ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ

ಬಲವಂತದ ಧಾರ್ಮಿಕ ಮತಾಂತರ ಮತ್ತು ಮಾನವ ಕಳ್ಳಸಾಗಣೆಯ ಆರೋಪದ ಮೇಲೆ ಛತ್ತೀಸಘಡ ರಾಜ್ಯದ ರಾಜಧಾನಿ ರಾಯಪುರದ ದುರ್ಗ್ ನಲ್ಲಿ ಕೇರಳ ಮೂಲದ ಇಬ್ಬರು ಸನ್ಯಾಸಿನಿಯರ ಬಂಧನವಾಗಿತ್ತು. ಅವರ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಳ್ಳಲು ಛತ್ತೀಸಘಡದ ನ್ಯಾಯಾಲಯ ನಿರಾಕರಿಸಿದೆ.
ಮಾನವ ಕಳ್ಳಸಾಗಣೆ ಆರೋಪಗಳು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯಡಿಯಲ್ಲಿ ಬರುವುದರಿಂದ ಅದು ನ್ಯಾಯವ್ಯಾಪ್ತಿಯ ಕೊರತೆಯನ್ನು ಗಮನಿಸಿದೆ. ಸನ್ಯಾಸಿನಿಯರು ಬಿಲಾಸಪುರದ ಎನ್ ಐಎ ನ್ಯಾಯಾಲಯವನ್ನು ಸಂಪರ್ಕಿಸಬೇಕು. ಸನ್ಯಾಸಿನಿಯರಾದ ಸಿಸ್ಟರ್ ಪ್ರೀತಾ ಮೇರಿ ಮತ್ತು ವಂದನಾ ಪ್ರಾನ್ಸಿಸ್ ನ್ಯಾಯಾಂಗ ಬಂಧನದಲ್ಲಿಯೇ ಇರುತ್ತಾರೆ ಎಂದು ದುರ್ಗ್ ನ ಸೆಷನ್ಸ್ ನ್ಯಾಯಾಲಯವು ತಿಳಿಸಿದೆ.
ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುವುದಿಲ್ಲ ಎಂದು ನ್ಯಾಯಾಲಯ ಹೇಳಿರುವುದು, ರಾಜಕೀಯ ಚರ್ಚೆಯನ್ನು ತೀವ್ರಗೊಳಿಸಿದೆ. ಕೇರಳದ ಸಂಸದರು ಸಂಸತ್ತಿನ ಹೊರಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ತಕ್ಷಣ ಸನ್ಯಾನಿಸಿಯರ ಬಿಡುಗಡೆಗೆ ಒತ್ತಾಯಿಸಿದರು. ಛತ್ತೀಸಘಡ ಸರಕಾರವು ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.
ದುರ್ಗ್ ಇಲ್ಲಿನ ಸ್ಥಳೀಯ ಭಜರಂಗದಳದ ಸದಸ್ಯ ರವಿ ನಿಗಮ್ ನೀಡಿದ ದೂರಿನ ಮೇರೆಗೆ ಜುಲೈ 25 ರಂದು ದುರ್ಗ್ ರೈಲು ನಿಲ್ದಾಣದಲ್ಲಿ ಸನ್ಯಾಸಿನಿಯರನ್ನು ಬಂಧಿಸಲಾಯಿತು. ಯಾವಾಗ ಈ ಬಂಧನದ ಸುದ್ದಿ ಹರಡಿತೋ ಕೇರಳದಲ್ಲಿ ದೊಡ್ಡ ಸಂಚಲನ ಉಂಟಾಯಿತು. ರಾಜಕೀಯವಾಗಿ ಆರೋಪ, ಪ್ರತ್ಯಾರೋಪಗಳು ಕೇಳಿಬಂದವು. ಕೇರಳದ ಆಡಳಿತರೂಢ ಎಡ ಪ್ರಜಾಸತ್ತಾತ್ಮಕ ರಂಗ, ವಿರೋಧ ಪಕ್ಷ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ, ಕ್ರಿಶ್ಚಿಯನ್ ಸಮುದಾಯ ಹಾಗೂ ಚರ್ಚ್ ನಾಯಕರು ಈ ಬಂಧನವನ್ನು ಖಂಡಿಸಿ ಹೋರಾಟವನ್ನು ಮಾಡಿದೆ. ಕೇರಳದಲ್ಲಿ ನಡೆದ ಪ್ರತಿಭಟನೆಯ ಬಿಸಿ ದೆಹಲಿಗೂ ತಲುಪಬೇಕೆಂಬ ಉದ್ದೇಶದಿಂದ ಕೇರಳದ ಸಂಸದರು ಸಂಸತ್ ಅಧಿವೇಶನದ ಅವಧಿಯಲ್ಲಿ ಪಾರ್ಲಿಮೆಂಟ್ ಹೊರಗೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಆದರೆ ಛತ್ತೀಸಘಡದ ಮುಖ್ಯಮಂತ್ರಿ ವಿಷ್ಣು ದಿಯೋ ಸಾಯಿ ಅವರು ಮಾತ್ರ ಈ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ.
ಈಗ ಕೇರಳದ ಸನ್ಯಾನಿಸಿಯರು ಯಾವ ಹೆಣ್ಣುಮಕ್ಕಳನ್ನು ಆಗ್ರಾದಲ್ಲಿ ಕೆಲಸ ಕೊಡಿಸುತ್ತೇನೆಂದು ಕರೆದೊಯ್ಯುತ್ತಿದ್ದರೋ ಅವರ ಮನೆಯವರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಆದರೆ ಮನೆಯವರು ನಮ್ಮ ಒಪ್ಪಿಗೆಯ ಮೇರೆಗೆ ನಾವು ಯುವತಿಯರನ್ನು ಕಳುಹಿಸಿಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ. ಸಂತ್ರಸ್ತ ಯುವತಿಯ ಸಹೋದರಿ ಹೇಳುವ ಪ್ರಕಾರ ” ನನ್ನ ಹೆತ್ತವರು ಈಗಾಗಲೇ ಮೃತಪಟ್ಟಿರುವುದರಿಂದ ನನ್ನ ಸಹೋದರಿಗೆ ಆಗ್ರಾದಲ್ಲಿ ಆರೋಗ್ಯ ಶುಶ್ರೂಕಿಯಾಗಿ ಕೆಲಸ ಕೊಡಿಸುತ್ತೇನೆಂದು ಹೇಳಿರುವುದರಿಂದ ಕಳುಹಿಸಿಕೊಟ್ಟಿದ್ದೇವೆ. ಅವಳ ಭವಿಷ್ಯಕ್ಕೂ ಅದೊಂದು ದಾರಿಯಾಗಲಿ ಎನ್ನುವುದು ಆಸೆ. ನನಗೂ ಇವರು ಲಕ್ನೋದಲ್ಲಿ ಕೆಲಸ ಕೊಡಿಸಿದ್ದಾರೆ. ಆ ಸನ್ಯಾಸಿನಿಯರು ಅಮಾಯಕರಾಗಿದ್ದಾರೆ. ನನ್ನ ಸಹೋದರಿ ಒಪ್ಪಂದಕ್ಕೆ ಒಪ್ಪಿಯೇ ಹೋಗಿರುತ್ತಾಳೆ. ಇನ್ನು ಅವಳ ಜೊತೆ ರೈಲ್ವೆ ನಿಲ್ದಾಣದ ತನಕ ಯುವಕ ಕೂಡ ಅಮಾಯಕ. ಈಗ ಅವನನ್ನು ಕೂಡ ಅವರ ಜೊತೆ ಬಂಧಿಸಲಾಗಿರುವುದು ಸರಿಯಲ್ಲ” ಎಂದು ಮೂರು ಜನ ಅಕ್ಕ ತಂಗಿಯರಲ್ಲಿ ಹಿರಿಯ ಅಕ್ಕ ಪೊಲೀಸರಿಗೆ ಫೋನಿನಲ್ಲಿ ಹೇಳಿದ್ದಾಳೆ ಎಂದು ಗೊತ್ತಾಗಿದೆ.
ಇನ್ನು ಮತ್ತೊರ್ವ ಸಂತ್ರಸ್ತ ಯುವತಿಯ ಕಿರಿಯ ಸಹೋದರಿ ಮಾತನಾಡಿ ” ಮತಾಂತರಕ್ಕೂ ಇದಕ್ಕೂ ಸಂಬಂಧವಿಲ್ಲ. ನಾವು ಐದು ವರ್ಷಗಳ ಹಿಂದೆಯೇ ಕ್ರೈಸ್ತರಾಗಿ ಮತಾಂತರ ಹೊಂದಿದ್ದೇವೆ. ಆದ್ದರಿಂದ ತಕ್ಷಣ ಸನ್ಯಾಸಿನಿಯರನ್ನು ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದ್ದಾಳೆ.
ಈ ವಿಷಯದ ಬಗ್ಗೆ ಛತ್ತೀಸಘಡದ ಸಿಎಂ ಸಾಯಿ ಅವರು ಇದಕ್ಕೆ ರಾಜಕೀಯ ಬಣ್ಣ ನೀಡುವ ಅಗತ್ಯ ಇಲ್ಲ. ನಮಗೆ ಹೆಣ್ಣು ಮಕ್ಕಳ ಸುರಕ್ಷತೆ ಮುಖ್ಯ. ಪೊಲೀಸ್ ಇಲಾಖೆ ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಮುಂದಿನ ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ. ಛತ್ತೀಸಘಡ ಶಾಂತಿಯುತ ರಾಜ್ಯ. ಇಲ್ಲಿ ಎಲ್ಲಾ ಧರ್ಮ, ಜಾತಿ, ಸಮುದಾಯದವರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ನಮ್ಮ ರಾಜ್ಯದ ಸಹೋದರಿಯರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.