ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ

ಬೆಂಗಳೂರಿನ ಬಾಲಕಿಯೊಬ್ಬಳು ಹೈದ್ರಾಬಾದಿನಲ್ಲಿರುವ ಅಕ್ಕನ ಮನೆಗೆ ಹೋಗಿದ್ದಳು. ಅಲ್ಲಿಂದ ಹಿಂತಿರುಗುವಾಗ ಆಕೆಯ ಅಕ್ಕ ಖಾಸಗಿ ಬಸ್ಸೊಂದರಲ್ಲಿ ತಂಗಿಯನ್ನು ಕೂರಿಸಿ ತಾಯಿಗೆ ಫೋನ್ ಮಾಡಿ ಬಸ್ಸಿನಲ್ಲಿ ಕಳುಹಿಸುತ್ತಿರುವ ವಿಷಯ ಹೇಳಿದ್ದಾಳೆ. ಮೊಬೈಲ್ ಚಾರ್ಜ್ ಮುಗಿದ ಕಾರಣ ಬಸ್ಸಿನ ಚಾಲಕನ ಬಳಿ ದಾರಿಯಲ್ಲಿ ಮೊಬೈಲ್ ಚಾರ್ಜ್ ಹಾಕಲು ಬಾಲಕಿ ಹೇಳಿದ್ದಾಳೆ. ಕೆಲವು ನಿಮಿಷಗಳ ಬಳಿಕ ಹುಡುಗಿ ಮೊಬೈಲ್ ಕೇಳಿದ್ದಾಳೆ. ಆಗ ಸಹ ಚಾಲಕ ಮುತ್ತು ಕೊಟ್ಟರೆ ಮಾತ್ರ ಮೊಬೈಲ್ ನೀಡುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೇ ಹುಡುಗಿ ಮಲಗಿದ್ದಾಗ ಆಕೆಯ ಸೀಟ್ ಬಳಿ ಬಂದು ಲೈಂಗಿಕವಾಗಿ ಕಾಡಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ರಾತ್ರಿ ಪದೇ ಪದೇ ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ. ಈತನ ಕಿರುಕುಳ ತಾಳಲಾರದೇ ಬಾಲಕಿ ಕರೆ ಮಾಡಿ ತನ್ನ ತಾಯಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.
ಗುರುವಾರ ಬೆಳಿಗ್ಗೆ ಬಸ್ಸು ಬೆಂಗಳೂರಿನ ಬಸವೇಶ್ವರ ನಗರಕ್ಕೆ ಬರುತ್ತಿದ್ದಂತೆ ಸಹ ಚಾಲಕ ಆರೀಫ್ ನನ್ನು ಕೆಳಗೆ ಇಳಿಸಿ ತಾಯಿ ಮತ್ತು ಆಕೆಯ ಅಣ್ಣ ಪ್ರಶ್ನಿಸಿದ್ದಾರೆ.
ಆಗ ಆರೀಫ್ ಕೈ ಮುಗಿದು ತಪ್ಪಾಗಿದೆ ಎಂದು ಅವಲತ್ತುಕೊಂಡಿದ್ದಾನೆ. ನಂತರ ಆತನ ಬಟ್ಟೆಯನ್ನು ಬಿಚ್ಚಿ ಚೆನ್ನಾಗಿ ಹೊಡೆದಿದ್ದಾರೆ. ಆತ ಧರಿಸಿದ ಎಲ್ಲಾ ಬಟ್ಟೆ ತೆಗೆದು ಬೆತ್ತಲೆಗೊಳಿಸಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತಾಯಿಯನ್ನು ತಡೆದು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಬಾಲಕಿಯ ತಾಯಿ, ಹೈದ್ರಾಬಾದಿನಲ್ಲಿರುವ ನನ್ನ ಮಗಳ ಮನೆಗೆ ಇವಳು ಹೋಗಿದ್ದಳು. ರಾತ್ರಿ ಮಗಳು ಫೋನ್ ಮಾಡಿ ತಂಗಿಯನ್ನು ಬಸ್ಸಿನಲ್ಲಿ ಹತ್ತಿಸಿದ್ದೇನೆ ಎಂದು ಹೇಳಿದ್ದಳು. ಆದರೆ ಆತ ಮಗಳಿಗೆ ಬಸ್ಸಿನಲ್ಲಿ ಕೊಡಬಾರದ ಕಿರುಕುಳ ನೀಡಿದ್ದಾನೆ. ಅದನ್ನು ಇಲ್ಲಿ ಹೇಳಲು ಅಸಹ್ಯವಾಗುತ್ತಿದೆ. ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೋ ಗೊತ್ತಿಲ್ಲ. ನಾನು ಮಾತ್ರ ಈತನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಹೀಗೆ ಯಾವುದೋ ಚಾಲಕರು ಮಾಡುವ ದುಷ್ಟ ಕೃತ್ಯಗಳಿಂದ ಎಲ್ಲಾ ಚಾಲಕರ ಮೇಲೆ ಸಂಶಯದ ದೃಷ್ಟಿ ಅಥವಾ ರಾತ್ರಿ ಹೊತ್ತಿನಲ್ಲಿ ಹೆಣ್ಣುಮಗಳನ್ನು ಒಂಟಿಯಾಗಿ ಕಳುಹಿಸಲು ಹೆದರಿಕೆ ಆಗುವುದು ಸಹಜ. ಬೇರೆ ಪ್ರಯಾಣಿಕರು ಇರುತ್ತಾರೆ ಆದರೆ ನಿಜ. ಆದರೆ ಇಂತಹ ಚಾಲಕ, ನಿರ್ವಾಹಕರಿಂದ ಹೆಣ್ಣುಮಕ್ಕಳಿಗೆ ತೊಂದರೆ ಆದರೆ ಎನ್ನುವ ಆತಂಕ ಇದ್ದೇ ಇರುತ್ತದೆ. ಆದ್ದರಿಂದ ಇಂತಹ ದುರುಳರಿಗೆ ಯೋಗ್ಯ ಶಿಕ್ಷೆ ಆದರೆ ಆಗ ಸಮಾಜದಲ್ಲಿರುವ ಇಂತಹ ನೀಚ ಮನಸ್ಸಿನವರಿಗೆ ಒಂದು ಎಚ್ಚರಿಕೆಯ ಸಂದೇಶ ನೀಡಿದಂತೆ ಆಗುತ್ತದೆ.