ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

ವಕೀಲೆ, ಸಾಹಿತಿ, ವಾಗ್ಮಿ, ನಿರೂಪಕಿ, ಕಥಾವಾಚಕಿ, ಹಿನ್ನಲೆ ಧ್ವನಿ ಕಲಾವಿದೆ, ಯೋಗಪಟು, ರಂಗಭೂಮಿ ಕಲಾವಿದೆ ರಾಜಶ್ರೀ ಜಯರಾಜ್ ಪೂಜಾರಿ ನಿಧನರಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದ ರಾಜಶ್ರೀ ಚಿಕಿತ್ಸೆ ಗುಣಮುಖವಾಗದೇ ಮರಳಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಕಥೆ, ಪ್ರಬಂಧ, ಭಾಷಣ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಹುಮಾನ ಪಡೆಯುವುದರಲ್ಲಿ ಶಾಲಾ ದಿನಗಳಿಂದಲೇ ಸದಾ ಮುಂಚೂಣಿಯಲ್ಲಿದ್ದ ಹುಡುಗಿ. ತೀರಾ ಕಷ್ಟದ ಹಿನ್ನಲೆಯಿಂದ ಬಂದರೂ ಓದಿನಲ್ಲಿ ಸದಾ ಮುಂದಿದ್ದ ವಿದ್ಯಾರ್ತಿನಿಯಾಗಿದ್ದರು. ಬಂಟ್ವಾಳದಲ್ಲಿ ಜನಿಸಿ ಬಡಗ ಎಕ್ಕಾರುವಿನಲ್ಲಿ ಪ್ರೌಢಶಾಲಾ ಶಿಕ್ಷಣ, ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಎಸ್ ಡಿಎಂ ಲಾ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದು ಮಂಗಳೂರಿನಲ್ಲಿ ವಕೀಲೆಯಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಕನ್ನಡ ಕುವರಿ ಪ್ರಶಸ್ತಿ 2015, ಕನ್ನಡ ಧ್ವನಿ ಪ್ರಶಸ್ತಿ 2016, ಅಮರ ಬೊಳ್ಳಿಲು ಪ್ರಶಸ್ತಿ, ಬುಕ್ ಬ್ರಹ್ಮ ಜನ ಮೆಚ್ಚಿದ ಕಥೆ ಪ್ರಶಸ್ತಿ ಸಹಿತ ಸನ್ಮಾನಗಳು ಅವರಿಗೆ ಒಲಿದಿತ್ತು. ಇವರು ಬರೆದ ಅನೇಕ ಕತೆ, ಲೇಖನ, ವ್ಯಕ್ತಿ ಪರಿಚಯ, ಪ್ರಬಂಧಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ತುಳು ಪರಿಷತ್ ಮಂಗಳೂರು, ಮಕ್ಕಿಮನೆ ಕಲಾವೃಂದ ಮಂಗಳೂರು, ಸಾಹಿತ್ಯಾಸಕ್ತರ ಬಳಗ ಮೈಸೂರು, ಸಾಹಿತ್ಯ ಸಿಂಚನ ಬರಹಗಾರರ ಬಳಗ, ಇಂಚರ ಕಲಾವಿದರು ಸುಂಕದಕಟ್ಟೆ ಬಜ್ಪೆ ಸಹಿತ ಹಲವು ಸಂಘಟನೆ, ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಇವರ ನಿಧನಕ್ಕೆ ಜಿಲ್ಲೆಯ ಸಾಹಿತ್ಯ ಪ್ರೇಮಿಗಳು, ತುಳು ಹೋರಾಟಗಾರರು, ಸಂಘಟಕರು, ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.