ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!

ಅನಾಮಧೇಯ ವ್ಯಕ್ತಿಯೊಬ್ಬ ತಾನು ಧರ್ಮಸ್ಥಳದ ಮಾಜಿ ಸ್ವಚ್ಚತಾ ಕರ್ಮಿ ಎಂದು ಹೇಳಿಕೊಂಡು ತಾನು ನೂರಾರು ಶವಗಳನ್ನು ಹೂತಿದ್ದು, ಅದರಲ್ಲಿ ಹೆಚ್ಚಿನವು ಹೆಂಗಸರು, ಯುವತಿಯರು, ಹೆಣ್ಣು ಮಕ್ಕಳದ್ದು, ಅದು ಕೂಡ ಅತ್ಯಾಚಾರಕ್ಕೆ ಒಳಪಟ್ಟಿರುವ ಶವಗಳನ್ನು ಕೂಡ ಹೂತಿದ್ದೇನೆ ಎಂದು ಹೇಳಿದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆಗಳೆಲ್ಲಾ ಮುಗಿದು ಈಗ ಆ ವ್ಯಕ್ತಿ ತೋರಿಸಿದ ಜಾಗಗಳಲ್ಲಿ ಅಗೆಯುವ ಕೆಲಸ ಆರಂಭವಾಗಿದೆ.
ಆತ ಒಟ್ಟು 13 ಕಡೆ ಈಗಾಗಲೇ ತೋರಿಸಿದ ಜಾಗಗಳನ್ನು ಮಾರ್ಕ್ ಮಾಡಲಾಗಿದ್ದು, ಒಂದೊಂದೇ ಜಾಗಗಳನ್ನು ಅಗೆಯುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಮೊದಲು ಗುರುತಿಸಿದ್ದ ಸ್ಥಳದಲ್ಲಿ ಐದಾರು ಅಡಿ ಆಳಕ್ಕೆ ಅಗೆದರೂ ಯಾವುದೇ ಕಳೇಬರದ ಕುರುಹು ಸಿಕ್ಕಿಲ್ಲ. ಹೀಗಾಗಿ ಎರಡನೇ ಸಮಾಧಿ ಅಗೆಯುವ ಕೆಲಸ ಆರಂಭವಾಗಿದೆ. ಯಾವಾಗ ಆತ ಹೇಳಿದ ಮೊದಲ ಜಾಗದಲ್ಲಿ ಐದಾರು ಅಡಿ ಅಗೆದರೂ ಯಾವುದೇ ಕಳೇಬರ ಸಿಗಲಿಲ್ಲ ಎಂದಾಗ ಇನ್ನಷ್ಟು ಆಳಕ್ಕೆ ಅಗೆಯಲು ಜೆಸಿಬಿಗೆ ಆದೇಶ ಹೋಗಿದೆ. ಅದರ ಪ್ರಕಾರ ಜೆಸಿಬಿ ಈಗ ಸ್ಥಳಕ್ಕೆ ಆಗಮಿಸಿದ್ದು, ಕೆಲಸ ಆರಂಭಿಸಿದೆ. ಇದೀಗ ಆತ ತೋರಿಸಿದ ಎರಡನೇ ಸ್ಥಳದಲ್ಲಿ ಅಗೆಯುವ ಕಾರ್ಯ ಆರಂಭವಾಗಿದೆ.
ಅನಾಮಧೇಯ ವ್ಯಕ್ತಿ ತೋರಿಸಿದ ಮೊದಲ ಜಾಗ ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲಿಯೇ ಇದೆ. ಮಳೆ ನಡುವೆ ಹೂತಿರುವ ಜಾಗ ಅಗೆಯಲಾಗಿದೆ. ಐದಾರು ಅಡಿ ಅಗೆದರೂ ಕಳೇಬರ ಸಿಕ್ಕಿಲ್ಲ. ಆದರೆ ಅಗೆದ ಕಡೆ ಈಗ ಮಳೆ ನೀರು ತುಂಬಿಕೊಂಡಿದೆ. ಹೀಗಾಗಿ ಸದ್ಯಕ್ಕೆ ಮೊದಲ ಸ್ಥಳ ಅಗೆತ ನಿಲ್ಲಿಸಲಾಗಿದೆ. ದೂರುದಾರ ಮತ್ತಷ್ಟು ಅಗೆಯಲು ಹೇಳಿದರೆ ಅಗೆಯಲೇಬೇಕಾಗುತ್ತದೆ. ಇಲ್ಲದಿದ್ದರೆ ವಿಶೇಷ ತನಿಖಾ ತಂಡ ಸಹಕರಿಸಿಲ್ಲ ಎಂದು ಆತನ ಪರ ವಕೀಲರು ದೂರು ಕೊಟ್ಟರೆ ಅದು ಮತ್ತೊಂದು ವಿವಾದಕ್ಕೆ ಕಾರಣವಾಗಬಹುದು. ಒಂದು ಕಡೆ ಮಳೆ ಮತ್ತೊಂದು ಕಡೆ ನೀರಿನ ಒರತೆಯಿಂದ ಅಗೆದಿರುವ ಸ್ಥಳದಲ್ಲಿ ನೀರು ತುಂಬಿಕೊಂಡಿದೆ.
ಸಮಾಧಿ ಅಗೆಯುತ್ತಿರುವ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಹಿಂದೆ ಅನಾಥ ಶವಗಳನ್ನು ಹೂತುತ್ತಿದ್ದರು ಎನ್ನುವುದು ಕೆಲವರ ಅಭಿಪ್ರಾಯ. ಯಾಕೆಂದರೆ ಹಿಂದೆ ಅಲ್ಲಿ ಅಧಿಕೃತ ಸ್ಮಶಾನವಿರಲಿಲ್ಲ. ಆಗ ಇದೇ ಜಾಗದಲ್ಲಿ ವಾರಿಸುದಾರರಿಲ್ಲದ ಶವಗಳನ್ನು ಹೂತುತ್ತಿದ್ದರು ಎನ್ನಲಾಗುತ್ತದೆ. ಆದರೆ ಈ ವ್ಯಕ್ತಿ ತೋರಿಸಿದ ಜಾಗಗಳಲ್ಲಿ ಒಂದಾದರೂ ಶವ ದೊರೆತರೂ ಆ ಬಗ್ಗೆ ವಿವರವಾದ ತನಿಖೆ ಆರಂಭವಾಗಲಿದೆ. ಈಗಾಗಲೇ ಈ ವಿಷಯದಲ್ಲಿ ಧರ್ಮಸ್ಥಳದ ಪರ ಮತ್ತು ವಿರುದ್ಧ ಎನ್ನಬಹುದಾದ ಮನಸ್ಥಿತಿಯ ಜನರು ಇರುವುದರಿಂದ ಒಂದು ವೇಳೆ ತಲೆಬುರುಡೆ ಸಿಕ್ಕಿದರೆ ಅದನ್ನು ತಮ್ಮ ವಾದಕ್ಕೆ ಅನುಗುಣವಾಗಿ ಜೋಡಿಸುವ ಕಾರ್ಯವನ್ನು ಅಯಾಯ ಪಂಗಡದವರು ಮಾಡುವ ಸಾಧ್ಯತೆ ಇದೆ.
ಇನ್ನು ಈ ವಿಷಯ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುವ ಸಾಧ್ಯತೆ ಇದ್ದು, ಇದನ್ನು ನೋಡಲು ಜನರು ಅಲ್ಲಿ ಗುಂಪುಕೂಡುತ್ತಿದ್ದಾರೆ. ಅನಾಮಧೇಯ ವ್ಯಕ್ತಿಯ ಜೊತೆ ಪೊಲೀಸರು ಎರಡನೇ ದಿನವೂ ನೇತ್ರಾವತಿ ಸ್ನಾನಘಟ್ಟದ ಬಳಿ ಮಹಜರು ಆರಂಭಿಸಿದ್ದಾರೆ. ಎರಡನೇ ದಿನವೂ ಆತ ಕೆಲವು ಕಡೆ ಮಾರ್ಕ್ ಮಾಡಲು ಹೇಳಿರುವುದಾಗಿ ಗೊತ್ತಾಗಿದೆ. ಆ ವ್ಯಕ್ತಿ ಇಂದು ಕೂಡ ಹತ್ತರಿಂದ ಹದಿನೈದು ಸ್ಥಳ ಗುರುತಿಸಿದರೆ ಕನಿಷ್ಟ ಇಪ್ಪತ್ತೈದರಷ್ಟು ಸ್ಥಳವಾದರೂ ಆಗುತ್ತದೆ. ಈಗ ದೈಹಿಕವಾಗಿ ಅಗೆಯುವ ಜೊತೆಗೆ ಜೆಸಿಬಿಯಿಂದಲೂ ಉತ್ಪನನ ಕಾರ್ಯವೂ ನಡೆಯುತ್ತಿದೆ. ಪೊಲೀಸರ ಒಂದು ತಂಡ ಉತ್ಖನನ ನಡೆಸುತ್ತಿದ್ದಾರೆ. ಇನ್ನೊಂದು ತಂಡ ಸ್ಥಳ ಮಹಜರು ಪ್ರಕ್ರಿಯೆ ನಡೆಸುತ್ತಿದೆ.