ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು

ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಕೆಂಪುಕಲ್ಲಿನ ಕೊರತೆ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಜನಸಾಮಾನ್ಯರು ಮನೆಯ ಗೃಹಪ್ರವೇಶಕ್ಕಾಗಿ ಒಳ್ಳೆಯ ಮಹೂರ್ತವನ್ನು ಜ್ಯೋತಿಷ್ಯರ ಬಳಿ ಕೇಳಿರುತ್ತಾರೆ. ವೈದಿಕರು ಹೇಳಿದ ದಿನವನ್ನು ನಿಗದಿಪಡಿಸಿರುತ್ತಾರೆ. ಆದರೆ ಇತ್ತ ಕೆಂಪುಕಲ್ಲುಗಳೇ ಸಿಗದೇ ಮನೆಯ ನಿರ್ಮಾಣದ ಕೆಲಸ ಅರ್ಧಕ್ಕೆ ನಿಂತಿರುವುದು ಕುಟುಂಬದ ಎಲ್ಲರಿಗೂ ತೀವ್ರ ಬೇಸರವನ್ನು ಉಂಟು ಮಾಡುತ್ತಿದೆ. ಇಂತಹ ಅಸಂಖ್ಯಾತ ಘಟನೆಗಳು ನಮ್ಮ ನಿಮ್ಮ ಸುತ್ತಮುತ್ತಲೂ ನಡೆಯುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಹೇಗಾದರೂ ಮಾಡಿ ಮನೆ ಕಟ್ಟಬೇಕೆಂದು ಬಯಸುವ ಜನರಿಗೆ ಎಲ್ಲಿಂದಲಾದರೂ ಕೆಂಪುಕಲ್ಲು ಸಿಕ್ಕಿದರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ಇರುತ್ತಾರೆ. ಅಂತವರಿಗಾಗಿ ಈಗ ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೆಂಪುಕಲ್ಲು ಸಾಗಿಸುವವರು ಇದ್ದಾರೆ. ಅವರಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್. ಅವರು ಓವರ್ ಲೋಡ್ ತುಂಬಿಸಿಕೊಂಡು ಬರುತ್ತಾರೆ. ಅಂತಹ ಲಾರಿಯೊಂದನ್ನು ಮಂಗಳವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಿಡಿದಿದ್ದಾರೆ. ಆರ್ ಟಿಒ ಇನ್ಸಪೆಕ್ಟರ್ ಪ್ರಮೋದ್ ಭಟ್ ದಾಳಿ ನಡೆಸಿ ಲಾರಿ ಚಾಲಕರಿಗೆ ನೋಟಿಸ್ ನೀಡಿದ್ದಾರೆ. ಸುಮಾರು ನಾಲ್ಕು ಲಾರಿಗಳನ್ನು ತಡೆದು ನಿಲ್ಲಿಸಿದ ಅವರು ಬಳಿಕ ಬಿಸಿರೋಡಿನ ಖಾಸಗಿ ವೇ ಬ್ರಿಡ್ಜ್ ನಲ್ಲಿ ತೂಕ ಮಾಡಲಾಗಿ ನೋಟಿಸು ನೀಡಿದ್ದಾರೆ. ಜಿಲ್ಲೆಯಲ್ಲಿ ಕೆಂಪುಕಲ್ಲಿನ ಸಮಸ್ಯೆ ಆರಂಭವಾದ ಬಳಿಕ ಅಕ್ರಮವಾಗಿ ಕೇರಳದಿಂದ ದಕ ಜಿಲ್ಲೆಯತ್ತ ಕಲ್ಲುಗಳು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುವ ದಂಧೆ ಆರಂಭವಾಗಿದೆ.