ಪವಿತ್ರ ಗೌಡ ಜಾಮೀನು ಅರ್ಜಿ ವಜಾ!

ರೇಣುಕಾಸ್ವಾಮಿ ಹತ್ಯಾ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಕರಣದ ಎ – 1 ಆರೋಪಿ ಪವಿತ್ರಾ ಗೌಡಗೆ ನ್ಯಾಯಾಲಯ ನಿರಾಸೆ ಮಾಡಿದೆ. ಮಂಗಳವಾರ ಸೆಪ್ಟೆಂಬರ್ 2 ರಂದು ಸೆಷೆನ್ಸ್ ಕೋರ್ಟ್ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂ ಕೋರ್ಟ್ ಕೆಲವು ದಿನಗಳ ಹಿಂದೆ ಹೈಕೋರ್ಟ್ ನಲ್ಲಿ ಜಾಮೀನು ನೀಡಿರುವ ಅಂಶಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜಾಮೀನು ರದ್ದುಗೊಳಿಸಿದ ಬಳಿಕ ಪವಿತ್ರ ಗೌಡ ಕೆಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
ಪವಿತ್ರ ಪರ ವಕೀಲ ಬಾಲನ್ ವಾದ ಮಂಡಿಸಿದ್ದರು. ” ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಪ್ರಶ್ನಿಸುತ್ತಿಲ್ಲ. ಆದರೆ ಆದೇಶದಲ್ಲಿ ತಾಂತ್ರಿಕ ಲೋಪ ಇದೆ. ಆರೋಪಪಟ್ಟಿಯನ್ನು ಬಿಎನ್ ಎಸ್ ಬದಲು ಸಿಆರ್ ಪಿಸಿಯಲ್ಲಿ ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರು ಅರ್ಹರು. ಹೀಗಾಗಿ ಜಾಮೀನು ಮಂಜೂರು ಮಾಡಬೇಕು” ಎಂದು ವಾದ ಮಂಡಿಸಿದ್ದರು.
ಬಾಲನ್ ಅವರ ಈ ವಾದಕ್ಕೆ ಪ್ರತಿವಾದಿಯಾದ ಸಚಿನ್ ಆಕ್ಷೇಪ ವ್ಯಕ್ತಪಡಿಸಿದ್ದು, ಜಾಮೀನು ರದ್ದು ಮಾಡದಂತೆ ಮನವಿಯನ್ನು ಮಾಡಿಕೊಂಡಿದ್ದರು. ಅದರಂತೆ ಕೋರ್ಟ್ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ವಿಚಾರಣೆಯ ನಂತರ ಪವಿತ್ರಾ ಗೌಡ , ದರ್ಶನ್ ಸೇರಿ 7 ಜನ ಆರೋಪಿಗಳ ಜಾಮೀನು ಕ್ಯಾನ್ಸಲ್ ಮಾಡಿ ತಕ್ಷಣ ಬಂಧಿಸುವಂತೆ ಆದೇಶ ನೀಡಿತ್ತು. ಅಗಸ್ಟ್ 14 ರಂದು ಪವಿತ್ರಾ ಗೌಡ ಮತ್ತೆ ಜೈಲು ಸೇರಿದ್ದರು.