ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ… ಪುತ್ತೂರಿನಲ್ಲಿ ಹೆಚ್ಚಿದ ಕಳವು!

ತೆಂಗಿನ ಕಾಯಿ ದರ ಸದ್ಯ ಆಕಾಶದತ್ತ ಮುಖ ಮಾಡಿದೆ. ಜನಸಾಮಾನ್ಯರು ತೆಂಗಿನ ಕಾಯಿಯನ್ನು ಖರೀದಿಸಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಲ್ಲಿ ಕಳ್ಳರು ತೆಂಗಿನಕಾಯಿ ಕಳ್ಳತನಕ್ಕೆ ಇಳಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪರಿಸರದ ತೋಟಗಳಲ್ಲಿ ತೆಂಗಿನ ಕಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬನ್ನೂರು ಗ್ರಾಮದ ಅಲುಂಬುಡ ಎಂಬಲ್ಲಿ ತೋಟವೊಂದರಲ್ಲಿ ತೆಂಗಿನಕಾಯಿ ಕದಿಯುತ್ತಿದ್ದ ವ್ಯಕ್ತಿಯನ್ನು ಊರವರು ಹಿಡಿದು ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ. ಕಳೆದ ಕೆಲವು ವಾರಗಳಿಂದ ಬನ್ನೂರು ಪರಿಸರದಲ್ಲಿ ತೋಟಗಳಿಂದ ತೆಂಗಿನಕಾಯಿ ಮತ್ತು ಅಡಕೆ ಕಳುವಾಗುತ್ತಿರುವುದು ಮಾಲೀಕರ ಗಮನಕ್ಕೆ ಬರುತ್ತಿತ್ತು. ಪ್ರತಿ ಮನೆಯ ಮಂದಿ ರಾತ್ರಿ ತೋಟ ಕಾವಲು ಕಾಯುವ ಕೆಲಸ ಮಾಡುತ್ತಿದ್ದರು.
ಮೊನ್ನೆ ರಾತ್ರಿ ಬನ್ನೂರು ಅಲುಂಬುಡ ರಾಜೇಶ್ ಎಂಬುವರ ತೋಟದಲ್ಲಿ ತೆಂಗಿನ ಮರದಿಂದ ತೆಂಗಿನ ಕಾಯಿ ಬೀಳುತ್ತಿರುವ ಶಬ್ದ ಕೇಳಿ ರಾಜೇಶ್ ಸಹೋದರರು ತೆಂಗಿನ ಮರದ ಬಳಿ ಹೋದಾಗ ಮರದ ಕೆಳಗೆ ನಿಂತಿದ್ದವನನ್ನು ಹಿಡಿದಾಗ ಅವನು ತಪ್ಪಿಸಿಕೊಂಡು ಪರಾರಿಯಾಗಿದ್ದ. ನಂತರ ಮರದ ಮೇಲಿದ್ದ ವ್ಯಕ್ತಿಯನ್ನು ಕೆಳಗೆ ಇಳಿಸಿ ನಂತರ ಅವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ತೆಂಗಿನಕಾಯಿ ದರ ಹೀಗೆ ಗಗನಮುಖಿ ಆದರೆ ತೋಟಗಳಲ್ಲಿ ತೆಂಗಿನ ಕಾಯಿ ಕಳ್ಳತನ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ತೆಂಗಿನ ಮರಗಳಿರುವ ತೋಟಗಳ ಮಾಲೀಕರು ತಮ್ಮ ಒಡೆತನದ ಮರಗಳನ್ನು ಕಾವಲು ಕಾಯುವ ಪರಿಸ್ಥಿತಿ ಇದೆ. ತೆಂಗಿನ ಕಾಯಿ ದರ ವಿಪರೀತ ಹೆಚ್ಚಳವಾಗಿರುವುದರಿಂದ ತೆಂಗಿನ ಕಾಯಿ ಎಣ್ಣೆಯ ದರವೂ ಹೆಚ್ಚಳವಾಗಿದೆ. ಆಹಾರ ವಸ್ತುಗಳನ್ನು ತಯಾರಿಸಲು ಜನರು ತೆಂಗಿನ ಎಣ್ಣೆ, ತೆಂಗಿನ ಕಾಯಿಯ ಮೇಲೆ ಅವಲಂಬಿತರಾಗಿದ್ದಲ್ಲಿ ಅವರ ಜೇಬು ಹಗುರವಾಗುವುದರಲ್ಲಿ ಸಂಶಯವಿಲ್ಲ. ಸದ್ಯಕ್ಕೆ ಎಲ್ಲಾ ಕಡೆ ತೆಂಗಿನ ಕಾಯಿಯ ದರದ್ದೇ ಚಿಂತೆಯಾಗಿದೆ. ಜನರು ದೇವಸ್ಥಾನಗಳಲ್ಲಿ ಹಣ್ಣು, ಕಾಯಿ ನೀಡುವಾಗಲೂ ಹೆಚ್ಚಿನ ದರ ನೀಡಿ ಅದನ್ನು ಖರೀದಿಸಬೇಕಾಗಿದೆ. ಆಹಾರ ತಯಾರಿಕೆಯಿಂದ ಹಿಡಿದು ದೇವರಿಗೆ ಅರ್ಪಿಸುವ ತನಕ ಎಲ್ಲಾ ಕಡೆ ತೆಂಗಿನ ಕಾಯಿ ಬಹಳ ಪ್ರಮುಖ ವಸ್ತುವಾಗಿರುವುದರಿಂದ ಅದರ ಬೆಲೆ ಹೆಚ್ಚಿದರೆ ಜನಸಾಮಾನ್ಯರಿಗೆ ಚಿಂತೆ ಖಚಿತ.