ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ಶಿಕ್ಷಣ ತಜ್ಞ, ಐವತ್ತು ವರ್ಷಗಳ ಹಿಂದೆಯೇ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ಉದ್ಯಮ ಕಟ್ಟಿ ಬೆಳೆಸಿದ್ದ ಡಾ.ಎನ್. ವಿನಯ ಹೆಗ್ಡೆ (86) ಇನ್ನಿಲ್ಲ. ಜನವರಿ ಒಂದರ ಗುರುವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಮಂಗಳೂರು ಕದ್ರಿಯ ಶಿವಭಾಗ್ ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರರಾಗಿದ್ದ ಅವರು 1939, ಎಪ್ರಿಲ್ 3ರಂದು ಜನಿಸಿದ್ದರು. ಮಂಗಳೂರಿನ ಸೈಂಟ್ ಅಲೋಶಿಯಸ್ ಆರಂಭಿಕ ಶಿಕ್ಷಣ, ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಬಿಎಸ್ಸಿ ಪೂರೈಸಿದ್ದರು. ಕಿರಿಯ ಸೋದರ ಸಂತೋಷ್ ಹೆಗ್ಡೆ ತಂದೆಯಂತೆ ವಕೀಲ ವೃತ್ತಿ ಕಲಿತು ಮುಂದುವರಿದರೆ, ವಿನಯ ಹೆಗ್ಡೆಯವರು ಊರಿನಲ್ಲಿದ್ದೇ ಸಾಧನೆ ಮಾಡಬೇಕೆಂದು ನಿಶ್ಚಯ ಮಾಡಿದ್ದರು. ಅದರಂತೆ, 1975ರಲ್ಲಿ ಲೆಮಿನಾ ಸಸ್ಪೆನ್ನನ್ ಪ್ರೈವೇಟ್ ಲಿಮಿಟೆಡ್ ಹೆಸರಲ್ಲಿ ಕೈಗಾರಿಕಾ ಕೇಂದ್ರ ಹುಟ್ಟುಹಾಕಿದ್ದರು. ಲೆಮಿನಾ ಸಂಸ್ಥೆಯು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆಯಲ್ಲಿ ಹೆಸರಾಗಿದ್ದು ಯುರೋಪ್ ಸೇರಿದಂತೆ ಹಲವು ದೇಶಗಳಿಗೆ ಬಿಡಿ ಭಾಗಗಳನ್ನು ತಯಾರಿಸಿ ರಫ್ತು ಮಾಡುತ್ತದೆ. ಇದರ ವಹಿವಾಟು ಹತ್ತು ವರ್ಷಗಳ ಹಿಂದೆಯೇ ಶತಕೋಟಿಯನ್ನು ಮೀರಿತ್ತು. ಸಂಸ್ಥೆಯಲ್ಲಿ ಸಾವಿರಾರು ಜನರಿಗೆ ಉದ್ಯೋಗವನ್ನೂ ಕೊಟ್ಟಿದ್ದಾರೆ.
ಇದರ ಜೊತೆಗೆ, ತಮ್ಮ ತಂದೆಯವರ ಆಶಯದಂತೆ ಹುಟ್ಟೂರು ಕಾರ್ಕಳದ ನಿಟ್ಟೆ ಎನ್ನುವ ಕುಗ್ರಾಮದಲ್ಲಿ 1979ರಲ್ಲಿ ಶಾಲೆ, ಕಾಲೇಜುಗಳನ್ನು ಕಟ್ಟಿದ್ದರು. ಒಂದೆಡೆ ಕೈಗಾರಿಕೆ ಇನ್ನೊಂದೆಡೆ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಅಪರೂಪದ ವ್ಯಕ್ತಿ ವಿನಯ ಹೆಗ್ಡೆ. ನಿಟ್ಟೆ ಎಜುಕೇಶನ್ ಟ್ರಸ್ಟ್ ಹೆಸರಲ್ಲಿ ಈಗ ಮಂಗಳೂರು ಮತ್ತು ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಿವೆ. ಇದರಲ್ಲಿ ಕೆಳಹಂತದ ಶಾಲೆಯಿಂದ ಹಿಡಿದು ಉನ್ನತ ಶಿಕ್ಷಣದ ವರೆಗೂ ವಿವಿಧ ಮಾದರಿಯ ಸಂಸ್ಥೆಗಳಿವೆ. ಪಾಲಿಟೆಕ್ನಿಕ್, ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ ಮತ್ತು ಹೊಟೇಲ್ ಮ್ಯಾನೇಜ್‌ಮೆಂಟ್ ಕಾಲೇಜುಗಳು ಹಲವಾರಿವೆ. ತಂದೆ ಕೆಎಸ್ ಹೆಗ್ಡೆ ಹೆಸರಿನಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಿ ಮೆಡಿಕಲ್ ಕಾಲೇಜುಗಳ ಮೂಲಕ ಶಿಕ್ಷಣ, ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆಗಳನ್ನು ನೀಡುತ್ತ ಬಂದಿದ್ದು ವಿನಯ ಹೆಗ್ಡೆಯವರ ಹೆಗ್ಗಳಿಕೆ. ಪ್ರಸ್ತುತ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದರು. ವಯಸ್ಸು ಮೀರಿದ್ದರೂ ಹತ್ತು ಹಲವು ಸಂಸ್ಥೆಗಳನ್ನು ಮುನ್ನಡೆಸುತ್ತ ಲವಲವಿಕೆಯಲ್ಲಿದ್ದ ಹೆಗ್ಡೆಯವರು ಆರೋಗ್ಯ ವಿಚಾರದಲ್ಲಿ ಅಪರಿಮಿತ ಶಿಸ್ತು, ಕಾಳಜಿ ಹೊಂದಿದ್ದರು.
ಇದಲ್ಲದೆ, ರಾಜ್ಯದ ಹಲವು ಶಿಕ್ಷಣ ಸಂಬಂಧಿಸಿದ ಸಮಿತಿಗಳಲ್ಲಿ ಮತ್ತು ಕೈಗಾರಿಕಾ ಒಕ್ಕೂಟಗಳಲ್ಲಿ ತೊಡಗಿಸಿದ್ದರು. ಸೇವಾ ಚಟುವಟಿಕೆಗಳಿಗಾಗಿ ಕೊಡುಗೈ ದಾನಿಯೂ ಆಗಿದ್ದ ಅವರು, ಯಾವುದೇ ರೀತಿಯ ಸಹಾಯ ಕೇಳಿ ಬಂದವರಿಗೆ ಇಲ್ಲ ಎಂದವರಲ್ಲ. ಅವರ ಈ ಗುಣವೇ ವಿನಯ ಹೆಗ್ಡೆಯವರನ್ನು ಸಮಾಜದ ಎಲ್ಲ ಕಡೆಯೂ ಗುರುತಿಸಿಕೊಂಡು ಹೆಮ್ಮರವಾಗುವಂತೆ ಮಾಡಿತ್ತು. ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅವರಿಗೆ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿತ್ತು.
ವಿನಯ್ ಹೆಗ್ಡೆ ಅವರು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಹಿರಿಯ ಸೋದರನಾಗಿದ್ದು, ಪತ್ನಿ, ಪುತ್ರ, ಪುತ್ರಿ ಸೇರಿ ಅಪಾರ ಅಭಿಮಾನಿ ಬಳಗನ್ನು ಅಗಲಿದ್ದಾರೆ. ಹೆಗ್ಡೆ ಅವರ ಪಾರ್ಥಿವ ಶರೀರವನ್ನು ಮಂಗಳೂರಿನ ಕದ್ರಿ ಶಿವಭಾಗ್ ನ ಅವರ ಸ್ವಗೃಹದಲ್ಲಿ ಇಂದು ಬೆಳಗ್ಗೆ 8.30 ರಿಂದ ಅಪರಾಹ್ನ 3 ಗಂಟೆಯ ತನಕ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು. ಸಂಜೆ 4.30ರಿಂದ 6 ರ ತನಕ ನಿಟ್ಟೆ ಕ್ಯಾಂಪಸ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಬಳಿಕ ಸಂಜೆ 6 ಗಂಟೆಗೆ ಕಾರ್ಕಳದ ನಿಟ್ಟೆಯಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮಾಹಿತಿ ತಿಳಿಸಿದೆ.









