2008 ಮಾಲೆಗಾಂ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್ ಸೇರಿ 7 ಜನ ದೋಷಮುಕ್ತ!

ಬರೋಬ್ಬರಿ 17 ವರ್ಷಗಳ ಬಳಿಕ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಕೋರ್ಟ್ 2008 ರ ಕುಖ್ಯಾತ ಮಾಲೆಗಾಂ ಬಾಂಬ್ ಬ್ಲಾಸ್ಟ್ ಪ್ರಕರಣದ ತೀರ್ಪು ನೀಡಿದ್ದು ಎಲ್ಲಾ ಏಳು ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. ಈ ಪ್ರಕರಣದಲ್ಲಿ ಮಾಜಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸಹಿತ ಏಳು ಮಂದಿಯ ಮೇಲೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಪ್ರಸ್ತುತ ಎಲ್ಲಾ ಆರೋಪಿಗಳು ಜಾಮೀನಿನಲ್ಲಿ ಹೊರಗಿದ್ದರು.
2008, ಸೆಪ್ಟೆಂಬರ್ 29 ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂ ನಗರದಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಲ್ಲಿ ಆರು ಜನ ಮೃತಪಟ್ಟಿದ್ದರೆ 100ಕ್ಕೂ ಮಿಕ್ಕಿ ನಾಗರಿಕರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಮೃತರಿಗೆ ಎರಡು ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಧನವನ್ನು ನ್ಯಾಯಾಲಯ ಘೋಷಿಸಿದೆ. ಬಾಂಬ್ ಬ್ಲಾಸ್ಟಿಗೆ ಬಳಸಲಾದ ದ್ವಿಚಕ್ರ ವಾಹನದ ಚಾಸೀಸ್ ನಂಬ್ರ ಅಳಿಸಲ್ಪಟ್ಟಿದ್ದು, ಆ ವಾಹನ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಸಂಬಂಧಿಸಿದ್ದು ಎನ್ನುವ ವಾದಕ್ಕೆ ಯಾವುದೇ ನಂಬಿಕಾರ್ಹ ಮೂಲಗಳಿಲ್ಲ ಹಾಗೂ ಆ ವಾದ ಈ ಪ್ರಕರಣದಲ್ಲಿ ಹೊಂದಿಕೆ ಆಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇನ್ನು ಆ ಘಟನೆ ಸಂಭವಿಸುವ ಎರಡು ವರ್ಷಗಳ ಮೊದಲೇ ಆಕೆ ಸನ್ಯಾಸತ್ವ ಸ್ವೀಕರಿಸಿದ್ದು, ಲೌಕಿಕ ಜಗತ್ತಿನಿಂದ ಅಂತರ ಕಾಯ್ದುಕೊಂಡಿದ್ದರು ಎಂದು ನ್ಯಾಯಾಲಯ ಗಮನಿಸಿದೆ.
ವಿಶೇಷ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ “ಬಾಂಬ್ ಬ್ಲಾಸ್ಟ್ ಮಾಲೆಗಾಂನಲ್ಲಿ ಸಂಭವಿಸಿದೆ ಎನ್ನುವುದನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ಯಶಸ್ವಿಯಾದರೂ ಆ ದುರ್ಘಟನೆ ನಡೆದ ಸ್ಥಳದಿಂದ ವಶಪಡಿಸಿಕೊಳ್ಳಲಾದ ವಾಹನದಲ್ಲಿ ಬಾಂಬ್ ಇರಿಸಲಾಗಿತ್ತು ಎಂದು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ” ಎಂದು ಹೇಳಿದ್ದಾರೆ. ಇನ್ನು ಬಾಂಬ್ ಬ್ಲಾಸ್ಟ್ ಆದ ಬಳಿಕ ಆ ಪರಿಸರವನ್ನು ಯಥಾರ್ಥವಾಗಿ ಕಾಪಾಡಿಕೊಳ್ಳುವಲ್ಲಿ ಪೊಲೀಸರು ಕಾರ್ಯ ನಿರ್ವಹಿಸಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅದರಿಂದ ದುರ್ಘಟನೆ ನಡೆದ ಪರಿಸರ ಕಲುಷಿತಗೊಂಡು ಸಾಂದರ್ಭಿಕ ಸಾಕ್ಷಗಳು ನಾಶಗೊಂಡಿದೆ.
ಇನ್ನು ಪ್ರಾಸಿಕ್ಯೂಶನ್ ವಾದಿಸಿದಂತೆ ಗಾಯಾಳುಗಳ ಸಂಖ್ಯೆ 95 ವಿನ: 101 ಅಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಅದರೊಂದಿಗೆ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರು ಕಾಶ್ಮೀರದಿಂದ ಆರ್ ಡಿಎಕ್ಸ್ ತರಿಸಿ ಮನೆಯಲ್ಲಿ ಸಂಗ್ರಹಿಸಿ ಅದನ್ನು ಬ್ಲಾಸ್ಟಿಗೆ ಬಳಸಲಾಗಿತ್ತು ಎನ್ನುವುದನ್ನು ಪ್ರಾಸಿಕ್ಯೂಶನ್ ಸಾಬೀತುಪಡಿಸುವಲ್ಲಿ ವಿಫಲಗೊಂಡಿದೆ ಎಂದು ನ್ಯಾಯಾಲಯ ಹೇಳಿದೆ.