ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
ಸರಕಾರದ 108 ಆಂಬುಲೆನ್ಸ್ ಸಕಾಲದಲ್ಲಿ ಬರದೇ ಕೊನೆಗೆ ಗೂಡ್ಸ್ ಟೆಂಪೊದಲ್ಲಿ ಮಂಚ ಇರಿಸಿ, ಅದರಲ್ಲಿ ಮಲಗಿಸಿ, ಆಸ್ಪತ್ರೆಗೆ ದಾಖಲಿಸಿರುವಂತಹ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ಜರುಗಿದೆ.
ರಾತ್ರಿ 7 ಗಂಟೆಗೆ ವೃದ್ಧರೋಗಿಯೊಬ್ಬರು ಅಸ್ವಸ್ಥಗೊಂಡರು. ತಕ್ಷಣ ಮನೆಯವರು ಆಂಬುಲೆನ್ಸ್ ಗಾಗಿ ಕರೆ ಮಾಡಿದ್ದಾರೆ. ಆದರೆ 9.30 ಆದರೂ ಆಂಬುಲೆನ್ಸ್ ಬರಲಿಲ್ಲ. ಅಷ್ಟರಲ್ಲಿ ರೋಗಿಯ ಪರಿಸ್ಥಿತಿ ಬಿಗಡಾಯಿಸಿದೆ. ಕೊನೆಗೆ ಮನೆಯವರು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿಯವರಿಗೆ ಕರೆ ಮಾಡಿದ್ದಾರೆ. ತಕ್ಷಣ ವಿಶು ಶೆಟ್ಟಿ ಅವರು ಖಾಸಗಿ ಆಂಬುಲೆನ್ಸ್ ಗೆ ಕರೆ ಮಾಡಿದರೂ ಭಾನುವಾರವಾದ ಕಾರಣ ಯಾರೂ ಬರಲಿಲ್ಲ.
ಕೊನೆಗೆ ವಿಶು ಶೆಟ್ಟಿಯವರು ಸ್ಟ್ರೇಚರ್ ಇಲ್ಲದೇ ಇದ್ದ ಕಾರಣ ಹೊದಿಕೆಯಲ್ಲಿ ರೋಗಿಯನ್ನು ಎತ್ತಿ, ತಮ್ಮದೇ ಗೂಡ್ಸ್ ಟೆಂಪೊದಲ್ಲಿ ಮಂಚ ಇರಿಸಿ, ರೋಗಿಯನ್ನು ಅದರಲ್ಲಿ ಮಲಗಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ವಿಶು ಶೆಟ್ಟಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಇದೆ. ಜಿಲ್ಲೆಯಲ್ಲಿ ಒಟ್ಟು 18 ರಷ್ಟು ಸರಕಾರಿ ಆಂಬುಲೆನ್ಸ್ ಇದೆ. ಆದರೆ ಅವುಗಳ ದುರಸ್ತಿ, ಚಾಲಕರ ಸಮಸ್ಯೆ ಇತ್ಯಾದಿಗಳಿಂದ ಕೇವಲ ನಾಲ್ಕೈದು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಯವರು ಇನ್ನಾದರೂ ಈ ಸಮಸ್ಯೆ ಪರಿಹರಿಸಬೇಕು. ದಯವಿಟ್ಟು ಬಡಜನರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು ಆಗ್ರಹಿಸಿದ್ದಾರೆ.
ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ಮಾತನಾಡಿ, ಉದ್ಯಾವರದಲ್ಲಿ ರೋಗಿ ಎರಡು ಗಂಟೆ ಕಾದರೂ 108 ಸೇವೆ ಲಭ್ಯವಾಗದೇ ಸಮಾಜ ಸೇವಕ ವಿಶು ಶೆಟ್ಟಿ ಅವರು ರೋಗಿಯನ್ನು ಗೂಡ್ಸ್ ವಾಹನದಲ್ಲಿ ಕರೆ ತಂದ ಘಟನೆ ಅತ್ಯಂತ ದುರದೃಷ್ಟಕರ. ರಾಜ್ಯ ಸರಕಾರ ಜಿಲ್ಲೆಯ ಆರೋಗ್ಯ ಸಮಸ್ಯೆಗಳ ಬಗ್ಗೆ ಮಲ ತಾಯಿ ಧೋರಣೆ ನಡೆಸುತ್ತಿದ್ದು ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ 108 ಸೇವೆ ವ್ಯತ್ಯಯವಾಗಿ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. 108 ಸೇವೆಯ ಚಾಲಕರಿಗೆ ಅವೈಜ್ಞಾನಿಕ ಶಿಫ್ಟ್ ವ್ಯವಸ್ಥೆ, ವಾಹನಗಳ ಕಳಪೆ ನಿರ್ವಹಣೆ, ವೇತನ ಬಾಕಿ, ವಸತಿ ಸೌಲಭ್ಯ ಕೊರತೆ ಮುಂತಾದ ಗಂಭೀರ ಸಮಸ್ಯೆಗಳ ಬಗ್ಗೆ ಹಲವು ಬಾರಿ ಪತ್ರ ಬರೆದರೂ ರಾಜ್ಯ ಸರಕಾರ ಪರಿಹಾರ ಕಲ್ಪಿಸಿಲ್ಲ. ಆರೋಗ್ಯಕ್ಕೆ ವಿಶೇಷ ಮಹತ್ವ ನೀಡುವ ಜಿಲ್ಲೆಯಲ್ಲಿ ಇಂತಹ ಘಟನೆಗಳು ವರದಿಯಾಗುತ್ತಿರುವುದು ರಾಜ್ಯ ಸರಕಾರದ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದವರು ಹೇಳಿದ್ದಾರೆ.









