ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ – ಮೋಹನ್ ಭಾಗವತ್!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ನಾಗಪುರದಲ್ಲಿ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹೇಳಿದ ಮಾತುಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಸಂಚಲನ ಉಂಟಾಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ವ್ಯಂಗ್ಯ ಮಾಡಲು ಸರಕನ್ನು ನೀಡಿದಂತೆ ಆಗಿದೆ. ನಾಯಕರಾದವರು 75 ವರ್ಷ ತುಂಬುತ್ತಿದ್ದಂತೆ ಸಾರ್ವಜನಿಕ ಮುಖ್ಯವಾಹಿನಿಯಿಂದ ನಿವೃತ್ತಿ ಹೊಂದಿ ತಮ್ಮ ಸ್ಥಾನದಲ್ಲಿ ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಹೇಳಿರುವುದು ಹೊಸ ಚರ್ಚೆಗೆ ನಾಂದಿ ಹಾಡಿದಂತಿದೆ. ಸಾಮಾನ್ಯವಾಗಿ ಆರ್ ಎಸ್ ಎಸ್ ಮುಖ್ಯಸ್ಥರು ಹೇಳುವ ಪ್ರತಿ ಮಾತಿಗೂ ಒಂದು ತೂಕ ಇದ್ದೇ ಇರುತ್ತದೆ. ಇದು ಭಾರತೀಯ ಜನತಾ ಪಕ್ಷಕ್ಕೂ ಒಂದು ತರಹದ ಸಂದೇಶ ನೀಡಿದಂತೆ ಆಗುತ್ತೆ. ಅದರೊಂದಿಗೆ ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಬದುಕಿನ ಪಾಠವನ್ನು ಕಲಿಸಿದಂತೆ ಆಗುತ್ತದೆ. ಬಿಜೆಪಿ ಅಲಿಖಿತವಾಗಿ ಸಂಘದ ಪ್ರಮುಖರ ಮಾತುಗಳನ್ನು ಶಿರಸಾ ವಹಿಸಿ ಪಾಲಿಸಿಕೊಂಡು ಬರುತ್ತಿದೆ. ಆದರೆ ಈ ಬಾರಿ ಹೇಳಿರುವ ಹೇಳಿಕೆ ಬಹಳ ದೊಡ್ಡ ಪರಿಣಾಮ ಬೀರಲಿದೆ. ಏಕೆಂದರೆ ಈ ವರ್ಷವೇ ನರೇಂದ್ರ ಮೋದಿಯವರಿಗೆ 75 ತುಂಬಲಿದೆ.
ಒಂದು ವೇಳೆ 75 ತುಂಬಿದ ವ್ಯಕ್ತಿ ಅಧಿಕಾರದಿಂದ ಕೆಳಗಿಳಿಯಲೇಬೇಕು ಎನ್ನುವುದೇ ಮಾನದಂಡವಾದರೆ ಮೋದಿ ಈ ವರ್ಷ ಅಧಿಕಾರದಿಂದ ಕೆಳಗಿಳಿದು ಬೇರೆಯವರನ್ನು ಪ್ರಧಾನ ಮಂತ್ರಿ ಮಾಡುತ್ತಾರಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲದೇ ಹೋದರೆ ಮೋದಿಯವರಿಗೆ ಈ ವಿಷಯದಲ್ಲಿ ಒಂದಿಷ್ಟು ರಿಯಾಯಿತಿ ಇದೆಯಾ? ಏಕೆಂದರೆ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಈಗ ಒಂದು ವರ್ಷ ಒಂದು ತಿಂಗಳು ಮಾತ್ರ ಕಳೆದಿದೆ. ಐದು ವರ್ಷದ ಅವಧಿ ಮುಗಿಯುವ ಮೊದಲೇ ಅವರು ಅಧಿಕಾರದಿಂದ ಕೆಳಗಿಳಿದರೆ ಅವರ ಸ್ಥಾನವನ್ನು ತುಂಬಲು ಸಮರ್ಥರಿರುವ ಇಬ್ಬರು ವರ್ಚಸ್ವಿ ನಾಯಕರೆಂದರೆ ಯೋಗಿ ಆದಿತ್ಯನಾಥ್ ಮತ್ತು ಅಮಿತ್ ಶಾ. ಹಾಗೆ ನೋಡಿದರೆ ಪಕ್ಷದಲ್ಲಿ ಹಿರಿಯರಾಗಿರುವ ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿ ಇದ್ದಾರಾದರೂ ಇಮೇಜ್ ನೋಡುವುದೇ ಆದರೆ ಇಡೀ ರಾಷ್ಟ್ರದ ಬಿಜೆಪಿ ಕಾರ್ಯಕರ್ತರು ಒಪ್ಪಿಕೊಳ್ಳುವ ರೀತಿಯಲ್ಲಿ ನಾಯಕನನ್ನು ಆಯ್ಕೆ ಮಾಡಬೇಕಾಗಿರುತ್ತದೆ.
ಈಗಾಗಲೇ 75 ವರ್ಷ ವಯಸ್ಸು ಕಳೆದಿರುವ ಬಿಜೆಪಿ ಮುಖಂಡರಿಗಾಗಿಯೇ ಮಾರ್ಗದರ್ಶಕ ಮಂಡಳಿ ಎನ್ನುವುದನ್ನು ರಚಿಸಲಾಗಿದೆ. ಅದರಲ್ಲಿ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಜಸ್ವಂತ್ ಸಿಂಗ್ ಹಾಗೂ ಕೆಲವು ನಾಯಕರು ಇದ್ದಾರೆ. 75 ತುಂಬುತ್ತಿದ್ದಂತೆ ಗೌರವಪೂರ್ಣವಾಗಿ ಅಧಿಕಾರದಿಂದ ಇಳಿಯುವುದು ಒಳ್ಳೆಯದು, ಅದರ ನಂತರ ಶಾಲು ಹಾಕಿಸಿಕೊಳ್ಳುವುದು ಬೇಕಿಲ್ಲ ಎನ್ನುವ ಅರ್ಥದ ಮಾತುಗಳನ್ನು ಮೋಹನ್ ಭಾಗವತ್ ಹೇಳಿದ್ದಾರೆ.
ಈ ಹೇಳಿಕೆ ಕಾಂಗ್ರೆಸ್ಸಿನ ಜೈರಾಂ ರಮೇಶ್, ಉದ್ದವ್ ಬಣದ ಸಂಜಯ್ ರಾವತ್ ತರಹದ ಮುಖಂಡರಿಗೆ ವ್ಯಂಗ್ಯ ಮಾಡಲು ಅವಕಾಶ ನೀಡಿದಂತೆ ಆಗಿದೆ. “ಮೋಹನ್ ಭಾಗವತ್ ಹೇಳಿದ್ದು ಮೋದಿಯವರಿಗೆ ಅನ್ವಯಿಸುತ್ತಾ ಎಂದು ನೋಡಬೇಕು. ಮೋದಿ ಪ್ರಧಾನಿಯಾದ ನಂತರ ನಾಗಪುರ ಸಂಘದ ಪ್ರಧಾನ ಕಚೇರಿಗೆ ಭೇಟಿ ನೀಡಿದ ಮೊದಲ ಪ್ರಧಾನಿ, ಅಲ್ಲಿಯೇ ಅವರ ನಿವೃತ್ತಿ ಬಗ್ಗೆ ಚರ್ಚೆಯಾಗಿದೆ” ಎಂದು ಸಂಜಯ್ ರಾವತ್ ಹೇಳಿದ್ದಾರೆ. ಅದಕ್ಕೆ ಸಿಎಂ ದೇವೇಂದ್ರ ಪಡ್ನವೀಸ್ ” ಯಾರೂ ಕೂಡ ಪ್ರಧಾನಿ ಸ್ಥಾನಕ್ಕೆ ಯಾರನ್ನೂ ಹುಡುಕಬೇಕಿಲ್ಲ. 2029 ರ ತನಕ ಮೋದಿಯವರೇ ಪ್ರಧಾನಿಯಾಗಿ ಇರಲಿದ್ದಾರೆ” ಎಂದು ತಿರುಗೇಟು ಹೇಳಿದ್ದಾರೆ.
ಇನ್ನು ಜೈರಾಮ್ ರಮೇಶ್ ” ಮೋದಿಯವರು ಐದು ರಾಷ್ಟ್ರಗಳ ಪ್ರವಾಸ ಮುಗಿಸಿ ಬಂದ ತಕ್ಷಣ ಆರ್ ಎಸ್ ಎಸ್ ನವರು ಉತ್ತಮ ಉಡುಗೊರೆ ನೀಡಿದ್ದಾರೆ” ಎಂದು ಟೀಕಿಸಿದ್ದಾರೆ. ಇನ್ನು ರಾಜನಾಥ್ ಸಿಂಗ್ ” ಇಂತಹ ಯಾವ ನಿಯಮಗಳನ್ನು ಕೂಡ ಪಕ್ಷ ಮಾಡಿಲ್ಲ. ಒಂದು ವೇಳೆ ಪಕ್ಷದಲ್ಲಿ ಅಂತಹ ನಿಯಮ ಇದ್ದರೆ ಪಕ್ಷದ ಸಂವಿಧಾನದಲ್ಲಿಯೇ ಬರೆಯಲಾಗುತ್ತಿತ್ತು” ಎಂದು ಹೇಳಿದ್ದಾರೆ.