ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂತಹುದೊಂದು ಯೋಜನೆ ಜಾರಿಗೆ ತರಲು ಯೋಚಿಸಿದ ನಂತರ ಅದಕ್ಕೆ ನಾಗರಿಕರಿಂದ ವಿವಿಧ ರೀತಿಯ ಕಮೆಂಟುಗಳು ಬರುತ್ತಿವೆ. ಪ್ರಾಣಿಪ್ರಿಯರು ಇದಕ್ಕೆ ಬೆಂಬಲ ನೀಡುತ್ತಿದ್ದರೆ, ಇನ್ನು ಕೆಲವರು ಇದು ಸರಕಾರದ ಬೇರೆ ಯೋಜನೆಗಳಂತೆ ಆಗುವುದಿಲ್ಲವೇ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಇದಕ್ಕೆ ಗಾದೆಯ ಉದಾಹರಣೆ ನೀಡುತ್ತಿದ್ದಾರೆ.
ಕೆಲವರಿಗೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎನ್ನುವ ಭಾಗ್ಯ ಎನ್ನುವ ಗಾದೆ ಇಲ್ಲಿ ಸರಿಯಾಗಿ ಅನ್ವಯಿಸುತ್ತದೆ. ಒಂದು ಕಡೆ ರಾಜ್ಯ ಸರಕಾರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾದ ಶಾಸಕರು ಹೇಳುತ್ತಿದ್ದಾರೆ. ಅವರ ಹೇಳಿಕೆಗಳು ಬಹಿರಂಗವಾಗಿ ಚರ್ಚೆಯಾಗುತ್ತಿವೆ. ಇನ್ನೊಂದೆಡೆ ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ಸಹಿತ ಪೌಷ್ಠಿಕಾಂಶಯುಕ್ತ ಆಹಾರ ಕೊಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧತೆ ನಡೆಸುತ್ತಿದೆ.
ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಇಂತಹದೊಂದು ಯೋಜನೆಗೆ ಬಿಬಿಎಂಪಿ ಮುಂದಾಗಿದ್ದು, ಈ ಬಗ್ಗೆ ನಿಯಮಾವಳಿಗಳನ್ನು ರೂಪಿಸಿ ಟೆಂಡರ್ ಕೂಡ ಕರೆದಿದೆ. ಜನತೆಗೆ ಸಮರ್ಪಕ ಮೂಲ ಸೌಕರ್ಯಗಳಾದ ರಸ್ತೆ, ಆಹಾರ, ನೀರು, ವಸತಿ, ವ್ಯವಸ್ಥೆ ಕಲ್ಪಿಸದಿದ್ದರೂ, ಬೆಂಗಳೂರು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಸ್ತೆ ಹೊಂಡ, ಗುಂಡಿಗಳನ್ನು ತುಂಬಿಸದಿದ್ದರೂ ಬೀದಿನಾಯಿಗಳಿಗೆ ಪ್ರತಿದಿನ ಬಿಸಿಬಿಸಿ ಚಿಕನ್, ಮೊಟ್ಟೆ ನೀಡಲು ತಯಾರಿ ನಡೆಸಿರುವುದನ್ನು ನೋಡಿ ಜನರು ಆವಾಕ್ಕಾಗಿದ್ದಾರೆ. ಇದಕ್ಕಾಗಿ ಬಿಬಿಎಂಪಿ 2.8 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
ಇದಕ್ಕಾಗಿ ಬೆಂಗಳೂರಿನಲ್ಲಿ ಸ್ಥಳಗಳನ್ನು ನಿಗದಿಗೊಳಿಸಲಾಗಿದ್ದು, ಅಂದಾಜು ನಿತ್ಯ 4000 ರಿಂದ 5000 ಬೀದಿನಾಯಿಗಳಿಗೆ ಆಹಾರ ಪೂರೈಸಲು ನಿರ್ಧರಿಸಲಾಗಿದೆ. ಪ್ರತಿ ವರ್ಷ ಒಂದೊಂದು ವಲಯಕ್ಕೆ 36 ಲಕ್ಷ ರೂ ಸೀಮಿತಗೊಳಿಸಿದ್ದು, ಒಟ್ಟು 2.88 ಕೋಟಿ ರೂಪಾಯಿ ಅದಕ್ಕಾಗಿ ವ್ಯಯವಾಗಲಿದೆ.
ಪೂರೈಕೆದಾರರಿಗೆ ಟೆಂಡರ್ ಕರೆಯಲಾಗಿದ್ದು, ಎರಡು ವಿಷಯಗಳನ್ನು ಇಲ್ಲಿ ಪರಿಗಣಿಸಲಾಗಲಿದೆ. ಒಂದು ತಾಂತ್ರಿಕ ಇನ್ನೊಂದು ಅರ್ಥಿಕ. ಒಂದು ಉತ್ತಮ ಗುಣಮಟ್ಟದ ಆಹಾರ ಮತ್ತು ಅದರೊಂದಿಗೆ ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿ ಪೂರೈಕೆ.
ಬಿಬಿಎಂಪಿ ಅಧಿಕಾರಿಗಳ ಪ್ರಕಾರ ” ಕೆಲವು ಕಡೆ ಬೀದಿನಾಯಿಗಳಿಗೆ ಆಹಾರ ನೀಡುವ ನಾಗರಿಕರು ಇದ್ದಾರೆ. ಅಂತಹ ಕಡೆ ನಾಯಿಗಳಿಗೆ ಆಹಾರ ಸಿಗುತ್ತದೆ. ಕೆಲವು ಕಡೆ ಅಂತವರು ಯಾರೂ ಇಲ್ಲದೇ ಬೀದಿನಾಯಿಗಳು ವಿಪರೀತ ಹಸಿವೆಯಿಂದ ಆಕ್ರಮಣಕಾರಿ ಮನೋಭಾವನೆಯನ್ನು ತಳೆದಿರುತ್ತವೆ. ಒಂದು ವೇಳೆ ಸಾರ್ವಜನಿಕರೇ ಮುಂದೆ ಬಂದು ಆಹಾರ ನೀಡಿ, ಆಹಾರ ನೀಡುವ ಜಾಗವನ್ನು ಸ್ವಚ್ಚವಾಗಿಟ್ಟುಕೊಂಡರೆ ತುಂಬಾ ಉತ್ತಮ. ನಮ್ಮ ಉದ್ದೇಶ ಆಹಾರ ಹಾಕುವ ಜಾಗವನ್ನು ಸಾಮುದಾಯಿಕ ಸ್ಥಳಗಳನ್ನಾಗಿ ಮಾಡಿ ಎಲ್ಲರೂ ಒಟ್ಟಿಗೆ ಕಾರ್ಯ ನಿರ್ವಹಿಸೋಣ” ಎಂದು ಹೇಳುತ್ತಾರೆ.