ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಕಾರಿ ಶಬ್ದ ಬಳಕೆ ಮಾಡಿದ ಕೇಸಿನಲ್ಲಿ ವಾಗ್ಮಿ, ರಾಷ್ಟ್ರೀಯವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಅನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಸೂಲಿಬೆಲೆ ಅವರು ಖರ್ಗೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಆರೋಪಿಸಲಾಗಿತ್ತು. ತಮ್ಮ ಮಾತುಗಳ ನಡುವೆ ಖರ್ಗೆಯವರನ್ನು ಅಯೋಗ್ಯ ಎಂದು ಸಂಭೋದಿಸಿದ್ದಾರೆಂದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ವತಿಯಿಂದ ಜಾತಿನಿಂದನೆಯ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಚಕ್ರವರ್ತಿ ವಿರುದ್ಧ ರಾಯಚೂರಿನ ಶಿರವಾರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.
ರಾಯಚೂರಿನ ಶಿರವಾರದಲ್ಲಿ ನಡೆದ ನಮೋ ಬ್ರಿಗೇಡ್ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆಯವರು ಕಲಬುರಗಿಯ ಇಎಸ್ ಐ ಆಸ್ಪತ್ರೆಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕಲಬುರಗಿಯಲ್ಲಿ ಇಎಸ್ ಐ ಆಸ್ಪತ್ರೆ ತೆರೆದಿರುವುದನ್ನು ತಮ್ಮ ಸಾಧನೆ ಎಂದು ಖರ್ಗೆ ಬೆನ್ನುತಟ್ಟಿಕೊಳ್ಳುತ್ತಿದ್ದಾರೆ. ಜನರ ತೆರಿಗೆ ದುಡ್ಡಿನಲ್ಲಿ ಕಟ್ಟಲಾಗಿರುವ ಆಸ್ಪತ್ರೆಯನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುವಂತಹ ಅಯೋಗ್ಯ ಎನ್ನುವ ಅರ್ಥದ ಮಾತುಗಳನ್ನು ಚಕ್ರವರ್ತಿ ಆಡಿದ್ದು ಅವರ ವಿರೋಧಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ್ ನೇತೃತ್ವದಲ್ಲಿ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಲಾಗಿತ್ತು. ಅದರಂತೆ ಎಫ್ ಐ ಆರ್ ಕೂಡ ದಾಖಲಾಗಿತ್ತು.
ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಮೂರ್ತಿ ಸುಂದರೇಶ್ ಹಾಗೂ ನ್ಯಾಯಮೂರ್ತಿ ಕೋಟೇಶ್ವರ ಸಿಂಗ್ ಅವರ ಪೀಠವು ಎಫ್ ಐ ಆರ್ ರದ್ದುಗೊಳಿಸಿ ಆದೇಶ ನೀಡಿದೆ. ಸೂಲಿಬೆಲೆ ಪರವಾಗಿ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.