ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ

ದ್ವೇಷ ಭಾಷಣ ಮಾಡಿದ ಮತ್ತು ಶಾಂತಿಭಂಗ ಉಂಟು ಮಾಡುವುದಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ಅವಮಾನ ಆರೋಪದಡಿ ವಿಶ್ವ ಹಿಂದೂ ಪರಿಷತ್ ನ ಇಬ್ಬರು ನಾಯಕರ ವಿರುದ್ಧದ ಎಫ್ ಐ ಆರ್ ಗೆ ಹೈಕೋರ್ಟ್ ತಡೆ ನೀಡಿದೆ. ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಕುಂಜಾಲುವಿನಲ್ಲಿ ನಡೆದ ಗೋಹತ್ಯೆ ಘಟನೆ ಉದ್ದೇಶಿಸಿ ದ್ವೇಷ ಭಾಷಣ ಮಾಡಿದ ಆರೋಪದಡಿ ಬಂಧಿಸಬಾರದು ಮತ್ತು ಹೈಕೋರ್ಟ್ ಅನುಮತಿಯಿಲ್ಲದೇ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
ಉಡುಪಿ ಟೌನ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐ ಆರ್ ರದ್ದುಪಡಿಸಬೇಕೆಂದು ಕೋರಿ ಶರಣ್ ಪಂಪ್ವೆಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಆಲಿಸಿದ ನ್ಯಾಯಪೀಠ ” ಶರಣ್ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು” ಎಂದು ಆದೇಶಿಸಿ ಪ್ರತಿವಾದಿ ಉಡುಪಿ ಪೊಲೀಸ್ ಠಾಣೆ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಸೂಚಿಸಿ ವಿಚಾರಣೆ ಮುಂದೂಡಿತು.
ಇನ್ನು ವಿಶ್ವ ಹಿಂದೂ ಪರಿಷತ್ ನ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಜಿ ನವೀನ್ ಕುಮಾರ್ (ನವೀನ್ ನೆರಿಯ) ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐ ಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಎಫ್ ಐ ಆರ್ ರದ್ದು ಕೋರಿ ನವೀನ್ ನೆರಿಯ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಎಸ್ . ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ, ಕಡಬ ಠಾಣಾ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಎಂ ಅರುಣ್ ಶ್ಯಾಮ್ ” ಪೊಲೀಸರು ಅರ್ಜಿದಾರರ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುವ ದುರುದ್ದೇಶದಿಂದ ಅವರ ಮಾತುಗಳಿಗೆ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ, ದುರುದ್ದೇಶಪೂರಿತವಾಗಿ ದಾಖಲಿಸಿರುವ ಎಫ್ ಐ ಆರ್ ರದ್ದುಪಡಿಸಬೇಕು” ಎಂದು ಕೋರಿದರು.