ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
ರಾಜದೀಪ್ ಸರದೇಸಾಯಿ ದೇಶದ ಖ್ಯಾತ ಪತ್ರಕರ್ತ. ರಾಷ್ಟ್ರೀಯ ವಾಹಿನಿಗಳಲ್ಲಿ ಡಿಬೇಟ್ ಗಳಲ್ಲಿ ನಿರೂಪಕರಾಗಿ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿದ್ದಾರೆ. ತಮ್ಮ ಪತ್ರಿಕೋದ್ಯಮದ ಉದ್ದಕ್ಕೂ ನರೇಂದ್ರ ಮೋದಿಯವರನ್ನು ಟೀಕಿಸುತ್ತಾ ಬಂದಿರುವ ರಾಜದೀಪ್, ನರೇಂದ್ರ ಮೋದಿಯವರ ಕಟು ಟೀಕಾಕಾರರು ಎಂದೇ ಕರೆಸಿಕೊಂಡವರು. ಮೋದಿಯವರನ್ನು ಟೀಕಿಸುತ್ತಾ, ಗಾಂಧಿ ಕುಟುಂಬವನ್ನು ಬೆಂಬಲಿಸುತ್ತಾ ಬಂದಿರುವ ರಾಜದೀಪ್ ಅವರ ಪತ್ನಿ ಸಾಗರೀಕಾ ಘೋಷ್ ತೃಣಮೂಲ ಕಾಂಗ್ರೆಸ್ಸಿನ ಸಂಸದೆ. ಅವರು ಕೂಡ ಮೋದಿಯವರನ್ನು ಟೀಕಿಸುವ ಯಾವ ಅವಕಾಶವನ್ನು ಬಿಡುವುದಿಲ್ಲ.

ಹೀಗಿರುವಾಗ ಇತ್ತೀಚೆಗೆ ರಾಜದೀಪ್ ಸರದೇಸಾಯಿ ಅವರಿಗೆ ಕ್ಯಾನ್ಸರ್ ರೋಗ ತಗುಲಿದೆ. ಅದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಯಿತು. ಅವರು ಶಸ್ತ್ರಚಿಕಿತ್ಸೆಯ ಬಳಿಕ ಗುಣಮುಖರಾಗುತ್ತಿದ್ದಂತೆ ಒಂದು ದಿನ ಅವರಿಗೆ ಒಂದು ಕರೆ ಬರುತ್ತೆ. ಅತ್ತಲಿಂದ ಮಾತನಾಡಿದ ಧ್ವನಿ ” ನಿಮ್ಮ ಜೊತೆ ಪ್ರಧಾನ ಮಂತ್ರಿಯವರು ಮಾತನಾಡಲು ಬಯಸಿದ್ದಾರೆ” ಎನ್ನುತ್ತದೆ. ಅದರ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜದೀಪ್ ಅವರೊಂದಿಗೆ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡು ಸುಮಾರು ಅರ್ಧ ಗಂಟೆ ಮಾತನಾಡಿದ್ದಾರೆ. ಕ್ಯಾನ್ಸರ್ ಬಂದ ಬಳಿಕ ಹೇಗಿರಬೇಕು, ಯಾವ ಆರೋಗ್ಯ ಸೇವಿಸಬೇಕು, ಜೀವನ ಶೈಲಿ ಹೇಗೆ ರೂಢಿಸಿಕೊಳ್ಳಬೇಕು ಎಂದು ಎಲ್ಲವನ್ನು ಹೇಳಿದ್ದಾರೆ. ಮೋದಿಯವರ ಈ ನಡೆ ರಾಜದೀಪ್ ಅವರಿಗೆ ಆಶ್ಚರ್ಯ ತಂದಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಜದೀಪ್ ” ಪ್ರಧಾನಿಯವರು ನನಗೆ ಕಾಲ್ ಮಾಡಬೇಕಾದ ಅವಶ್ಯಕತೆ ಇರಲಿಲ್ಲ. ಆದರೂ ಅವರು ಸೌಜನ್ಯಪೂರ್ವಕವಾಗಿ ಮಾಡಿದ್ದಾರೆ. ಅಷ್ಟು ಬ್ಯುಸಿ ಇದ್ದರೂ ಎಲ್ಲರ ಬಗ್ಗೆನೂ ಒಂದು ಕಾಳಜಿ ಇಟ್ಟುಕೊಳ್ಳುವ ಕೆಲಸ ಅವರು ಮಾಡುತ್ತಾ ಬಂದಿದ್ದಾರೆ. ನಾನು ಅವರನ್ನು 90 ರ ದಶಕದಿಂದ ಬಲ್ಲೆ. ಒಬ್ಬ ಪತ್ರಕರ್ತ ಹಾಗೂ ರಾಜಕಾರಣಿಯ ಸಂಬಂಧದಂತೆ ನಮ್ಮದು ಇತ್ತು. ಅದು ಬಿಟ್ಟರೆ ಅವರು ಕಾಲ್ ಮಾಡಿ ವಿಚಾರಿಸುವಷ್ಟು ಏನೂ ಇರಲಿಲ್ಲ” ಎಂದು ಹೇಳಿದ್ದಾರೆ.
ಅದರೊಂದಿಗೆ ವಿಶೇಷ ಎಂದರೆ ರಾಜದೀಪ್ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆವತ್ತು ಈ ಕಾಲ್ ಬಂದ ದಿನ ಅವರ ತಂಗಿ ಅವರ ಜೊತೆಗಿದ್ದರು. ಮೋದಿಯವರ ಕರೆಯ ನಂತರ ಅವರು ತಕ್ಷಣ ” ನಾಯಕನೆಂದರೆ ಹೀಗಿರಬೇಕು” ಎಂದು ಉದ್ಘರಿಸಿದ್ದನ್ನು ರಾಜದೀಪ್ ನೆನಪು ಮಾಡಿಕೊಂಡಿದ್ದಾರೆ. ಇನ್ನು ರಾಜದೀಪ್ ಮಗ ವೃತ್ತಿಯಲ್ಲಿ ವೈದ್ಯರು. ಅವರು ಕೂಡ ಈ ಫೋನ್ ಕರೆಯ ಬಳಿಕ ಮೋದಿಯವರ ಫ್ಯಾನ್ ಆಗಿದ್ದಾರೆ. ಒಬ್ಬ ನಾಯಕ ಎನಿಸಿಕೊಂಡವರು ಹೀಗೆ ಇರಬೇಕು ಎಂದು ರಾಜದೀಪ್ ಮಕ್ಕಳು ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರಂತೆ. ಒಟ್ಟಿನಲ್ಲಿ ಮೋದಿಯವರು ತಮ್ಮ ಕಟ್ಟಾ ಟೀಕಾಕರರನ್ನು ಕೂಡ ಮಾತನಾಡಿಸಿ, ಆರೋಗ್ಯ ವಿಚಾರಿಸಿ, ಅವರ ಬಗ್ಗೆ ತೋರುವ ಕಾಳಜಿಯನ್ನು ಕಂಡು ಅವರ ವಿರೋಧಿಗಳು ಕೂಡ ದಂಗಾಗಿದ್ದಾರೆ.
ಒಬ್ಬ ಪ್ರಧಾನ ಮಂತ್ರಿ ಹೀಗೂ ಇರುತ್ತಾರಾ ಎನ್ನುವುದು ಈಗ ಎಲ್ಲೆಡೆ ಚರ್ಚೆಯಲ್ಲಿರುವ ವಿಷಯ. ಯಾಕೆಂದರೆ ಅವರು ಕರೆ ಮಾಡಿದ್ದು ರಾಜದೀಪ್ ಅವರಿಗೆ. ಇನ್ನು ಈ ಘಟನೆಯ ಬಳಿಕ ರಾಜದೀಪ್ ಸರದೇಸಾಯಿ ಕೂಡ ಮೋದಿ ಬಗ್ಗೆ ಟೀಕೆ ಮಾಡುವುದನ್ನು ಕಡಿಮೆ ಮಾಡುತ್ತಾರಾ ಅಥವಾ ಇಲ್ವಾ ಎನ್ನುವುದನ್ನು ನೋಡಬೇಕು.









