 11 ರಂದು ಬಿಡುಗಡೆಯಾಗಲಿದ್ದು, ನ್ಯಾಯಪೀಠ ಜುಲೈ 14 ಕ್ಕೆ ತೆರೆಯಲಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ ನ್ಯಾಯಾಲಯ ಸಿನೆಮಾ ಬಿಡುಗಡೆಯಾಗಲಿ ಎಂದು ಹೇಳಿದೆ. “ಸಿನೆಮಾ ಈ ಶುಕ್ರವಾರ ಬಿಡುಗಡೆಯಾಗಲಿದೆ. ಟ್ರೈಲರ್ ಜುಲೈ 4 ರಂದು ಬಿಡುಗಡೆಯಾಗಿದೆ. ಅವರು ಸಿನೆಮಾದಲ್ಲಿ ಕಾನೂನು ಕ್ರಮದ ಬಗ್ಗೆ ತೋರಿಸಿದ್ದಾರೆ” ಎಂದು ಆರೋಪಿ ಪರ ವಕೀಲರು ಹೇಳಿದಾಗ ” ನ್ಯಾಯಾಲಯದ ಮುಂದೆ ಅದರ ಬಿಡುಗಡೆಯ ನಂತರದ ವಿಷಯಗಳ ಬಗ್ಗೆ ಹೇಳಿ. ಸಿನೆಮಾ ಅದರ ನಿಗದಿತ ಅವಧಿಯಲ್ಲಿ ಬಿಡುಗಡೆಯಾಗಲಿ” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಅದಕ್ಕೆ ಅರ್ಜಿದಾರರ ಪರ ವಕೀಲರು ” ಸಿನೆಮಾವನ್ನು ನೈಜ ಘಟನೆಯ ಮೇಲೆ ಆಧಾರಿತ ಸಿನೆಮಾ ಎಂದು ಬಿಂಬಿಸಲಾಗಿದೆ. ಆದ್ದರಿಂದ ಸಿನೆಮಾದ ಪರಿಣಾಮ ಕೇಸಿನ ಮೇಲೆ ಆಗುತ್ತದೆ. ಇನ್ನು ಸಿನೆಮಾದಲ್ಲಿ ತೋರಿಸಲಾಗಿರುವ ಘಟನೆಗಳು ವಾಸ್ತವದಲ್ಲಿ ನಡೆದ ಇಲ್ಲ” ಎಂದು ಹೇಳಿದರು. ಇನ್ನು ಈ ಸಿನೆಮಾದಲ್ಲಿ ತೋರಿಸಲಾಗಿರುವ ವಿಷಯದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇನ್ನು ನ್ಯಾಯಾಲಯದಿಂದ ಅಂತಿಮ ತೀರ್ಪು ಬಂದಿಲ್ಲ. ಹೀಗಿರುವಾಗ ಯಾವುದೇ ಅನುಮಾನಗಳಿಲ್ಲದೇ ಇಬ್ಬರೂ ಹತ್ಯಾ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ನೀಡುವ ಸಾಧ್ಯತೆ ಇದೆ” ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ಈಗಾಗಲೇ ಮೂಲಭೂತವಾದಿ ಸಂಘಟನೆ ಜಮಿಯತ್ ಉಲಾಮಾ ಐ ಹಿಂದ್ ದೆಹಲಿ ಹೈಕೋರ್ಟ್ ನಲ್ಲಿ ಸಿನೆಮಾಗೆ ತಡೆಯಾಜ್ಞೆ ಕೋರಿ ಸಲ್ಲಿಸಿರುವ ಮನವಿ ಇನ್ನು ವಿಚಾರಣೆಗೆ ಬಾಕಿ ಇದೆ.
ಜೂನ್ 22 ರಂದು ಟೈಲರ್ ಕನ್ನಯ್ಯಾ ಲಾಲ್ ಅವರನ್ನು ಇಬ್ಬರು ಮೂಲಭೂತವಾದಿಗಳು ಅವರದ್ದೇ ಅಂಗಡಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದರು. ಆರೋಪಿಗಳನ್ನು ಮೊಹಮ್ಮದ್ ರಿಯಾಝ್ ಅಖ್ತರ್ ಹಾಗೂ ಮೊಹಮದ್ ಗೋಸ್ ಎಂದು ಗುರುತಿಸಲಾಗಿದೆ. ಕನ್ನಯ್ಯಲಾಲ್ ಬಿಜೆಪಿಯ ಆಗಿನ ವಕ್ತಾರೆ ನುಪೂರ್ ಶರ್ಮಾ ಅವರ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿದ್ದರು ಎನ್ನುವ ಕಾರಣಕ್ಕೆ ಹತ್ಯೆ ಮಾಡಲಾಗಿತ್ತು. ಕನ್ನಯ್ಯಾ ಲಾಲ್ ಅವರಿಗೆ ಜೀವ ಬೆದರಿಕೆ ಇದ್ದರೂ ಅವರಿಗೆ ಪೊಲೀಸ್ ರಕ್ಷಣೆ ನೀಡಿರಲಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬಂದಿವೆ. ಒಟ್ಟಿನಲ್ಲಿ ಸದ್ಯ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದ್ದು, ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.