ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!

ಒಂದಾದ ಬಳಿಕ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿದ ಉದ್ದವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಚುನಾವಣೆಯಲ್ಲಿ ಘನಘೋರ ಸೋಲನ್ನು ಅನುಭವಿಸಿದ್ದಾರೆ. ಈ ಮೂಲಕ ಪ್ರಥಮ ಚುಂಬನಂ ದಂತಭಗ್ನಂ ಎಂದೇ ಹೇಳಬಹುದಾಗಿದೆ. ಉದ್ದವ್ ಬಣದ ಶಿವಸೇನೆ ಹಾಗೂ ರಾಜ್ ಠಾಕ್ರೆಯವರ ಮಹಾರಾಷ್ಟ್ರದ ನವನಿರ್ಮಾಣ್ ಸೇನಾ ಬಿಇಎಸ್ ಟಿ (ಬೆಸ್ಟ್) ಎಂಪ್ಲಾಯಿಸ್ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಚುನಾವಣೆಯಲ್ಲಿ ಅಭೂತಪೂರ್ವ ಸೋಲನ್ನು ಕಂಡಿದ್ದಾರೆ.
ಉತ್ಕೃಷ್ ಪ್ಯಾನೆಲ್ ಹೆಸರಿನ ಒಕ್ಕೂಟ ರಚಿಸಿ ಕಣಕ್ಕೆ ಇಳಿದ ಈ ಒಕ್ಕೂಟ 21 ರಲ್ಲಿ 19 ರಲ್ಲಿ ಸ್ಪರ್ಧಿಸಿದ್ದು ಎಲ್ಲದರಲ್ಲಿಯೂ ಸೋಲನ್ನು ಕಾಣುವ ಮೂಲಕ ಶೂನ್ಯ ಸಂಪಾದನೆ ಮಾಡಿದೆ. ಈ ಮೂಲಕ ಈ ಶಿವಸೇನೆಯ ಒಂಭತ್ತು ವರ್ಷದ ಬಿಗಿಹಿಡಿತ ಇಲ್ಲಿಗೆ ಕೊನೆಗೊಂಡಿದೆ. ಬೃಹನ್ಮುಂಬಯಿ ವಿದ್ಯುತ್ ಪೂರೈಕೆ ಹಾಗೂ ಸಾರಿಗೆ (ಬೆಸ್ಟ್) ಇದರ ಒಟ್ಟು 15000 ಸದಸ್ಯರು ಇಲ್ಲಿ ಚುನಾವಣೆಯಲ್ಲಿ ಮತಚಲಾವಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 10000 ಜನ ಮತದಾನ ಮಾಡಿದ್ದಾರೆ.
ಬೆಸ್ಟ್ ಇದರಲ್ಲಿ ಮರಾಠಿ ಭಾಷಿಕ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಠಾಕ್ರೆ ಸಹೋದರರ ಸೋಲು ಮುಂಬರುವ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ (ಬಿಎಂಸಿ) ಚುನಾವಣೆಯಲ್ಲಿ ದೊಡ್ಡ ಆಘಾತ ನೀಡಿದಂತಾಗಿದೆ. ಇತ್ತೀಚೆಗೆ ಮರಾಠಿ ಅಸ್ಮಿತೆಯ ವಿಷಯ ಇಟ್ಟು ಠಾಕ್ರೆ ಸಹೋದರರು ಜಂಟಿಯಾಗಿ ಮುಂಬೈಯಲ್ಲಿ ಬೃಹತ್ ಸಮಾವೇಶ ನಡೆಸಿದ್ದರು.