ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ ಇಂತಹ ಒಂದು ಸೋಜಿಗ ಸಾಧ್ಯಾನಾ ಎನ್ನುವಂತಹ ಪ್ರಶ್ನೆ ಈಗ ಮತ್ತೆ ಉದ್ಭವಿಸುತ್ತಿದೆ. ಯಾಕೆಂದರೆ ರಾಷ್ಟ್ರಿಯ ಪಕ್ಷವೊಂದರ ರಾಷ್ಟ್ರೀಯ ಕಾರ್ಯಾಧ್ಯಕ್ಷರಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಹುದ್ದೆಯನ್ನು ನೀಡಲು ಸಾಧ್ಯಾನಾ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಇದು ಸಾಧ್ಯ ಎಂದು ಬಿಜೆಪಿ ಹೈಕಮಾಂಡ್ ತೋರಿಸಿಕೊಟ್ಟಿದೆ. ನಿತಿನ್ ನಬೀನ್ ಎನ್ನುವ ವ್ಯಕ್ತಿಯನ್ನು ಬಿಜೆಪಿ ಅಷ್ಟು ದೊಡ್ಡ ಹುದ್ದೆಯಲ್ಲಿ ಕೂರಿಸಿದಾಗ ಭಾರತದ ಬಹುತೇಕ ಬಿಜೆಪಿ ಕಾರ್ಯಕರ್ತರಲ್ಲಿ ಮೂಡಿದ ಪ್ರಶ್ನೆ ಯಾರು ಈ ವ್ಯಕ್ತಿ?
ಯಾಕೆಂದರೆ ರಾಷ್ಟ್ರದ ಯಾವುದೇ ಪ್ರಮುಖ ವಾಹಿನಿಗಳಲ್ಲಿ ನಿತಿನ್ ನಬೀನ್ ಕಾಣಿಸಿಕೊಂಡಿಲ್ಲ. ಒಂದೊಮ್ಮೆ ಕಾಣಿಸಿಕೊಂಡಿದ್ದರೂ ಜನರಿಗೆ ಅವರ ಮುಖ ಪರಿಚಯವೇನಲ್ಲ. ಅವರ ಹೆಸರು ಬಿಹಾರ ಬಿಟ್ಟು ಹೊರಗಿನ ವ್ಯಕ್ತಿಗಳ ಬಾಯಲ್ಲಿ ಸರಾಗವಾಗಿ ಬಂದಿರಲಿಲ್ಲ. ಹಾಗಿರುವಾಗ ಅವರನ್ನು ಯಾಕೆ ಮತ್ತು ಹೇಗೆ ಅಷ್ಟು ದೊಡ್ಡ ಜವಾಬ್ದಾರಿಗೆ ನಿಯೋಜಿಸಲಾಗಿತ್ತು ಎನ್ನುವ ಪ್ರಶ್ನೆ ರಾಜಕೀಯ ಪಂಡಿತರ ತಲೆ ತಿನ್ನುತ್ತಿದೆ. ಎಲ್ಲವೂ ಸರಿಯಾದ್ರೆ ಮುಂದಿನ ವರ್ಷ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಹಾಗಾದರೆ ನಿತಿನ್ ನಬೀನ್ ವಯಸ್ಸೆಷ್ಟು?
1980 ರ ಮೇ 23 ರಂದು ಬಿಹಾರ ರಾಜಧಾನಿ ಪಟ್ನಾದಲ್ಲಿ ಜನಿಸಿದ ನಿತಿನ್ ನಬೀನ್ ಅವರ ತಂದೆ ಶಾಸಕರಾಗಿದ್ದಾಗಲೇ ನಿಧನ ಹೊಂದಿದ್ದ ಕಾರಣ 26 ನೇ ವಯಸ್ಸಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿ ಉಪಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದರು. ಅಲ್ಲಿಂದ ಸತತ ಐದು ಬಾರಿ ಅವರು ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಅಷ್ಟಕ್ಕೂ ಬಿಜೆಪಿಯ ಬೈಲಾದಲ್ಲಿ ಈ ಕಾರ್ಯಾಧ್ಯಕ್ಷ ಎನ್ನುವ ಸ್ಥಾನ ಇದೆಯಾ? ಇಲ್ಲ. ಆದರೆ 2019 ರಲ್ಲಿ ಜೆಪಿ ನಡ್ಡಾ ಅವರು ಪೂರ್ಣ ಪ್ರಮಾಣದಲ್ಲಿ ಅಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸುವ ಮೊದಲು ಆರು ತಿಂಗಳು ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ನಡ್ಡಾ ಕಾರ್ಯಾಧ್ಯಕ್ಷರಾಗಿರುವ ಅಮಿತ್ ಶಾ ಅಧ್ಯಕ್ಷರಾಗಿದ್ದರು. ಅವರ ಕೈಕೆಳಗೆ ಕೆಲಸ ಮಾಡಿ ಅನುಭವ ಪಡೆದುಕೊಂಡ ನಡ್ಡಾ ನಂತರ ಆರು ತಿಂಗಳೊಳಗೆ ಅಧ್ಯಕ್ಷರಾಗಿದ್ದರು. ಅದರ ಬಳಿಕ ಆರು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಹಾಗಾದರೆ ನಿತಿನ್ ನಬೀನ್ ಈಗ ಕಾರ್ಯಾಧ್ಯಕ್ಷರಾಗಿರುವುದು ಅದೇ ಸಂಕೇತವೇ? ನಾಳೆಯಿಂದ ಖಾರ್ ಮಾಸ್ ಶುರುವಾಗಲಿದೆ. ಅದು ಜನವರಿ 14 ರಂದು ಮಕರ ಸಂಕ್ರಾತಿಯ ದಿನದ ತನಕ ಇರುತ್ತದೆ. ಈ ಒಂದು ತಿಂಗಳಲ್ಲಿ ಯಾವುದೇ ಶುಭ ಘಟನೆಗಳು ನಡೆಯುವುದಿಲ್ಲ. ಆದ್ದರಿಂದ ಈಗ ಒಂದು ತಿಂಗಳು ನಡ್ಡಾ ಅವರಿಂದ ಎಲ್ಲಾ ಕೆಲಸಗಳನ್ನು ಅರಿತು ವಹಿಸಿಕೊಳ್ಳುವ ಸಮಯ ನಿತಿನ್ ನಬೀನ್ ಅವರಿಗೆ ಸಿಗಲಿದೆ. ಇದರ ಬಳಿಕ ಅವರನ್ನೇ ಪೂರ್ಣ ಪ್ರಮಾಣದಲ್ಲಿ ಅಧ್ಯಕ್ಷ ಎಂದು ಘೋಷಿಸುವ ಸಾಧ್ಯತೆಗಳನ್ನು ಕೂಡ ತಳ್ಳಿ ಹಾಕುವಂತಿಲ್ಲ.
ಒಂದು ವೇಳೆ ನಿತಿನ್ ನಬೀನ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರೆ ಬಿಜೆಪಿಯ ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರೀಯ ಅಧ್ಯಕ್ಷರು ಎನ್ನುವ ಹಿರಿಮೆ ದೊರೆಯಲಿದೆ. ಯಾಕೆಂದರೆ ಇಲ್ಲಿಯ ತನಕ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅಧ್ಯಕ್ಷರಾಗಿರುವ ಖ್ಯಾತಿ ನಿತಿನ್ ಗಡ್ಕರಿ ಅವರ ಹೆಸರಿನಲ್ಲಿದೆ. ಅವರು ಅಧ್ಯಕ್ಷರಾಗುವಾಗ ಅವರ ವಯಸ್ಸು 52. ಈಗಾಗಲೇ ಛತ್ತೀಸ್ ಘಡ ಹಾಗೂ ಸಿಕ್ಕಿಮ್ ಬಿಜೆಪಿ ಉಸ್ತುವಾರಿಯಾಗಿ ಕೆಲಸ ಮಾಡಿರುವ ನಿತಿನ್ ನಬೀನ್ ಅವರಿಗೆ ಈ ಪಟ್ಟ ದೊರಕಿರುವುದರ ಹಿಂದೆ ಅವರ ಇಪ್ಪತ್ತು ವರ್ಷಗಳ ಅವಿರತ ಶ್ರಮವಿರುವುದನ್ನು ಮರೆಯುವಂತಿಲ್ಲ.









