ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೊಯಮುತ್ತೂರು ವಿಮಾನ ನಿಲ್ದಾಣದಲ್ಲಿ ಭಾರತೀಯ ಜನತಾ ಪಾರ್ಟಿಯ ತಮಿಳುನಾಡಿನ ಮಾಜಿ ಅಧ್ಯಕ್ಷ ಅಣ್ಣಾಮಲೈ ಅವರು ಸ್ವಾಗತಿಸಿದ್ದಾರೆ. ಮೋದಿಯವರು ದಕ್ಷಿಣ ಭಾರತದ ಸಾವಯವ ಕೃಷಿ ಸಮ್ಮೇಳನದಲ್ಲಿ ಭಾಗವಹಿಸಲು ಕೊಯಮುತ್ತೂರಿಗೆ ಬಂದಿಳಿದರು. ಈ ಸಂದರ್ಭದಲ್ಲಿ ಅಣ್ಣಾಮಲೈಯವರಿಗೆ ಹಸ್ತಲಾಘವ ನೀಡಿದ ಮೋದಿಯವರು ಹೆಗಲು ತಟ್ಟಿ ಶುಭ ಕೋರಿದರು. ಈ ಫೋಟೊವನ್ನು ಅಣ್ಣಾಮಲೈ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅಣ್ಣಾಮಲೈ ಭಾಜಪಾವನ್ನು ತೊರೆಯುತ್ತಾರೆ ಎಂದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಯಾರನ್ನೂ ಕೂಡ ಪಿಸ್ತೂಲ್ ತಲೆಗೆ ಇಟ್ಟು ಪಕ್ಷದಲ್ಲಿ ಉಳಿಸಲು ಆಗುವುದಿಲ್ಲ ಎಂದು ಮಾರ್ಮಿಕವಾಗಿ ಅಣ್ಣಾಮಲೈ ನುಡಿದಿದ್ದರು.

ಅವರು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಈ ಮಾತನ್ನು ಹೇಳಿದ್ದ ಕಾರಣ ಅವರು ಪಕ್ಷದೊಳಗೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ತಾನು ಬಯಸಿದರೆ ಮಾತ್ರ ಪಕ್ಷದಲ್ಲಿ ಉಳಿಯುತ್ತೇನೆ. ಇಲ್ಲದಿದ್ದರೆ ರಾಜಕೀಯ ಬಿಟ್ಟು ಕೃಷಿಗೆ ಮರಳುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದರು. ಒಂದು ವೇಳೆ ಅವರು ಬಿಜೆಪಿ ತೊರೆದರೆ ಅದರಿಂದ ಪಕ್ಷಕ್ಕೆ ಆಗುವ ನಷ್ಟದ ಬಗ್ಗೆನೂ ಪಕ್ಷದೊಳಗೆ ಚರ್ಚೆ ನಡೆದಿರುವ ಸಾಧ್ಯತೆಗಳಿವೆ. ಆದರೆ ಬಿಜೆಪಿಗೆ ಮುಂದಿನ ವರ್ಷ ಚುನಾವಣೆ ನಡೆಯುವ ತಮಿಳುನಾಡಿನಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕೆಂಬ ತುಡಿತವಿದೆ. ಅದು ಇವತ್ತಿನ ಪರಿಸ್ಥಿತಿಯಲ್ಲಿ ಏಕಾಂಗಿಯಾಗಿ ಬರುವುದು ಸಾಧ್ಯವಿಲ್ಲ. ಅದಕ್ಕಾಗಿ ಮಿತ್ರಪಕ್ಷದ ಆಸರೆ ಬೇಕು. ಹಾಗಾದರೆ ಅಧಿಕಾರದಲ್ಲಿರುವ ಡಿಎಂಕೆ ವಿರುದ್ಧ ಮಿತ್ರಪಕ್ಷ ಯಾವುದು ಎಂದು ನೋಡಲು ಹೋದರೆ ಅಲ್ಲಿ ಇರುವುದು ಎಐಎಡಿಎಂಕೆ. ಅದರ ಅಧ್ಯಕ್ಷ ಎಡಪ್ಪಡಿ ಕೆ ಪಳನಿಸ್ವಾಮಿ.
ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಮೈತ್ರಿ ಬೇಡಾ ಎಂದೇ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಮೈತ್ರಿ ಇಲ್ಲದೆ ಅಧಿಕಾರಕ್ಕೆ ಬರಲು ಅಸಾಧ್ಯ ಎಂದು ಬಿಜೆಪಿ ಹೈಕಮಾಂಡಿಗೆ ಗೊತ್ತಿದೆ.
ಆದರೆ ಪಳನಿಸ್ವಾಮಿಗೆ ಹೇಗಾದರೂ ಮಾಡಿ ಅಣ್ಣಾಮಲೈ ಅವರನ್ನು ರಾಜಕೀಯದಲ್ಲಿ ಬದಿಗೆ ಸರಿಸಬೇಕು ಎನ್ನುವುದೇ ಆಗಿದೆ. ಮೈತ್ರಿ ಒಪ್ಪಂದದ ಭಾಗವಾಗಿಯೇ ಅಣ್ಣಾಮಲೈ ಅವರನ್ನು ಬಿಜೆಪಿ ಹೈಕಮಾಂಡ್ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚಿಸಿತ್ತು. ಯಾಕೆಂದರೆ ಪಳನಿಸ್ವಾಮಿ ಹಾಗೂ ಅಣ್ಣಾಮಲೈ ಇಬ್ಬರೂ ಕೂಡ ಗೌಂಡರ್ ಎನ್ನುವ ಜಾತಿಗೆ ಸೇರಿದವರು. ಒಂದೇ ಜಾತಿಯ ಇಬ್ಬರು ರಾಜ್ಯದ ಪ್ರಮುಖ ಸ್ಥಾನದಲ್ಲಿ ಇದ್ದರೆ ಬೇರೆ ಜಾತಿಗಳಿಗೆ ಬೇಸರವಾಗುತ್ತದೆ ಎಂದು ಪಳನಿಸ್ವಾಮಿ ಬಿಜೆಪಿ ಹೈಕಮಾಂಡಿಗೆ ಹೇಳಿ ಮೋದಿ, ಶಾ ಒಪ್ಪಿದ ಮೇಲೆಯೇ ಮೈತ್ರಿಕೂಟದ ನೇತೃತ್ವ ವಹಿಸಿದ್ದಾರೆ.
ಮೇಲ್ನೋಟಕ್ಕೆ ನೋಡಿದರೆ ಅವರು ಹೇಳುವುದು ಸರಿ ಇದೆ. ಈಗ ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕ ಬೇರೆ ಬೇರೆ ಜಾತಿಯನ್ನು ಪ್ರತಿನಿಧಿಸುತ್ತಿದ್ದಾರೆ. ಹಾಗೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಬೇರೆ ಬೇರೆ ಜಾತಿಯನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಿರುವಾಗ ಇದೇ ಪಾಲಿಸಿಯನ್ನು ತಮಿಳುನಾಡಿಗೂ ಅನ್ವಯಿಸಲಾಗಿದೆ. ರಾಜಕೀಯದಲ್ಲಿ ಇದು ಸಹಜ ಲೆಕ್ಕಾಚಾರ. ಆದರೆ ಅಣ್ಣಾಮಲೈಯವರನ್ನು ರಾಜ್ಯಸಭೆಯಿಂದ ಆಯ್ಕೆ ಮಾಡಿ ಕೇಂದ್ರದಲ್ಲಿ ಮಂತ್ರಿ ಮಾಡುವ ಬಿಜೆಪಿ ಹೈಕಮಾಂಡ್ ಸೂತ್ರ ಇನ್ನು ಜಾರಿಗೆ ಬಂದಿಲ್ಲ. ಆದ್ದರಿಂದ ಅಣ್ಣಾಮಲೈ ಈಗ ಒಂದು ರೀತಿಯಲ್ಲಿ ಅತಂತ್ರರಾಗಿದ್ದಾರೆ. ಆದ್ದರಿಂದ ಅವರು ಪಕ್ಷ ಬಿಟ್ಟು ಹೋಗುವ ಸುಳಿವನ್ನು ನೀಡಿರುವುದು. ಈ ನಡುವೆ ಮೋದಿಯವರಿಗಾಗಿ ಪಕ್ಷಕ್ಕೆ ಬಂದಿದ್ದೇನೆ ಎಂದು ಅವರು ಹಿಂದೊಮ್ಮೆ ಹೇಳಿರುವುದರಿಂದ ಅವರು ಮೋದಿಯವರಿಗೆ ಹೇಳದೇ ಪಕ್ಷ ಬಿಡಲಿಕ್ಕಿಲ್ಲ ಎನ್ನುವುದು ಊಹೆ. ಈಗ ಅವರು ಮೋದಿಯವರನ್ನು ಕೊಯಮುತ್ತೂರಿನಲ್ಲಿ ಸ್ವಾಗತಿಸುವ ಮೂಲಕ ಮತ್ತೆ ಕುತೂಹಲ ಉಳಿಸಿಕೊಂಡಿದ್ದಾರೆ.









