ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
ರಾಜ್ಯ ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ವಿಷಯ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಇದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ರಾಜ್ಯ ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂದು ವಿಧಾನಸಭೆಯಲ್ಲಿ ಸರಕಾರದ ಗಮನ ಸೆಳೆಯಲು ನೋಟಿಸ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ “ಟಿಪ್ಪು ಜಯಂತಿ ಮಾಡಿದ ಬಳಿಕ ಸಿದ್ದು ಸರಕಾರ ಗೋವಿಂದ ಆಯಿತು. ಟಿಪ್ಪು ಬಗ್ಗೆ ಸಿನೆಮಾ ಮಾಡಲು ಹೋಗಿ ಅವನ್ಯಾರೋ ಸುಟ್ಟು ಹೋದ. ಟಿಪ್ಪು ಖಡ್ಗ ತಂದ ಮಲ್ಯ ಲಂಡನ್ ಗೆ ಓಡಿಹೋದ. ಈಗ ಸಿದ್ದು ಸರಕಾರ ಕೆಡವಲು ಕಾಶಪ್ಪನವರ್ ಟಿಪ್ಪು ವಿಚಾರ ತಂದಿದ್ದಾರೆ. ಉತ್ತರ ಕರ್ನಾಟಕಕ್ಕೆ ಸರಕಾರದಿಂದ ಆಗಿರುವ ಅನ್ಯಾಯಗಳ ವಿಚಾರಗಳ ಚರ್ಚೆ ದಿಕ್ಕು ತಪ್ಪಿಸಲು ಟಿಪ್ಪು, ಹೈದರಾಲಿ ವಿಚಾರಗಳನ್ನು ಕಾಂಗ್ರೆಸ್ ನವರು ತರುತ್ತಿದ್ದಾರೆ. ಟಿಪ್ಪು ಸುಲ್ತಾನ್ ಖಡ್ಗದಲ್ಲಿ ಪರ್ಶಿಯನ್ ಭಾಷೆ ಇದೆ. ಸಿದ್ಧರಾಮಯ್ಯ ಹಿಂದೆ ಟಿಪ್ಪು ಜಯಂತಿ ಮಾಡಿದ್ದರು. ಆಗ ಕೊಡಗಿನಲ್ಲಿ ಸಾವು – ನೋವುಗಳಾದವು ಎಂದು ಹೇಳಿದ್ದಾರೆ. ಇನ್ನು ಶಾಸಕ ಬಸವನಗೌಡ ಯತ್ನಾಳ್ ಮಾತನಾಡಿ “ಟಿಪ್ಪು ಸುಲ್ತಾನ್ ಕಾಲದಲ್ಲಿ ಹಿಂದೂಗಳ ನರಮೇಧ ಆಗಿದೆ. ಟಿಪ್ಪು ಜಯಂತಿ ಆಚರಣೆ ಮಾಡಿದ್ದೇ ಈ ಹಿಂದೆ ಸಿದ್ಧರಾಮಯ್ಯ ಸರಕಾರದ ಸೋಲಿಗೆ ಕಾರಣವಾಗಿತ್ತು. ಇದೀಗ ಮತ್ತೆ ಟಿಪ್ಪು ಜಯಂತಿ ಆಚರಣೆಯನ್ನು ರಾಜ್ಯ ಸರಕಾರ ಮಾಡಿದರೆ ಅನಾಹುತ ಗ್ಯಾರಂಟಿ. ಹಿಂದುಗಳಲ್ಲಿರುವ ಮುಸ್ಲಿಂ ತಳಿಗಳು ಇಂತಹ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದೆ ವಿಧಾನಸೌಧದಲ್ಲಿ ಸರಕಾರದಿಂದ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಅದು ಸ್ಥಗಿತ ಆಗಿದೆ ಅಷ್ಟೇ. ಆದರೆ ಟಿಪ್ಪು ಅಭಿಮಾನಿಗಳು ಯಾರೂ ಟಿಪ್ಪು ಆಚರಣೆ ನಿಲ್ಲಿಸಿಲ್ಲ. ಈಗ ಸರಕಾರದ ಮುಂದೆ ಪ್ರಸ್ತಾಪ ಇಲ್ಲ. ಟಿಪ್ಪು ಜಯಂತಿಯನ್ನು ನಾವೆಲ್ಲ ಅಭಿಮಾನಿಗಳು ಮಾಡಿಯೇ ತೀರುತ್ತೇವೆ. ಆದರೆ ಸರಕಾರದಿಂದ ಮಾಡಿ ಅಂತ ನಾನು ಹೇಳುವುದಿಲ್ಲ. ಸದನದಲ್ಲಿ ಚರ್ಚೆಗೆ ಬಂದರೆ ನೋಡೋಣ ಎಂದರು. ಇಂಧನ ಸಚಿವ ಜಾರ್ಜ್ ಮಾತನಾಡಿ, ಟಿಪ್ಪು ಜಯಂತಿ ಆಚರಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ತೀರ್ಮಾನ ತೆಗೆದುಕೊಂಡರೆ ಅದಕ್ಕೆ ನಮ್ಮ ಒಪ್ಪಿಗೆ ಇರುತ್ತದೆ ಎಂದರು.









