ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!

ಕೆಮ್ಮಿನ ಸಿರಪ್ ಸೇವನೆಯಿಂದಾಗಿ ದೇಶದಲ್ಲಿ 16 ಮಕ್ಕಳು ಸಾವನ್ನಪ್ಪಿರುವ ಘಟನೆ ನಿಜಕ್ಕೂ ಪುಟ್ಟ ಮಕ್ಕಳನ್ನು ಹೊಂದಿರುವ ಹೆತ್ತವರಲ್ಲಿ ಆತಂಕವನ್ನು ಸೃಷ್ಟಿಸಿದೆ. ಮಕ್ಕಳು ಒಂದಿಷ್ಟು ಕೆಮ್ಮಿದರೂ ಅವರಿಗೆ ಏನು ಮಾಡಬೇಕು ಎನ್ನುವ ಬಗ್ಗೆ ಹೆದರಿಕೆ ಇದೆ. ವೈದ್ಯರ ಬಳಿ ಹೋಗಲು ಕೂಡ ಭಯ ಪಡುವಂತಾಗಿದೆ. ಯಾಕೆಂದರೆ ಕೋಲ್ಡಿಫ್ ಕೆಮ್ಮಿನೌಷಧ ಸೇವಿಸಿ ಮಧ್ಯಪ್ರದೇಶದ 14 ಮಕ್ಕಳು ಸಾವನ್ನಪ್ಪಲು ಕಾರಣ ಒಬ್ಬ ವೈದ್ಯನೇ ಆಗಿದ್ದಾನೆ. ಅವನ ಹೆಸರು ಡಾ| ಪ್ರವೀಣ್ ಸೋನಿ. ಈತ ಮಧ್ಯಪ್ರದೇಶದ ಛಿಂದ್ವಾಡದ ಸರಕಾರಿ ವೈದ್ಯ. ಅದರೊಂದಿಗೆ ಖಾಸಗಿ ಚಿಕಿತ್ಸಾಲಯವನ್ನು ಕೂಡ ನಡೆಸುತ್ತಿದ್ದ. ಮೃತ ಮಕ್ಕಳಲ್ಲಿ 11 ಮಂದಿ ಈತನ ಬಳಿಯೇ ಚಿಕಿತ್ಸೆ ಪಡೆದಿದ್ದರು. ಅವರಿಗೆ ಈತ ಕೋಲ್ಡಿಫ್ ಔಷಧ ಶಿಫಾರಸ್ಸು ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಸದ್ಯ ಇತನನ್ನು ಛಿಂದ್ವಾಡದ ರಾಜ್ ಪಾಲ್ ಚೌಕನಿಂದ ಬಂಧಿಸಲಾಗಿದೆ. ಸರಕಾರಿ ಉದ್ಯೋಗದಿಂದಲೂ ಅಮಾನತು ಮಾಡಲಾಗಿದೆ. ಈತನ ವಿರುದ್ಧ ಬಿಎನ್ ಎಸ್ ಸೆಕ್ಷನ್ 276, 105 ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ – 1940 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಸ್ತುತ ದೇಶದ ವಿವಿದೆಡೆ 16 ಮಕ್ಕಳ ಸಾವಿಗೆ ಕಾರಣವಾಗಿರುವ ಕೋಲ್ಡ್ರಿಫ್ ಸಿರಪ್ ಅನ್ನು ಮಹಾರಾಷ್ಟ್ರ ಸರಕಾರ ನಿಷೇಧಿಸಿದೆ. ಈ ಮೂಲಕ ಮಧ್ಯಪ್ರದೇಶ, ತಮಿಳುನಾಡು ಮತ್ತು ಕೇರಳದ ಬಳಿಕ ಇದನ್ನು ನಿಷೇಧಿಸಿದ 4 ನೇ ರಾಜ್ಯವಾಗಿ ಹೊರಹೊಮ್ಮಿದೆ. ಎಸ್ ಆರ್ – 13 ಬ್ಯಾಚ್ ನ ಕೋಲ್ಡ್ರಿಫ್ ಮಾರಾಟ, ವಿತರಣೆ, ಸೇವನೆಯನ್ನು ತಕ್ಷಣದಿಂದ ನಿಲ್ಲಿಸಿ, ರಾಜ್ಯದ ಆಹಾರ ಮತ್ತು ಔಷಧ ಆಡಳಿತ ಆದೇಶ ಹೊರಡಿಸಿದೆ.
ಕೆಮ್ಮಿನ ಸಿರಪ್ ಸೇವನೆಯಿಂದಾಗಿ 16 ಮಕ್ಕಳು ಸಾವನ್ನಪ್ಪಿರುವುದರಿಂದ ಆತಂಕ ಸೃಷ್ಟಿಯಾಗಿರುವ ಹೊತ್ತಿನಲ್ಲೇ, ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯಾಧಿಕಾರಿಗಳ ಜತೆ ಸಭೆ ನಡೆಸಿದ್ದು, ದೋಷಪೂರಿತ ಸಿರಪ್ ಗಳ ಮೇಲೆ ಕ್ರಮಕ್ಕೆ ಸೂಚಿಸಿದ್ದಾರೆ. ಸಭೆ ವೇಳೆ, ಎಲ್ಲಾ ಉತ್ಪಾದಕರು ಔಷಧಗಳನ್ನು ನಿಯಮಾನುಸಾರ ತಯಾರಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಅಂತೆಯೇ, ಆ ಮಾನದಂಡಗಳನ್ನು ತಲುಪುವಲ್ಲಿ ವಿಫಲರಾದವರ ಪರವಾನಿಗೆಯನ್ನು ರದ್ದುಗೊಳಿಸಬೇಕು ಎಂದು ಸೂಚಿಸಲಾಗಿದೆ. ಜತೆಗೆ ಕೆಮ್ಮಿನ ಸಿರಪ್ ಅನ್ನು ಮಕ್ಕಳು ಆದಿಯಾಗಿ ಎಲ್ಲರೂ ಮಿತವಾಗಿ ಬಳಸುವಂತೆ ನೋಡಿಕೊಳ್ಳಬೇಕು. ಆರೋಗ್ಯಕ್ಕೆ ಸಂಬಂಧಿತ ಎಲ್ಲಾ ಚಿಕಿತ್ಸಾ ವ್ಯವಸ್ಥೆಗಳ ನಿಯಮಿತ ಪರಿಶೀಲನೆ ಮಾಡಬೇಕು. ಏನೇ ತೊಂದರೆ ಆದರೂ ಕೇಂದ್ರದ ಗಮನಕ್ಕೆ ತಂದು ಅಂತರ-ರಾಜ್ಯ ಸಮನ್ವಯವನ್ನು ಬಲಪಡಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಲಾಗಿದೆ. ಸದ್ಯ ಕರ್ನಾಟಕದಲ್ಲಿ ಇಂತಹ ಯಾವುದೇ ಆಪತ್ತು ಇಲ್ಲ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.