ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!

ಹುಬ್ಬಳ್ಳಿಯ ಈದ್ಗಾ ಮೈದಾನ ಯಾರಿಗೆ ಗೊತ್ತಿಲ್ಲ, ಹೇಳಿ. ಒಂದಲ್ಲ ಒಂದು ವಿವಾದವನ್ನು ಆಗಾಗ ಮೈಮೇಲೆ ಎಳೆದುಕೊಳ್ಳುತ್ತಿದ್ದ ಈ ಮೈದಾನದ ಹೆಸರು ಈಗ ಅಧಿಕೃತವಾಗಿ ಬದಲಾಗಿದೆ. ಈದ್ಗಾ ಮೈದಾನವನ್ನು ಅನ್ನು ರಾಣಿ ಚೆನ್ನಮ್ಮ ಮೈದಾನವೆಂದು ಸ್ಥಳೀಯ ಮಹಾನಗರ ಪಾಲಿಕೆಯ ಉಪಮೇಯರ್ ಸಂತೋಷ್ ಚೌಹ್ವಾಣ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ಬಾರಿಯ ಗಣೇಶೋತ್ಸವು ಇಲ್ಲಿ ಶಾಂತಿಯುತವಾಗಿ ನಡೆದಿದ್ದು, ಗಣೇಶೋತ್ಸವದ ಕಾರ್ಯಕ್ರಮದಲ್ಲಿಯೇ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನವೆಂದು ಮರುನಾಮಕರಣ ಮಾಡಲಾಗಿದೆ. ಈ ಬಗ್ಗೆ ಮಹಾನಗರ ಪಾಲಿಕೆಯು ಠರಾವು ಪಾಸ್ ಮಾಡಿದೆ. ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನವೆಂದು ಮರುನಾಮಕರಣ ಮಾಡಿರುವುದು ಹಿಂದೂಪರ ಸಂಘಟನೆಗಳ ಹಾಗೂ ಗಜಾನನ ಉತ್ಸವ ಸಮಿತಿಯವರಲ್ಲಿ ಸಂತೋಷವನ್ನು ತಂದಿದೆ.
ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಗಣೇಶೋತ್ಸವು ವಿಸರ್ಜನೆಯ ಮೂಲಕ ಸಂಪನ್ನಗೊಂಡಿದೆ. ವಿವಾದದಲ್ಲಿಯೇ ಅಂತ್ಯಗೊಳ್ಳುತ್ತಿದ್ದ ಹುಬ್ಬಳ್ಳಿ ಈದ್ಗಾ ಮೈದಾನ ಗಣೇಶೋತ್ಸವ ಈ ಬಾರಿ ಅತ್ಯಂತ ಶಾಂತಿಯಂದ ಸಂಪನ್ನಗೊಂಡಿರುವುದರಿಂದ ಪೊಲೀಸ್ ಇಲಾಖೆ, ಸ್ಥಳೀಯಾಡಳಿತ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ಬಾರಿ ಮುಖ್ಯ ಅತಿಥಿಯಾಗಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಸಕ ಮಹೇಶ್ ಟೆಂಗಿನಕಾಯಿ, ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಾಸ್ಕರ್ ಸೇರಿದಂತೆ ಹಲವರು ಪ್ರತಾಪ್ ಸಿಂಹಗೆ ಸಾಥ್ ನೀಡಿದರು.