ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಅನ್ಯಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದ್ದು, ವಿದೇಶದಿಂದ ಬರುತ್ತಿದ್ದಂತೆ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ತಾಂತ್ರಿಕ ವಿಧಾನದ ಮೂಲಕ ತನಿಖೆ ನಡೆಸಿದಾಗ ಇನ್ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ವ್ಯಕ್ತಿ ಮಂಗಳೂರಿನ ಉಳಾಯಿಬೆಟ್ಟು ಮೂಲದ ಸೌದಿ ಅರೇಬಿಯಾದಲ್ಲಿರುವ ಅಬ್ದುಲ್ ಖಾದರ್ ನೇಹಾದ್ ಎಂದು ತಿಳಿದುಬಂದಿದೆ. ಆತ ಪ್ರಸ್ತುತ ಸಜಿಪಮುನ್ನೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಈ ಆರೋಪಿಯ ವಿರುದ್ಧ ಎಲ್ ಒಸಿ ಹೊರಡಿಸಲಾಗಿತ್ತು.
ಎಲ್ ಒಸಿ ಎಂದರೆ ಒಬ್ಬ ವ್ಯಕ್ತಿ ಅಪರಾಧ ಕೃತ್ಯ ಮಾಡಿ ಬೇರೆ ದೇಶದಲ್ಲಿ ತಲೆಮರೆಸಿಕೊಂಡಿದ್ದರೆ, ಆತ ಒಂದು ದೇಶದಿಂದ ಹೋಗುವಾಗ ಮತ್ತು ಮತ್ತೊಂದು ದೇಶಕ್ಕೆ ಬರುವಾಗ ಆತನ ಚಲನವಲನಗಳ ಬಗ್ಗೆ ಅಧಿಕಾರಿಗಳು ಕಣ್ಣಿಡುತ್ತಾರೆ. ಎಲ್ ಒಸಿಯ ವಿಸ್ತ್ರತ ಅರ್ಥ ಲುಕ್ ಔಟ್ ಸರ್ಕ್ಯೂಲರ್. ಅಂತಹ ಆರೋಪಿ ದೇಶ ಬಿಡುವಾಗ/ಒಳ ಬರುವಾಗ ಪತ್ತೆ ಹಚ್ಚಿ ಅವನನ್ನು ಅಲ್ಲಿಯೇ ಬಂಧಿಸುವ ಅವಕಾಶ ತನಿಖಾ ಸಂಸ್ಥೆಗಳಿಗೆ ಇರುತ್ತದೆ. ಆರೋಪಿ ಅಬ್ದುಲ್ ಖಾದರ್ ನೇಹಾದ್ ಸೌದಿ ಅರೇಬಿಯಾದಿಂದ ಕೇರಳ ರಾಜ್ಯದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಹಿಂದೆಲ್ಲಾ ದೂರದ ವಿದೇಶದಲ್ಲಿ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ದೇವರ, ಧರ್ಮದ ಬಗ್ಗೆ ಕೀಳಾಗಿ ಮಾತನಾಡಿದರೆ ಬಂಧಿಸುವುದು ಕಷ್ಟವಾಗಿತ್ತು. ಇದರಿಂದ ಕೆಟ್ಟ ಕೃತ್ಯ ಮಾಡುವ ವ್ಯಕ್ತಿಗಳಿಗೆ ತಮ್ಮ ದುರುದ್ದೇಶ ಈಡೇರಿಸುವುದು ಸುಲಭವಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.









