ಕಾಂಗ್ರೆಸ್ ಹೆದರಿದೆ, ಇಲ್ಲದಿದ್ದರೆ ಹೀಗೆ ತಗಾದೆ ಮಾಡುತ್ತಿರಲಿಲ್ಲ!
ಸುಮ್ಮನೆ ಬೈಕ್ rallyಗೆ ಅನುಮತಿ ಕೊಟ್ಟು ಬಿಟ್ಟಿದ್ದರೆ ಬಿಜೆಪಿ ಅದರ ಪಾಡಿಗೆ ಅದು ಏನಾದರೂ ಮಾಡಿಕೊಂಡು ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಿತ್ತು. ಆದರೆ ಬೈಕ್ rally ಎಂದ ಕೂಡಲೇ ಇದನ್ನು ಹಾಗೆ ಬಿಟ್ಟರೆ ಯುವ ಜನತೆ ಇದರತ್ತ ಆಕರ್ಷಿತರಾದರೆ ಏನು ಗತಿ ಎಂದು ಹೆದರಿದ ಕಾಂಗ್ರೆಸ್ ಪಕ್ಷದ ಮುಖಂಡರು “ಏ ಬೈಕ್ rallyಗೆ ಅವಕಾಶ ಇಲ್ಲ” ಎಂದು ಹೇಳಿಕೆ ಕೊಡಲು ಆರಂಭಿಸಿದರು. ಯಾವಾಗಲೂ ಆಡಳಿತ ಪಕ್ಷ ಏನು ಹೇಳುತ್ತದೆಯೋ ಅದನ್ನೇ ಪೊಲೀಸ್ ಇಲಾಖೆ ಮಾಡುತ್ತದೆ. ಕಳೆದ ಬಾರಿ ಬೇಕಾದರೆ ನೆನಪು ಮಾಡಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಬಂದು ಎಡಪಂಥಿಯರಿಗೆ ಟಾನಿಕ್ ಕೊಟ್ಟು ಹೋಗುತ್ತೇನೆ ಎಂದಾಗ ಇಡೀ ಬರಬೇಡಾ ಎಂದರೆ ಅತಿಥಿ ದೇವೋಭವಕ್ಕೆ ನಾವು ಅಪಚಾರ ಮಾಡಿದಂತೆ ” ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಇದು ಕೂಡ ಪೊಲೀಸ್ ಇಲಾಖೆಗೆ ಏನು ಮಾಡಬೇಕು ಎನ್ನುವ ಸೂಚನೆ. ಇದು ಯಾವ ಸರಕಾರವೇ ಇರಲಿ, ಪೊಲೀಸ್ ಇಲಾಖೆ ಸಿಎಂ, ಗೃಹ ಸಚಿವರ ಮನಸ್ಥಿತಿಯ ಮೇಲೆನೆ ಕೆಲಸ ಮಾಡುವುದು. ಈಗ ಯುಟಿ ಖಾದರ್ ಅವರನ್ನು ಕೇಳಿದರೆ ಅದು ಪೊಲೀಸ್ ಇಲಾಖೆಯ ಕೆಲಸ ಎನ್ನುತ್ತಾರೆ. ಅಂದರೆ ಕಾಂಗ್ರೆಸ್ ತನಗೆ ಬೇಕಾದ ರೀತಿಯಲ್ಲಿ ಹೋರಾಟಗಳನ್ನು ಹತ್ತಿಕ್ಕುವ, ಬೇಡವಾದಾಗ ಅವಕಾಶ ಮಾಡಿಕೊಡುವ ಮೂಲಕ ಪ್ರಜಾಸತ್ತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎನ್ನುವುದರಲ್ಲಿ ಸಂಶಯ ಉಳಿದಿಲ್ಲ.
ಇವತ್ತು ಇವರು ಬೈಕ್ rallyಗೆ ಅವಕಾಶ ಮಾಡಿಕೊಡದೇ ಇರಲು ಕಾರಣ ಇವರೇ ಹೇಳುವ ಮೂಲಕ ಟ್ರಾಫಿಕಿಗೆ ತೊಂದರೆಯಾಗುತ್ತದೆ, ಜನಸಂಚಾರಕ್ಕೆ ಅಡಚಣೆಯಾಗುತ್ತದೆ, ಟ್ರಾಫಿಕ್ ಜಾಮ್ ಆಗುತ್ತದೆ, ನಾಗರಿಕರಿಗೆ ತೊಂದರೆಯಾಗುತ್ತದೆ. ಹಾಗಾದರೆ ಇವತ್ತು ಆದದ್ದೇನು? ಪೊಲೀಸ್ ಕಮೀಷನರ್ ಅವರೇ ನೀವು ಬೈಕ್ rallyಗೆ ಅನುಮತಿ ಕೊಟ್ಟಿಲ್ಲ, ಟ್ರಾಫಿಕ್ ಜಾಮ್ ಆಗುವುದು ತಪ್ಪಿತಾ? ಜ್ಯೋತಿಯಿಂದ ಬೈಕ್ ರ್ಯಾಲಿಗೆ ಅವಕಾಶ ಕೊಡದೇ ಇದ್ದ ಕಾರಣ ಬಿಜೆಪಿ ಮುಖಂಡರು ಅಲ್ಲಿಯೇ ನಿಂತು ಒಂದೂವರೆ ಗಂಟೆ ಭಾಷಣ ಮಾಡಿದರು. ಅದರಿಂದ ಜ್ಯೋತಿ ವೃತ್ತದ ಆಚೆ ಈಚೆ ಇರುವ ಶಾಲೆ, ಕಾಲೇಜು, ಆಸ್ಪತ್ರೆ, ಬ್ಯಾಂಕುಗಳು, ವಾಣಿಜ್ಯ ಕಟ್ಟಡಗಳಿಗೆ ಹೋಗಿ ಬರುವ ಜನರಿಗೆ ತೊಂದರೆಯಾಗಿಲ್ವಾ? ಬೆಳಿಗ್ಗೆ 8 ಗಂಟೆಯಿಂದಲೇ ಅಲ್ಲಿ ಸಾವಿರ ಪೊಲೀಸರನ್ನು, ರ್ಯಾಪಿಡ್ ಆಕ್ಷನ್ ಫೋರ್ಸ್ ಅನ್ನು ಜ್ಯೋತಿ ವೃತ್ತದ ಪ್ರದೇಶದಲ್ಲಿ ನಿಯೋಜನೆ ಮಾಡಿದ್ದಿರಿ. ಆದರೆ ಅಲ್ಲಿ ಎಷ್ಟು ಜನ ಟ್ರಾಫಿಕ್ ಪೊಲೀಸ್ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ನಿಯೋಜಿಸಿದ್ದಿರಿ. ಯಾರೂ ಇಲ್ಲ. ಪೊಲೀಸರು ಸುಮ್ಮನೆ ಮೂಕಪ್ರೇಕ್ಷಕರಂತೆ ನಿಂತಿದ್ದರು. ಟ್ರಾಫಿಕ್ ವ್ಯವಸ್ಥೆ ಮಾಡುವವರು ಇಲ್ಲದೆ ಜನ ಸೇರುತ್ತಲೆ ಇದ್ದರು. ಹಾಗಾದರೆ ಅದು ನಿಮ್ಮ ವೈಫಲ್ಯ ಅಲ್ವಾ? ಹಾಗಾದರೆ ಪೊಲೀಸ್ ಇಲಾಖೆ ಬಿಜೆಪಿಗೆ ಜ್ಯೋತಿ ವೃತ್ತದ ಬಳಿ ಗಂಟೆಗಟ್ಟಲೆ ಪ್ರತಿಭಟನೆ ಮಾಡಲು ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಿತು ಎಂದು ಅಂದುಕೊಳ್ಳಬೇಕಾ? ಹಾವು ಸಾಯಬೇಕು, ಕೋಲು ಮುರಿಯಬಾರದು ಎನ್ನುವ ಸಿದ್ಧಾಂತವಾ?
ನಿಜ ಹೇಳಬೇಕೆಂದರೆ ಮಂಗಳೂರು ಪೊಲೀಸರು ಎಂತಹುದೇ ಕಠಿಣ ಪರಿಸ್ಥಿತಿಯನ್ನು ಕೂಡ ನಿಭಾಯಿಸಬಲ್ಲರು ಎನ್ನುವ ವಿಶ್ವಾಸ ನನಗಿದೆ. ಅದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೂ ಗೊತ್ತಿದೆ. ಇಲ್ಲದಿದ್ದರೆ ಏನೋ ಅನಾಹುತ ಆಗಿಬಿಡುತ್ತೆ, ಪಿಣರಾಯಿ ವಿಜಯನ್ ನಮ್ಮ ಮಂಗಳೂರಿಗೆ ಕಾಲಿಟ್ಟರೆ ಎನ್ನುವಂತಹ ವಾತಾವರಣ ಕ್ರಿಯೇಟ್ ಆದಾಗ ಒಂದೇ ಒಂದು ಚಾಕು, ಚೂರಿ ಹೊರಗೆ ಬರದಂತೆ ಅದನ್ನು ನಿಭಾಯಿಸಿದವರು ನಮ್ಮದೆ ಪೊಲೀಸರಲ್ವಾ? ಹಾಗಿದ್ದರೆ ಬೈಕ್ rallyಗೆ ಅವಕಾಶ ಕೊಟ್ಟಿದ್ದರೆ ಏನು ಆಗುತ್ತಿರಲಿಲ್ಲ. ಅವರು ಬಿಜೆಪಿಯವರು ಅವರಷ್ಟಕ್ಕೆ ಏನೋ ಮಾಡುತ್ತಿದ್ದರು. ಜನ ಅದನ್ನು ನೋಡಿ ಏನು ಅಂದುಕೊಳ್ಳಬೇಕೋ ಅದನ್ನು ಅಂದುಕೊಳ್ಳುತ್ತಿದ್ದರು.
ಅವಕಾಶ ಕೊಡದೇ ಇದ್ದ ಕಾರಣ ಮನೆಯಲ್ಲಿ ಕುಳಿತು ರಾಜಕಾರಣವನ್ನು ಸೂಕ್ಷ್ಮವಾಗಿ ನೋಡುತ್ತಿರುವವರಿಗೆ ಒಂದು ವಿಷಯ ಗ್ಯಾರಂಟಿಯಾಯಿತು. ಕಾಂಗ್ರೆಸ್ ಹೆದರಿದೆ. ಇಲ್ಲದಿದ್ದರೆ ಹೀಗೆ ತಗಾದೆ ಮಾಡುತ್ತಿರಲಿಲ್ಲ. ಈ ಸಂದೇಶ ಹೋಗಿ ಆಗಿದೆ. ಇನ್ನು ಬೇರೆ ಬೇರೆ ಜಿಲ್ಲೆಗಳಿಂದ ಬರುತ್ತಿದ್ದ ಬೈಕ್ ಗಳನ್ನು ಅಲ್ಲಲ್ಲಿ ನಿಲ್ಲಿಸಿದ ಕಾರಣ ಆಯಾ ಊರಿನವರಿಗೆ ಸಂದೇಶ ಹೋಗಿ ಬಿಡ್ತು. ಸಿದ್ಧರಾಮಯ್ಯನವರಿಗೆ ಬಿಜೆಪಿಯವರ ಹೋರಾಟದಿಂದ ಭಯ ಶುರುವಾಗಿದೆ. ನಿಜವಾಗಿಯೂ ಭಯ ಶುರುವಾಗಿದೆಯೋ ಇಲ್ವೋ, ಅದು ಬೇರೆ ವಿಷಯ. ಆದರೆ ಯಾವಾಗಲೂ ಒಂದು ನೀರು ತನ್ನ ಪಾಡಿಗೆ ತಾನು ಹರಿದು ಹೋಗುತ್ತಿದ್ದರೆ ಆಗ ಅಲ್ಲಿ ತೊಂದರೆ ಇರುವುದಿಲ್ಲ. ಅದೇ ಅದಕ್ಕೆ ಮಧ್ಯದಲ್ಲಿ ಎಲ್ಲೋ ತಡೆ ಮಾಡಿ ನೋಡಿ, ನೀರು ಅಲ್ಲಿ ಬ್ಲಾಕ್ ಆಗಿ ಬಿಡುತ್ತದೆ. ಸಿದ್ಧರಾಮಯ್ಯನವರಿಗೆ ಬಹುಶ: ಯಾರು ಈ ಐಡಿಯಾ ಕೊಟ್ಟರೋ ಏನೋ, ಹತ್ತರಲ್ಲಿ ಹನ್ನೊಂದು ಆಗುತ್ತಿದ್ದ ಪ್ರತಿಭಟನೆಯೊಂದನ್ನು ಇಡೀ ರಾಜ್ಯದ ಜನರಿಗೆ “ಕಾಂಗ್ರೆಸ್ ಹೆದರಿದೆ” ಎನ್ನುವ ಸಂದೇಶ ಕೊಡುವ ಮೂಲಕ ಸಿದ್ಧರಾಮಯ್ಯ ತಾವೇ ಕಾಂಗ್ರೆಸ್ಸನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿಬಿಟ್ಟಿದ್ದಾರೆ!
Leave A Reply