ಸೀಟ್ ಬೆಲ್ಟ್ ಧರಿಸದ್ದಕ್ಕೆ ದಂಡ ಪಾವತಿ ಮಾಡಿದ ಸಿದ್ಧರಾಮಯ್ಯ!

ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಸಿದ್ಧರಾಮಯ್ಯನವರು ತಮ್ಮ ನಡೆಯಿಂದ ತೋರಿಸಿಕೊಟ್ಟಿದ್ದಾರೆ. ಸದ್ಯ ಪೊಲೀಸ್ ಇಲಾಖೆ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ಹಾಕಲಾದ ದಂಡ ಪಾವತಿಗೆ 50% ರಿಯಾಯಿತಿ ನೀಡುವ ಅಭಿಯಾನವನ್ನು ನಡೆಸುತ್ತಿದೆ. ಆದ್ದರಿಂದ ಜನಸಾಮಾನ್ಯರು ಈ ಸೌಲಭ್ಯ ಬಳಸಿ ದಂಡ ಕಟ್ಟುತ್ತಿದ್ದಾರೆ.
ಸದ್ಯ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡ ತಮ್ಮ ಸರಕಾರಿ ಕಾರಿನಲ್ಲಿ ಪ್ರಯಾಣಿಸುವಾಗಲೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ. ಅವರ ಸರಕಾರಿ ಕಾರು ( ಕೆಎ-05, ಜಿಎ- 2023) ವಿರುದ್ಧ ಏಳು ಪ್ರಕರಣಗಳು ದಾಖಲಾಗಿವೆ. ಸಿಎಂ ಕೂಡ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಈ ಏಳು ಪ್ರಕರಣಗಳು ದಾಖಲಾದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ತಕ್ಷಣ ಆ ಹಣವನ್ನು ಪಾವತಿಸುವ ಮೂಲಕ ಸಿಎಂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಸಿಎಂ ಒಟ್ಟು 2000 ರೂಪಾಯಿಗಳನ್ನು ಪಾವತಿಸಿರುವುದರಿಂದ ಈ ಹಿಂದಿನ ಎಲ್ಲಾ ದಂಡಗಳನ್ನು ಕಟ್ಟಿದಂತಾಗಿದೆ. ಈ ಬಗ್ಗೆ “ಎಕ್ಸ್” ತಾಣದಲ್ಲಿ “ಆರ್ ಸಿ ಬೆಂಗಳೂರು” ಹೆಸರಿನ ಖಾತೆಯಲ್ಲಿ ಮುಖ್ಯಮಂತ್ರಿ ಕಾರಿನ ಫೋಟೋ ಪೋಸ್ಟ್ ಹಾಕಲಾಗಿದೆ. ಸಿಎಂ ಸರಕಾರಿ ಕಾರು ಕೆಎ-05, ಜಿಎ-2023 ಕಾರಿನ ಮೇಲೆ ನಿಯಮ ಉಲ್ಲಂಘನೆ ಸಂಬಂಧ 7 ಕೇಸ್ ಬಾಕಿ ಇದ್ದು, 2000 ರೂ ದಂಡ ಪಾವತಿಸಬೇಕಿದೆ ಎಂದು ಬರೆಯಲಾಗಿತ್ತು. ಈ ಪೈಕಿ 6 ಸಲ ಸೀಟ್ ಬೆಲ್ಟ್ ಧರಿಸದೇ, ಒಮ್ಮೆ ವೇಗವಾಗಿ ಚಾಲನೆಗೆ ದಂಡ ಬಿದ್ದಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಕಾರಿನ ಮೇಲೆ ಹಾಕಲಾಗಿರುವ ದಂಡ ಪಾವತಿಸುವ ಮೂಲಕ ಉಳಿದ ಜನಪ್ರತಿನಿಧಿಗಳಿಗೂ ಮಾದರಿ ಆಗಿದ್ದಾರೆ.