ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
ಶಾಸಕರಿಗೆ ಕುಡುಕರ ಆರೋಗ್ಯದ ಬಗ್ಗೆನೂ ಕಾಳಜಿ ಇದೆ ಎಂದು ಸಾಬೀತಾಗಿದೆ. ಸರಕಾರದ ಖಜಾನೆಯನ್ನು ತುಂಬಿಸುವ ಕುಡುಕರ ಬಗ್ಗೆ ಶಾಸಕರು ಧ್ವನಿ ಎತ್ತಿದ ಘಟನೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ನಡೆಯಿತು. ರಾಜ್ಯದಲ್ಲಿ ಮದ್ಯಪಾನ ಮಾಡುವವರಲ್ಲಿ ಉಂಟಾಗುವ ಲಿವರ್ ಸಮಸ್ಯೆಗೆ ಚಿಕಿತ್ಸೆ ನೀಡಲು ಸರಕಾರದಿಂದ ಅನುದಾನ ನೀಡಬೇಕೆಂದು ಪಕ್ಷಾತೀತವಾಗಿ ಸದಸ್ಯರು ಆಗ್ರಹಿಸಿದ ಸ್ವಾರಸ್ಯಕರ ಘಟನೆ ನಡೆಯಿತು.
ವಿರೋಧ ಪಕ್ಷದ ಮುಖ್ಯದ ಸಚೇತಕ ಎನ್. ರವಿಕುಮಾರ್ ಮತ್ತು ಬಿಜೆಪಿಯ ಕೆ.ಎಸ್. ನವೀನ್ ಅವರು, ನಿಯಮ 330 ರ ಅಡಿಯಲ್ಲಿ ರಾಜ್ಯದಲ್ಲಿ ಮದ್ಯಪಾನಿಗಳ ಪೈಕಿ ಲಿವರ್ ಸಿರೋಸಿಸ್/ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ಸಂಬಂಧ ಅಬಕಾರಿ ಆದಾಯದ ಶೇ 20 ರಷ್ಟು ಮೊತ್ತ ಮೀಸಲಿಡುವಂತೆ ಕೋರಿದರು.

ಅದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ ಅಬಕಾರಿ ಸಚಿವ ಆರ್,ಬಿ, ತಿಮ್ಮಾಪೂರ, ರಾಜ್ಯದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ 195.27 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 47.46 ಲಕ್ಷ ಪೆಟ್ಟಿಗೆಗಳು ಕಡಿಮೆ ಮಾರಾಟವಾಗಿದೆ. ಶೀತ ವಾತಾವರಣ, ಚಳಿ ಹೆಚ್ಚಿರುವ ಕಾರಣ ಬಿಯರ್ ಮಾರಾಟ ಕುಸಿತ ಕಂಡಿದೆ ಎಂದರು.
ಇನ್ನು ಅಬಕಾರಿ ಆದಾಯವನ್ನು ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡಲಾಗುತ್ತಿದೆ. ಈ ಆದಾಯವನ್ನು ಬಜೆಟ್ ನಲ್ಲಿ ಅನುಮೋದಿಸಿದ ಕಾರ್ಯಕ್ರಮಗಳಿಗೆ ವ್ಯಯಿಸಲಾಗುತ್ತಿದೆ. ಸಂಚಿತ ನಿಧಿಗೆ ಜಮೆಯಾಗಿರುವ ಅನುದಾನವನ್ನು ಬೇರೆ ಉದ್ದೇಶಕ್ಕೆ ವೆಚ್ಚ ಮಾಡಲಾಗುವುದು. ಆದ್ದರಿಂದ ಮದ್ಯಪಾನಿಗಳಲ್ಲಿ ಲಿವರ್ ಸಿರೋಸಿಸ್/ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆಗೆ ಅಬಕಾರಿ ಆದಾಯದಿಂದ ವೆಚ್ಚ ಭರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಉತ್ತರದಿಂದ ಸಂತುಷ್ಟಗೊಳ್ಳದ ವಿಪಕ್ಷ ಸದಸ್ಯರು, ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದೆ. ಅದರ ನಡುವೆ ರಾಜ್ಯ ಸರಕಾರ 46 ಸಾವಿರ ಕೋಟಿ ರೂ ಅಬಕಾರಿ ಆದಾಯ ಸಂಗ್ರಹದ ಗುರಿ ನೀಡಿದೆ. ಹೀಗೆ ಹೆಚ್ಚಿನ ಪ್ರಮಾಣದ ಗುರಿ ನೀಡುವ ಮೂಲಕ ಮದ್ಯಪಾನಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಅದಕ್ಕೆ ಆಡಳಿತ ಪಕ್ಷದ ಶಿವಕುಮಾರ್ ಮಾತನಾಡಿ, ” ಕಳಪೆ ಮದ್ಯ ಮಾರಾಟದಿಂದಾಗಿ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಜತೆಗೆ ಹೊಸದಾಗಿ 1500 ಮದ್ಯದಂಗಡಿ ತೆರೆಯಲು ಸರಕಾರ ಯೋಜಿಸಿದೆ. ಇದನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
ಅಂತಿಮವಾಗಿ ಸಭಾನಾಯಕ ಎನ್.ಎಸ್. ಬೋಸರಾಜು ಅವರು, ರಾಜ್ಯದ ಜನರ ಆರೋಗ್ಯ ಮತ್ತು ಚಿಕಿತ್ಸೆಗಾಗಿ ರಾಜ್ಯ ಸರಕಾರದಿಂದ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹೀಗಾಗಿ ಅಬಕಾರಿ ಆದಾಯದಲ್ಲಿ ಲಿವರ್ ಸಿರೋಸಿಸ್/ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆಗೆ ಅನುದಾನ ನೀಡಲಾಗದು ಎಂದರು.









