ನಮಸ್ತೆ ಸದಾ ವತ್ಸಲೆ… ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಲ್ಲಿ, ಬೈಠಕ್ ಗಳಲ್ಲಿ ಸ್ವಯಂ ಸೇವಕರು ಹಾಡುವ ಸಂಘದ ಗೀತೆಯ ಮೊದಲ ಚರಣವನ್ನು ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಡುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ನಮಸ್ತೆ ಸದಾ ವತ್ಸಲೇ ಮಾತೃಭೂಮೇ, ತ್ವಯಾ ಹಿಂದುಭೂಮೇ ಸುಖಂ ವರ್ದಿತೋಹಮ್, ಮಹಾಮಂಗಲೇ ಪುಣ್ಯಭೂಮೇ ತ್ವದಥ್ಯೇ ಹೀಗೆ ಹಾಡಿದ್ದಾರೆ. ಡಿಕೆ ಶಿವಕುಮಾರ್ ಈ ಗೀತೆಯನ್ನು ಹಾಡುವ ಮೂಲಕ ಏನು ಸಂದೇಶ ನೀಡಿದ್ದಾರೆ ಎನ್ನುವ ಬಗ್ಗೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈಗ ಅವರು ಹಾಡಿರುವ ಈ ಗೀತೆಯ ಜೊತೆಗೆ ಅವರು ಹಿಂದೊಮ್ಮೆ ತಾನು ಕೂಡ ಆರ್ ಎಸ್ ಎಸ್ ಶಾಖೆಗೆ ಹೋಗಿದ್ದೆ ಎನ್ನುವುದನ್ನು ಸೇರಿಸಿ ಕೆಲವರು ವಿಡಿಯೋ ವೈರಲ್ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಪರಂಪರಾಗತವಾಗಿ ಆರ್ ಎಸ್ ಎಸ್ ಅನ್ನು ವಿರೋಧಿಸುತ್ತಾ ಬರುತ್ತಿದೆ. ಅದು ಇಡೀ ದೇಶಕ್ಕೆ ಗೊತ್ತಿದೆ. ಸಂಘದ ಹೆಸರು ಎತ್ತಿದರೆ ಸಾಕು ರಾಹುಲ್ ಹಾಗೂ ಖರ್ಗೆ ತಮ್ಮ ಅಷ್ಟೂ ಕೋಪವನ್ನು ಹೊರಗೆ ಹಾಕುತ್ತಾರೆ. ಹಾಗಿರುವಾಗ ಡಿಕೆಶಿಯವರು ಸದನದಲ್ಲಿಯೇ ನೇರವಾಗಿ ದಾಖಲೆಯಾಗುವಂತಹ ಗೀತೆಯನ್ನು ಹಾಡಿರುವುದು ಏನು ಸೂಚನೆ ನೀಡುತ್ತದೆ ಎನ್ನುವುದು ಈಗ ಇರುವ ಪ್ರಶ್ನೆ.
ಡಿಕೆಶಿಯವರು ಏನು ಮಾತನಾಡಿದರೂ, ಮಾತನಾಡದಿದ್ದರೂ, ಹಾವಭಾವದಲ್ಲೇ ಉತ್ತರ ಕೊಟ್ಟರೂ ಅದು ಸುದ್ದಿಯಾಗುತ್ತದೆ, ಚರ್ಚೆಯಾಗುತ್ತದೆ. ಹಾಗಿರುವಾಗ ಘಂಟಾಘೋಷವಾಗಿ, ನಗುನಗುತ್ತಾ ಸಂಘದ ಗೀತೆ ಹಾಡಿದರೆ ಅದರ ಹಿಂದಿನ ವಿಷಯದ ಬಗ್ಗೆ ಚರ್ಚೆಯಾಗದೇ ಇರುತ್ತಾ? ಅದು ಆಗಿದೆ. ಇದು ಅವರು ಹೈಕಮಾಂಡಿಗೆ ಕೊಟ್ಟ ಸಂದೇಶ ಅನ್ನುವವರೂ ಇದ್ದಾರೆ. ಡಿಸೆಂಬರ್ ಒಳಗೆ ಸಿಎಂ ಸ್ಥಾನ ಸಿಗದೇ ಇದ್ದರೆ ಅವರು ಪಕ್ಷದ ವಿರುದ್ಧ ರೆಬೆಲ್ ಆಗುತ್ತಾರಾ ಎನ್ನುವ ಪ್ರಶ್ನೆಯೂ ಇದೆ. ಇನ್ನು ಕಾಂಗ್ರೆಸ್ ಮಹಾ ನಾಯಕರು ಭಾಜಪಾ ಮತ್ತು ಅದರ ಮಾತೃ ಸಂಸ್ಥೆಯನ್ನು ದ್ವೇಷಿಸುವಾಗ ಇವರು ಸಾಫ್ಟ್ ಆದರಾ ಎನ್ನುವುದನ್ನು ಕೂಡ ಕೆಲವು ವ್ಯಾಖ್ಯಾನಿಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿವಕುಮಾರ್ ” ನಾನು ಹುಟ್ಟು ಕಾಂಗ್ರೆಸ್ಸಿಗ. ನನ್ನ ರಕ್ತ, ನನ್ನ ಜೀವನವೇ ಕಾಂಗ್ರೆಸ್. ಆರ್ ಎಸ್ ಎಸ್ ಹೇಗೆ ಶಾಲೆಗಳನ್ನು ಸ್ವಾಧೀನಪಡಿಸಿ ಕರ್ನಾಟಕದಲ್ಲಿ ಸಂಸ್ಥೆಗಳ ನಿರ್ಮಾಣ ಮಾಡುತ್ತಿದೆ ಎನ್ನುವುದು ನಮಗೆ ಗೊತ್ತಿದೆ. ನಾನು ಕಾಂಗ್ರೆಸ್ಸಿಗನಾಗಿದ್ದು, ಕಾಂಗ್ರೆಸ್ ಪಕ್ಷವನ್ನು ನನ್ನ ಸಂಪೂರ್ಣ ಶಕ್ತಿಯೊಂದಿಗೆ ಮುನ್ನಡೆಸುತ್ತೇನೆ” ಎಂದು ಹೇಳಿದ್ದಾರೆ.